ಬೆಂಗಳೂರು: ಪ್ರಮುಖ ಡಿಜಿಟಲ್ ವರ್ಕ್ಫ್ಲೋ ಕಂಪನಿಯಾದ ಸರ್ವಿಸ್ನೌ, ಇಂದು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯೊಂದಿಗೆ(ಎಐಸಿಟಿಇ) ತಿಳುವಳಿಕೆ(ಎಂಓಯು) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆ ಪ್ರಕಾರ ಮೊದಲ ವರ್ಷ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ವಿಸ್ನೌ ಪ್ಲಾಟ್ಫಾರ್ಮ್ನಲ್ಲಿ ಕೌಶಲ್ಯ ಒದಗಿಸುವ ಗುರಿಯನ್ನು ಹೊಂದಿದೆ. ಇದು ಮೂರು ವರ್ಷಗಳಲ್ಲಿ 25,000 ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡುವ ಉದ್ದೇಶ ಹೊಂದಿರುವ ಪಾಲುದಾರಿಕೆಯ ಮೊದಲ ಹಂತವಾಗಿದೆ.
ಈ ಸಹಯೋಗವು ವಿದ್ಯಾರ್ಥಿಗಳಿಗೆ ಜಾಗತಿಕ ಮತ್ತು ಕೇಂದ್ರೀಕೃತ ಕಲಿಕೆಯನ್ನು ನೀಡುತ್ತದೆ. ಭವಿಷ್ಯಕ್ಕೆ ತಯಾರಿರುವಂತಹ ಕೌಶಲ್ಯಗಳನ್ನು, ಸಾಮರ್ಥ್ಯಗಳನ್ನು ಒದಗಿಸುತ್ತದೆ. ಈ ಪ್ಲಾಟ್ಫಾರ್ಮ್ನಲ್ಲಿ ಸರ್ವಿಸ್ನೌ ಅಡ್ಮಿನಿಸ್ಟ್ರೇಟರ್ ಮತ್ತು ಡೆವಲಪರ್ ಕೋರ್ಸ್ಗಳನ್ನು ಒದಗಿಸುವ ಮೂಲಕ ಅತ್ಯುನ್ನತ ಶಿಕ್ಷಣ ಮಾರ್ಗವನ್ನು ತಿಳಿಸಲಾಗುತ್ತದೆ. ಮುಖ್ಯವಾಗಿ, ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನಗಳನ್ನು ಪರಿಚಯಿಸಲಾಗುವುದು, ಎಲ್ಲಾ ಉದ್ಯೋಗಿಗಳಿಗೆ ಅಗತ್ಯವಿರುವ ಮೌಲ್ಯಯುತ ಒಳನೋಟಗಳನ್ನು ಒದಗಿಸಲಾಗುತ್ತದೆ. ಇದು ಡಿಜಿಟಲ್ ವೃತ್ತಿ ಮಾರ್ಗ ಆರಿಸಿಕೊಳ್ಳುವವರಿಗೆ ನಿರ್ದಿಷ್ಟ ಕೌಶಲ್ಯಗಳನ್ನು ನೀಡುವ ಮೂಲಕ ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಯನ್ನು ಸಾಧ್ಯವಾಗಿಸುವ ಎಐಸಿಟಿಇಯ ದೃಷ್ಟಿಗೆ ಅನುಗುಣವಾಗಿದೆ.
ಸರ್ವಿಸ್ನೌ ಮತ್ತು ಪಿಯರ್ಸನ್ ನ ಇತ್ತೀಚಿನ ಸಂಶೋಧನೆಯ ಪ್ರಕಾರ, ಕೃತಕ ಬುದ್ಧಿಮತ್ತೆ ಮತ್ತು ಅಟೋಮೇಶನ್ ಕ್ಷೇತ್ರಕ್ಕೆ ಹೊಂದಿಕೊಳ್ಳಲು ಭಾರತದ 16.2 ಮಿಲಿಯನ್ (ಅಂದಾಜು. 1.6 ಕೋಟಿ) ಕಾರ್ಮಿಕರು ಮರುಕೌಶಲ್ಯ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಅಗತ್ಯವಿರುತ್ತದೆ. ಜೊತೆಗೆ ತಂತ್ರಜ್ಞಾನ ವಲಯದಲ್ಲಿ 4.7 ಮಿಲಿಯನ್ ಹೊಸ ಉದ್ಯೋಗಗಳನ್ನು ಆ ಕ್ಷೇತ್ರಗಳು ಸೃಷ್ಟಿಸುತ್ತದೆ. ಆದ್ದರಿಂದ, ಡಿಜಿಟಲ್ ಯುಗದಲ್ಲಿ ವೃತ್ತಿಪರ ಬೆಳವಣಿಗೆಯನ್ನು ಸಾಧಿಸಲು ಮತ್ತು ಅಭಿವೃದ್ಧಿ ಹೊಂದಲು ಕೈಗಾರಿಕೆಗಳಾದ್ಯಂತ ಡಿಜಿಟಲ್ ಅಪ್ ಸ್ಕಿಲಿಂಗ್ ಮತ್ತು ಮರುಕೌಶಲ್ಯ ಗಳಿಸುವುದು ಅತ್ಯಗತ್ಯವಾಗಿದೆ.
ದೆಹಲಿಯಲ್ಲಿ ನಡೆದ ಎಐಸಿಟಿಇ ನಾಯಕತ್ವದ ಸಭೆಯಲ್ಲಿ ಸರ್ವಿಸ್ನೌನ ಸ್ಟ್ರಾಟೆಜಿ ಆಂಡ್ ಕಾರ್ಪೋರೇಟ್ ಅಫೇರ್ಸ್ ಆಫೀಸರ್ ನಿಕ್ ಝಿಟ್ಝೋನ್, “ಇಂದಿನ ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯಗಳನ್ನು ನೀಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಎಐಸಿಟಿಇ ಜೊತೆ ಪಾಲುದಾರಿಕೆ ಮಾಡಲು ಸರ್ವಿಸ್ನೌ ಉತ್ಸುಕವಾಗಿದೆ. ಸರ್ವೀಸ್ ನೌ ಡಿಜಿಟಲ್ ರೂಪಾಂತರಕ್ಕೆ ವಿದ್ಯಾರ್ಥಿಗಳ ರೂಪಾಂತರ ಅಗತ್ಯವಿದೆ ಎಂದು ನಂಬುತ್ತದೆ ಮತ್ತು ರೈಸ್ಅಪ್ ವಿತ್ ಸರ್ವಿಸ್ನೌ ಕಾರ್ಯಕ್ರಮವು ಯುವ ಇಂಜಿನಿಯರ್ಗಳನ್ನು ಉದ್ಯೋಗ-ಸಿದ್ಧ ಸಾಮರ್ಥ್ಯಗಳನ್ನು ಹೊಂದಲು ವಿನ್ಯಾಸಗೊಳಿಸಲಾಗಿದೆ. ಈ ಎಂಓಯು ಭಾರತದಲ್ಲಿರುವ ಎಐಸಿಟಿಇ ಸಂಯೋಜಿತ ಸಂಸ್ಥೆಗಳಲ್ಲಿ ಅರ್ಹ ಪ್ರತಿಭೆಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ, ಅದರಿಂದ ಭಾರತದಲ್ಲಿ ಮುಂದಿನ ತಂತ್ರಜ್ಞಾನದ ಆವಿಷ್ಕಾರಕ್ಕೆ ಚಾಲನೆ ಸಿಗಲಿದೆ” ಎಂದು ಹೇಳಿದರು.
ಎಐಸಿಟಿಇ ಚೇರ್ಮನ್ ಪ್ರೊ. (ಡಾ) ಟಿ ಜಿ ಸೀತಾರಾಮ್, “ವಿಕಸನಗೊಳ್ಳುತ್ತಿರುವ ಜಗತ್ತಿಗೆ ನಮ್ಮ ವಿದ್ಯಾರ್ಥಿಗಳು ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಅವರಿಗೆ ಆಧುನಿಕ ಕೌಶಲ್ಯಗಳನ್ನು ಮತ್ತು ವೃತ್ತಿಪರ ಬೆಳವಣಿಗೆಯ ಅವಕಾಶಗಳಿಗೆ ಹೆಚ್ಚಿನ ಪ್ರವೇಶಾವಕಾಶವನ್ನು ಒದಗಿಸುವ ಅಗತ್ಯವಿದೆ. ಸರ್ವೀಸ್ ನೌ ಜೊತೆಗಿನ ನಮ್ಮ ಸಹಯೋಗವು ವಿದ್ಯಾರ್ಥಿಗಳಿಗೆ ನವೀನ ಪರಿಕಲ್ಪನೆಗಳು ಮತ್ತು ತಂತ್ರಗಳಲ್ಲಿ ಸುಧಾರಿತ ತರಬೇತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನ್ವೇಷಿಸಲು ಪ್ರೇರಣೆ ನೀಡುತ್ತದೆ. ಈ ಪಾಲುದಾರಿಕೆಯು ವಿದ್ಯಾರ್ಥಿಗಳ ಉನ್ನತ ಕೌಶಲ್ಯ ಮತ್ತು ತಾಂತ್ರಿಕ ಸಾಕ್ಷರತೆಯೆಡೆಗಿನ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ, ಇದು ಅವರ ಭವಿಷ್ಯದ ಯಶಸ್ಸಿಗೆ ಅವಶ್ಯಕವಾಗಿದೆ” ಎಂದು ಹೇಳಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯ ಮುಖ್ಯ ಸಮನ್ವಯ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಚಂದ್ರಶೇಖರ್ ಬುದ್ಧ ಮಾತನಾಡಿ, “ಬದಲಾಗುತ್ತಿರುವ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಮುಖ್ಯವಾಗಿದೆ. ಸಮಕಾಲೀನ ಕೌಶಲ್ಯಗಳನ್ನು ಒದಗಿಸುವುದು ಮತ್ತು ವೃತ್ತಿಪರ ಅಭಿವೃದ್ಧಿ ಹೊಂದುವಂತೆ ಮಾಡುವುದು ಅಗತ್ಯವಾಗಿದೆ. ಸರ್ವೀಸ್ ನೌ ಜೊತೆಗಿನ ಸಹಭಾಗಿತ್ವದಲ್ಲಿ, ನಾವು ವಿದ್ಯಾರ್ಥಿಗಳಿಗೆ ಇತ್ತೀಚಿನ ನವೀನ ಚಿಂತನೆ ಮತ್ತು ತಂತ್ರಜ್ಞಾನ ಒದಗಿಸುವ ಮೂಲಕ ಸಜ್ಜುಗೊಳಿಸಲಿದ್ದೇವೆ. ಹೊಸ ತಂತ್ರಜ್ಞಾನಗಳೊಂದಿಗೆ ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತೇವೆ. ಈ ಸಹಯೋಗವು ವಿದ್ಯಾರ್ಥಿಗಳ ಕೌಶಲ್ಯ ಮತ್ತು ಟೆಕ್ ಸಾಕ್ಷರತೆಯನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.
ಸರ್ವೀಸ್ ನೌ ರೈಸ್ಅಪ್ ಕಾರ್ಯಕ್ರಮವು ಪ್ರಪಂಚದಾದ್ಯಂತ ಬೇಡಿಕೆ ಇರುವ ಡಿಜಿಟಲ್ ಕೌಶಲ್ಯಗಳನ್ನು ಒಂದು ಮಿಲಿಯನ್ ಜನರಿಗೆ ಕಲಿಸಲು ವಿನ್ಯಾಸಗೊಳಿಸಲಾದ ಜಾಗತಿಕ ಕಾರ್ಯಕ್ರಮವಾಗಿದೆ. ಭಾರತದಲ್ಲಿ, ಸರ್ವೀಸ್ ನೌ ಯುನಿವರ್ಸಿಟಿ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸರ್ಕಾರಿ ಸಹಭಾಗಿತ್ವ, ಫ್ಯೂಚರ್ ಸ್ಕಿಲ್ಸ್ ಪ್ರೈಮ್ NASSCOM ಮತ್ತು ತಮಿಳುನಾಡಿನ ಐಸಿಟಿ ಅಕಾಡೆಮಿ ಒಳಗೊಂಡು 16 ರಾಜ್ಯಗಳ 20 ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಉದ್ಯೋಗ ಸಿದ್ಧ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ.
ಟಾಪ್ 10 ತಂತ್ರಜ್ಞಾನ ಪೂರೈಕೆದಾರರು ಮತ್ತು ಭಾರತದ ಪ್ರಮುಖ ಐದು ಬ್ಯಾಂಕ್ಗಳು ಸರ್ವಿಸ್ನೌ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಆ ಮೂಲಕ ಸರ್ವಿಸ್ನೌನ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾತ್ರ ದೊಡ್ಡದಿದೆ. ಡಿಜಿಟಲ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರಲು ಬೇಕಾದ ಕೌಶಲ್ಯಗಳನ್ನು ಒದಗಿಸುವ ಮೂಲಕ ಸರ್ವೀಸ್ ನೌ ಭಾರತದ ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ.