ಬೆಂಗಳೂರು ; ರಾಜ್ಯದ ಎಲ್ಲಾ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ನೀಡುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಬೇಡಿಕೆಗೆ ದಶಕಗಳ ಇತಿಹಾಸವೂ ಇದೆ. ಆದರೆ ಸರ್ಕಾರವು ಬಸ್ ಪಾಸ್ ನೀಡುವುದೇ ಆದಲ್ಲಿ ಗ್ರಾಮೀಣ ಅರ್ಹ ಪತ್ರಕರ್ತರನ್ನು ಗುರುತಿಸುವುದಕ್ಕೇ ಜಿಲ್ಲಾ ಮಟ್ಟದಲ್ಲಿ ಮಾನ್ಯತಾ ಸಮಿತಿಯನ್ನು ಮೊದಲು ರಚಿಸಬೇಕಾಗುತ್ತದೆ.
ಈಗಾಗಲೇ ರಾಜ್ಯದಲ್ಲಿ ಮೊದಲಿನಿಂದ ಇರುವ ಕಾರ್ಯನಿರತ ಪತ್ರಕರ್ತರ ಸಂಘದ ಜತೆಗೇ ಇನ್ನೊಂದೆರಡು ಸಂಘಟನೆಗಳೂ ರಾಜ್ಯದಲ್ಲಿ ಸಕ್ರಿಯವಾಗಿ ಇವೆ. ಇತರ ಸಂಘಟನೆಗಳನ್ನು ಅನಧಿಕೃತ ಎಂದು ಹೇಳಲೂ ಸಾಧ್ಯವಿಲ್ಲ. ಇನ್ನು ಪಾಸ್ ಸಿಗುವ ವಿಚಾರ ಖಚಿತ ಆದ ಕೂಡಲೇ ಈಗಾಗಲೇ ಕೊನೆಯುಸಿರು ಎಳೆದಿರುವ ನವೀಕರಣ ಸಮಯದಲ್ಲಿ ಮಾತ್ರ ವರ್ಷಕ್ಕೊಮ್ಮೆ ಪ್ರಕಟಗೊಳ್ಳುವ ನೂರಾರು ಪತ್ರಿಕೆಗಳು ಮರು ಜೀವ ಪಡೆದುಕೊಳ್ಳುತ್ತವೆ. . ಇದರ ಜತೆಗೇ ಈಗಾಗಲೇ ಪತ್ರಕರ್ತರ ವೇಷ ಹಾಕಿಕೊಂಡಿರುವ ನೂರಾರು NRR (Non Reporting Reporters) ಗಳ ಜತೆಗೇ ನೂರಾರು NRR ಗಳೂ ಸೃಷ್ಟಿ ಆಗುತ್ತಾರೆ. ಇದಲ್ಲದೆ ಸಾವಿರಾರು ಯೂ ಟ್ಯೂಬ್ ಪತ್ರಕರ್ತರು, ಸಾವಿರಾರು ವೆಬ್ ಸೈಟ್ ಗಳ ಪತ್ರಕರ್ತರು ಪಾಸ್ ಗಾಗಿ ಲಾಬಿ ನಡೆಸುತ್ತಾರೆ.
ಪತ್ರಕರ್ತರನ್ನು ಗುರುತಿಸುವುದೇ ಸವಾಲಿನ ಕೆಲಸ ಆಗಬಹುದು. ಪ್ರಸ್ತುತ ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಪತ್ರಕರ್ತರಿದ್ದಾರೆ ಎಂದು ಅಂದಾಜಿಸಲಾಗಿದೆ. ಎಲ್ಲರಿಗೂ ಸರ್ಕಾರ ಪಾಸ್ ನೀಡಬೇಕಾದರೆ ಮೊದಲಿಗೆ ನಿಗದಿತ ಮಾನದಂಡ ರೂಪಿಸಬೇಕಾಗುತ್ತದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಮಾನ್ಯತಾ ಸಮಿತಿ ಇದ್ದು ಕಠಿಣ ಮಾನಂದಂಡದ ಮೂಲಕ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರಸ್ತುತ ಸುಮಾರು 1500 ಮಾನ್ಯತೆ ಹೊಂದಿರುವ ಪತ್ರಕರ್ತರು ರಾಜ್ಯದಲ್ಲಿದ್ದಾರೆ. ಗ್ರಾಮೀಣ ಅಂದರೆ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಪಾಸ್ ನೀಡುವುದಾದರೂ ಅದನ್ನು ರಾಜ್ಯಾದ್ಯಂತ ವಿಸ್ತರಿಸಿ ನೀಡುವುದಿಲ್ಲ. ಬದಲಿಗೆ ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿ ಪಾಸ್ ನೀಡಲಿರುವುದಾಗಿ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಜಿಲ್ಲಾ ವ್ಯಾಪ್ತಿಗೆ ಪಾಸ್ ನೀಡಿದರೆ ಎಷ್ಟು ಮಂದಿ ಪತ್ರಕರ್ತರಿಗೆ ಅನುಕೂಲ ಆಗಬಹುದು ? ರಾಜ್ಯದ ಶೇಕಡಾ 90-95 ರಷ್ಟು ಕಾರ್ಯನಿರತ ಪತ್ರಕರ್ತರು ದ್ವಿಚಕ್ರ ವಾಹನ ಹೊಂದಿದ್ದಾರೆ. ಇವರು ಜಿಲ್ಲಾ ವ್ಯಾಪ್ತಿ ಪಾಸ್ ಪಡೆದರೆ ಬಸ್ಗಾಗಿ ಕಾದು ಪ್ರಯಾಣಿಸುವ ಸಾದ್ಯತೆ ತುಂಬಾ ಕಡಿಮೆ. ಒಂದು ವೇಳೆ ರಾಜ್ಯ ವ್ಯಾಪಿ ಪಾಸ್ ನೀಡಿದರೂ ತಿಂಗಳಿಗೆ ಎಷ್ಟು ದಿನ ಬಳಕೆ ಆದೀತು ? ಇನ್ನು ಕೆಎಸ್ಆರ್ಟಿಸಿ ನೀಡುವ ಬಸ್ ಪಾಸ್ ನ ಕಾರ್ಡ್ ಬ್ಲಾಕ್ ಮೇಲ್ ಪತ್ರಕರ್ತರಿಗೆ ಭ್ರಷ್ಟ ರಿಂದ ಹಣ ಸುಲಿಗೆ ಮಾಡಲು ಲೈಸನ್ಸ್ ಸಿಕ್ಕಂತೆ ಆಗುತ್ತದೆ. ನಮಗೆ ಸರ್ಕಾರವೇ ಪಾಸ್ ನೀಡಿದೆ ಎಂದು ಹೇಳಿಕೊಂಡು ಇವರು ವಸೂಲಿಗಿಳಿಯುತ್ತಾರೆ.
ಪತ್ರಕರ್ತರಿಗೆ ಇಂದಿನ ದುಬಾರಿ ಕಾಲದಲ್ಲಿ ಅತ್ಯವಶ್ಯಕವಾಗಿರುವುದು ಬಸ್ ಪಾಸ್ ಅಲ್ಲ, ಬದಲಿಗೆ ಜೀವ ವಿಮೆ ಮತ್ತು ವೈದ್ಯಕೀಯ ಸೌಲಭ್ಯ ತುರ್ತು ಅವಶ್ಯಕತೆ ಇದೆ. ಸರ್ಕಾರ ಕೆಎಸ್ಆರ್ಟಿಸಿ ನೌಕರರಿಗೆ ವರ್ಷಕ್ಕೆ ಕೇವಲ ಒಂದು ಸಾವಿರ ( ಅದನ್ನೂ ಕಂತಿನಲ್ಲಿ ಕಟ್ಟಬಹುದು) ರೂಪಾಯಿ ಪ್ರೀಮಿಯಂ ಪಡೆದುಕೊಂಡು, ಮೃತಪಟ್ಟರೆ ಒಂದು ಕೋಟಿ ರೂಪಾಯಿಗಳ ವಿಮಾ ಸೌಲಭ್ಯ ಒದಗಿಸಿದೆ. ಜತೆಗೇ ವೈದ್ಯಕೀಯ ಚಿಕಿತ್ಸೆಗಾಗಿ ಇಎಸ್ಐ ( Employees State Insurance) ಸೌಲಭ್ಯ ಒದಗಿಸಿದೆ. ಇಎಸ್ಐ ವಿಮಾ ಸೌಲಭ್ಯದ ಸರ್ಕಾರೀ ಮತ್ತು ನೋಂದಾಯಿತ ಖಾಸಗೀ ಆಸ್ಪತ್ರೆಗಳಲ್ಲಿ ಗರಿಷ್ಟ ಮಿತಿ ಇಲ್ಲದೆ ಶುಲ್ಕರಹಿತವಾಗಿ ಯಾವುದೇ ಆಪರೇಷನ್ ಮತ್ತು ಚಿಕಿತ್ಸೆ ಪಡೆಯಬಹುದಾಗಿದೆ.
ಪತ್ರಕರ್ತರ ಕಲ್ಯಾಣಕ್ಕೆ ಮುಂದಾಗಿರುವ ಸರ್ಕಾರವು ಇಎಸ್ಐ ಮತ್ತು ವಾರ್ಷಿಕ ಒಂದು ಸಾವಿರ ರೂಪಾಯಿಗಳನ್ನು ಪಡೆದುಕೊಂಡು ಕೋಟಿ ಅಥವಾ 50 ಲಕ್ಷ ರೂಪಾಯಿಗಳ ಜೀವ ವಿಮೆ ಒದಗಿಸಿದರೆ ಅದರಿಂದ ಎಲ್ಲಾ ಪತ್ರಕರ್ತರಿಗೆ ಖಂಡಿತಾ ಅನುಕೂಲ ಆಗಲಿದೆ. ಇದರಲ್ಲಿ ದುರುಪಯೋಗ ಸಾದ್ಯತೆಯೂ ಕಡಿಮೆ. ಕೊರೋನ ಸಮಯದಲ್ಲಿ ಹತ್ತಾರು ಪತ್ರಕರ್ತರು ಸಾವನ್ನಪ್ಪಿದರು. ಜತೆಗೇ ಲಕ್ಷಾಂತರ ರೂಪಾಯಿಗಳ ಆಸ್ಪತ್ರೆ ಬಿಲ್ ಗಳನ್ನು ಕಟ್ಟಲು ಕುಟುಂಬದವರು ಹೈರಾಣಾದರು. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಪತ್ರಕರ್ತರಿಗೆ ಜೀವವಿಮೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಿದರೆ ನಿಜಕ್ಕೂ ಹೆಚ್ಚು ಅನುಕೂಲ ಆಗುತ್ತದೆ. ರಾಜ್ಯದ ಎಲ್ಲಾ ಪತ್ರಕರ್ತ ಸಂಘದ ಪಧಾದಿಕಾರಿಗಳು ಈ ದಿಸೆಯಲ್ಲಿ ಚಿಂತನೆ ನಡೆಸಿ ಒಮ್ಮತದಿಂದ ಸರ್ಕಾರವನ್ನು ಒತ್ತಾಯಿಸಲಿ.