ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ(ರಿ) ಮಂಗಳೂರು, ಶ್ರೀ ಭಾರತೀ ಸಮೂಹ ಸಂಸ್ಥೆಗಳು ನಂತೂರು ಇವರುಗಳ ನೇತೃತ್ವದಲ್ಲಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು [ಬ್ಯಾಂಕ್ ಅಫ್ ಬರೋಡ ಸಂಯೋಜಿತ ಸಂಸ್ಥೆ] ಇವರ ಸಹಕಾರ ಹಾಗೂ ಸಹಯೋಗದೊಂದಿಗೆ ನಡೆದ, ‘ಸಾವಯವ ಕೈತೋಟ ತರಬೇತಿ ಸರ್ಟಿಫಿಕೇಟ್ ಕೋರ್ಸ್’ (2 ನೇ ಬ್ಯಾಚ್) ಇದರ ಸಮಾರೋಪ ಸಮಾರಂಭವು ದಿನಾಂಕ 11-02-2024 ನೇ ಭಾನುವಾರ, ನಂತೂರ್ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ತೋಟಗಾರಿಕಾ ಇಲಾಖೆ ಮಂಗಳೂರು, ಇದರ ಸಹಾಯಕ ನಿರ್ದೇಶಕರಾದ ಪ್ರವೀಣ್ ಕೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಷಮುಕ್ತ ಆಹಾರದ ಬಟ್ಟಲಿಗೆ ಅಗತ್ಯವಾದ ಜ್ಞಾನವನ್ನು ಸಮಾಜಕ್ಕೆ ನೀಡಿ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾವಯವ ಕೃಷಿಕ ಗ್ರಾಹಕ ಬಳಗದ ಸಾಮಾಜಿಕ ಕಳಕಳಿ ಮತ್ತು ಅವಿರತ ಶ್ರಮವನ್ನು ಕೊಂಡಾಡಿದರು. ಇಂದು ನಗರದ ಉದ್ದಗಲಗಳಲ್ಲಿ ತ್ಯಾಜ್ಯ ಪದಾರ್ಥಗಳ ದಟ್ಟಣೆಯನ್ನು ಕಾಣುತ್ತೇವೆ. ಅವುಗಳ ಸೂಕ್ತ ನಿರ್ವಹಣೆಯು, ಸರ್ಕಾರಕ್ಕೂ ಸವಾಲಾಗಿಯೇ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಮನೆ ಮನೆಯಿಂದ ಬೀದಿಪಾಲಾಗಬಹುದಾದ ಕಸವನ್ನು, ಸಾರವತ್ತಾದ ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಕಲೆಯನ್ನು ಕರಗತ ಮಾಡಿಕೊಂಡ ಈ ಶಿಬಿರಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯರಾಗಿರುವರು; ‘ವರ್ತನೆಯ ಪರಿವರ್ತನೆಯೇ ನಿಜವಾದ ಶಿಕ್ಷಣ’, ಇದೇ ನಿಜವಾದ ಸಂಸ್ಕೃತಿ – ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ನಿರಂತರವಾದ ತರಬೇತಿಯಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ನೈಪುಣ್ಯವನ್ನು ಗಳಿಸಿರುವರು. ಇದೀಗ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಅದನ್ನು ಸುಸೂತ್ರವಾಗಿ ನಿಭಾಯಿಸುವ ಸಾಮರ್ಥ್ಯ ಹಾಗೂ ಕುಶಲತೆ ಅವರಲ್ಲಿ ಸದಾ ಹಸುರಾಗಿರಲಿ; ಸಾವಯವ ಕೃಷಿ ನೈಪುಣ್ಯವು ಕ್ರಾಂತಿಕಾರಕ ಸಾಧನೆಗೆ ದಾರಿದೀಪವಾಗಲಿ ಎಂದು ಪ್ರವೀಣ್ ಕೆ ಹಾರೈಸಿ ಹುರಿದುಂಬಿಸಿದರು.
ಸಭಾಸದರ ಸ್ವಾಗತದ ಬಳಿಕ, ಸಾವಯವ ಕೃಷಿಕ ಗ್ರಾಹಕ ಬಳಗದ ಬೆಳವಣಿಗೆ, ಸಾಧನೆ, ಮುಂದಿನ ಯೋಜನೆಗಳು – ಇವುಗಳ ಬಗ್ಗೆ ಬೆಳಕು ಚೆಲ್ಲಿದ ಗ್ರಾಹಕ ಬಳಗದ ಸದಸ್ಯರಾದ ನಾರಾಯಣ ರಾವ್ ಅವರು, ಎರಡು ತರಬೇತಿ ಶಿಬಿರಗಳ ಅಂಕಿ ಅಂಶಗಳ ಸಂಕ್ಷಿಪ್ತ ವರದಿಯನ್ನು ಅತಿಥಿಗಳ ಮುಂದುವರಿಸಿದರು.
ಶಿಬಿರಾರ್ಥಿಗಳಾದ ಸುಷ್ಮಾ , ಕವಿತಾ ಸುರೇಶ್, ವೀಣಾ, ಪ್ರೀತಮ್ ಹಾಗೂ ಧರ್ಣಪ್ ಮೂಲ್ಯ – ಎಂಬಿವರು ಶಿಬಿರದ ಅನುಭವವನ್ನು ಅತಿಥಿಗಳ ಮುಂದೆ ಹಂಚಿಕೊಂಡರು.
ಅತಿಥಿಗಳಾದ ಪ್ರವೀಣ್ ಕೆ.(ಸಹಾಯಕ ನಿರ್ದೇಶಕರು – ಕೃಷಿ ಇಲಾಖೆ) ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಿ ಪುರಸ್ಕರಿಸಿದರು. ಸಾವಯವ ಕೃಷಿಕ ಗ್ರಾಹಕ ಬಳಗದ ಆಡಳಿತ ಮಂಡಳಿ ಸದಸ್ಯರಾದ ಹರಿಕೃಷ್ಣ ಕಾಮತ್ ಪುತ್ತೂರು – ಅವರು, ಅತಿಥಿಗಳಿಗೆ ಸಾವಯವ ಅಕ್ಕಿ ಮತ್ತು ಬೆಲ್ಲವನ್ನು ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ ಹಾಗೂ ಬಳಗದ ಕೋಶಾಧಿಕಾರಿಗಳಾದ ಶರತ್ ಮಂಗಳೂರು ಅವರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಜಯಂತಿ ಶಂಕರ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯು, ಸಂಜನಾ ಸತೀಶ್ ಅವರ ವಂದನಾರ್ಪಣೆ ಯೊಂದಿಗೆ ಸಂಪನ್ನಗೊಂಡಿತು. ರೇನಿತಾ ಕುಡ್ಲ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.