ಮಣಿಪಾಲ್ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ‘ಫ್ರಾನ್ಸ್ ಶಿಕ್ಷಣ ಪ್ರವಾಸ-2024 ಆಯ್ಕೆ ಮಾಡಿ’ [ಚೂಸ್ ಫ್ರಾನ್ಸ್ ಎಜುಕೇಶನ್ ಟೂರ್ 2024) ಕಾರ್ಯಕ್ರಮವನ್ನು ಫೆಬ್ರವರಿ 7 ರಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ]ಯ ಗ್ರಂಥಾಲಯ ಸಭಾಗೃಹ [ಲೈಬ್ರೆರಿ ಆಡಿಟೋರಿಯಂ] ದಲ್ಲಿ ಆಯೋಜನೆ ಮಾಡಿತ್ತು. ಇದು ಫ್ರಾನ್ಸ್ ನ 13 ಪ್ರಮುಖ ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗದ ಮಹತ್ತ್ವದ ಪ್ರಯತ್ನವಾಗಿದೆ. ಈ ಮೂಲಕ ಫ್ರಾನ್ಸ್ನಲ್ಲಿ ಲಭ್ಯವಿರುವ ವಿಪುಲ ಶೈಕ್ಷಣಿಕ ಅವಕಾಶಗಳ ಬಗ್ಗೆ ಭಾರತೀಯ ವಿದ್ಯಾರ್ಥಿಗಳಿಗೆ ಒಳ ನೋಟವನ್ನು ನೀಡಿತು .
ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ನ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಅಧಿಕಾರಿ , ಡಾ. ಫ್ರಾನ್ಸಿಸ್ ಕ್ಸೇವಿಯರ್ ಮಾರ್ಟ್ರೂಲ್ (Dr. François-Xavier Mortreuil) ಅವರು ಮಾತನಾಡಿ, ‘ಫ್ರಾನ್ಸ್ ಮತ್ತು ಭಾರತದ ನಡುವೆ ಶೈಕ್ಷಣಿಕ ವಿನಿಮಯ ಮತ್ತು ಸಹಭಾಗಿತ್ವಕ್ಕೆ ಸಂಬಂಧಿಸಿ ಚೂಸ್ ಫ್ರಾನ್ಸ್ ಎಜುಕೇಶನ್ ಟೂರ್ 2024 ಕಾರ್ಯಕ್ರಮವು ಮುಖ್ಯ ತಳಹದಿಯಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್ ನಲ್ಲಿನ ಶ್ರೀಮಂತ ಶೈಕ್ಷಣಿಕ ಸೌಲಭ್ಯಗಳನ್ನು ಮತ್ತು ಅವಕಾಶಗಳನ್ನು ಮುಕ್ತವಾಗಿಸುವುದು ಹಾಗೂ ಫ್ರಾನ್ಸ್ ಮತ್ತು ಭಾರತದ ಶೈಕ್ಷಣಿಕ ಸಂಬಂಧವನ್ನು ಸದೃಢವಾಗಿಸುವುದು ಇದರ ಉದ್ದೇಶವಾಗಿದೆ’ ಎಂದರು.
ಎಂಐಟಿಯ ನಿರ್ದೇಶಕ ಡಾ. ಅನಿಲ್ ರಾಣಾ ಅವರು ಈ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತ, ‘ಫ್ರಾನ್ಸ್ ಶೈಕ್ಷಣಿಕ ಪ್ರವಾಸ ’ ಕಾರ್ಯಕ್ರಮವನ್ನು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯಕ್ರಮವು ಫ್ರಾನ್ಸ್ನಲ್ಲಿ ಲಭ್ಯವಿರುವ ವಿವಿಧ ಉನ್ನತ ಶಿಕ್ಷಣದ ಆಯ್ಕೆಗಳನ್ನು ಪ್ರದರ್ಶಿಸುತ್ತದೆ ಮಾತ್ರವಲ್ಲದೆ ,ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕ ಶೆಕ್ಷಣಿಕ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಅದು ಅವರ ಶೈಕ್ಷಣಿಕ ಮತ್ತು ವೃತ್ತಿ ಆಕಾಂಕ್ಷೆಗಳೊಂದಿಗೆ , ಮಹತ್ವಾಕಾಂಕ್ಷಿಗಳಿಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ತೆರೆದಿಡಲಿದೆ.
ಮಾಹೆಯ ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ನಿರ್ದೇಶಕರಾದ ಡಾ. ಕರುಣಾಕರ ಎ. ಕೋಟೆಗಾರ್ ಅವರು ಕಾರ್ಯಕ್ರಮದ ಪ್ರಧಾನ ಆಶಯವನ್ನು ಎತ್ತಿ ಹಿಡಿಯುತ್ತ, ‘ಇದೊಂದು ಬಹಳ ಮುಖ್ಯವಾದ ಕಾರ್ಯಕ್ರಮ. ಫ್ರಾನ್ಸ್ನ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿನ ಶೈಕ್ಷಣಿಕ ಪ್ರವಾಸದ ಕುರಿತು ಪ್ರಸ್ತುತಪಡಿಸಿರುವ ಸ್ಕಾಲರ್ಶಿಪ್ ಅವಕಾಶಗಳು ಸೇರಿದಂತೆ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗಿಸುವಲ್ಲಿ ಯಶಸ್ವಿಯಾಗಿವೆ.
ವಿದ್ಯಾರ್ಥಿಗಳಿಗೆ ಫ್ರಾನ್ಸ್ನ ಅತ್ಯುತ್ತಮ ವಿಶ್ವವಿದ್ಯಾನಿಲಯಗಳು ಮತ್ತು ಬಿಸಿನೆಸ್ ಸ್ಕೂಲ್ ಗಳ ಕೆಲವು ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಾದಿಸುವ ಅಮೂಲ್ಯವಾದ ಅವಕಾಶವಿತ್ತು. ಈ ಕಾರ್ಯಕ್ರಮದಿಂದಾಗಿ ಫ್ರಾನ್ಸ್ ನಲ್ಲಿ ಲಭ್ಯವಿರುವ ಇಂಜಿನಿಯರಿಂಗ್, ಆಡಳಿತಶಾಸ್ತ್ರ, ಹಾಸ್ಪಿಟಾಲಿಟಿ ಶಿಕ್ಷಣ, ಪ್ರವಾಸೋದ್ಯಮ ವಿಭಾಗಗಳ ಅವಕಾಶಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವಂತಾಯಿತು ’ ಮತ್ತು ಫ್ರಾನ್ಸ್ನ ರೋಮಾಂಚಕ ವಿದ್ಯಾರ್ಥಿ ಜೀವನ ಮತ್ತು ನವೀನ ಶೈಕ್ಷಣಿಕ ವಾತಾವರಣದ ಒಂದು ಒಳ ನೋಟವನ್ನು ನೀಡಲು ಸಹಾಯ ಮಾಡಿತು ಎಂದರು.
ಇಎಸ್ಎಸ್ಇಸಿ ಬಿಸಿನೆಲ್ ಸ್ಕೂಲ್, ನಿಯೋಮ ಬಿಸಿನೆಸ್ ಸ್ಕೂಲ್, ಇಎಂಐ ಲಿಯೋನ್, ಇಡಿಎಚ್ಇಸಿ ಬಿಸಿನೆಸ್ ಸ್ಕೂಲ್, ಅಡೆನ್ಸಿಯ ಬಿಸಿನೆಸ್ ಸ್ಕೂಲ್ ಮೊದಲದ ಫ್ರಾನ್ಸ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಾನ್ಸ್ ನಿಯೋಗವು , ಫ್ರಾನ್ಸ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿವೇತನದ ಅವಕಾಶಗಳ ಬಗ್ಗೆ ಪ್ರಸ್ತುತಿಗಳನ್ನು ನೀಡಿತು.
ಪ್ರಾನ್ಸ್ನಲ್ಲಿ ಶೈಕ್ಷಣಿಕ ಪ್ರವಾಸ – 2024 ಆಯ್ಕೆ ಮಾಡಿ ಕಾರ್ಯಕ್ರಮಕ್ಕೆ ಆಶ್ರಯ ಕೊಡುವುದರ ಮೂಲಕ ಮಾಹೆಯು ಭಾರತ ಮತ್ತು ಫ್ರಾನ್ಸ್ನ ನಡುವೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಅಧಿಕಗೊಳಿಸಿದೆ ಮತ್ತು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ಲಭ್ಯವಾಗಿಸುವ ಮಾಹೆಯ ಕಾರ್ಯಬದ್ಧತೆಯನ್ನು ದೃಢಗೊಳಿಸಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮಾಹೆ ಮಣಿಪಾಲದ ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಹಭಾಗಿತ್ವ [ಇಂಟರ್ನ್ಯಾಶನಲ್ ಎಫೇರ್ಸ್ ಆ್ಯಂಡ್ ಕೊಲ್ಯಾಬರೇಶನ್ಸ್] ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ವಿದ್ಯಾರ್ಥಿಗಳು ವಿಶ್ವ ದರ್ಜೆಯ ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕನಸುಗಳನ್ನು ಕೈಗೂಡಿಸಿಕೊಳ್ಳುವಲ್ಲಿನ ಮಾಹೆಯ ಹಲವು ಉಪಕ್ರಮ [ಇನಿಶಿಯೇಟಿವ್] ಗಳಲ್ಲಿ ಇದು ಒಂದಾಗಿದೆ.
ಹೆಚ್ಚಿನ ಮಾಹಿತಿಗೆ : ಡೆಪ್ಯುಟಿ ಡೈರೆಕ್ಟರ್- ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ಇವರನ್ನು ಸಂಪರ್ಕಿಸಿ.
[ಸಂಪರ್ಕ: 7338625909 ಈಮೇಲ್ : dpr.mu@manipal.edu]