ಮಂಗಳೂರು: ದೇವರ ಸೇವಕ ಆರ್. ಎಫ್. ಸಿ. ಮಸ್ಕರೇನ್ಹಸ್ ಅವರ 150ನೇ ಜನ್ಮ ದಿನಾಚರಣೆ ಮತ್ತು ಗುರುದೀಕ್ಷೆಯ ಶತಮಾನೋತ್ತರ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಬೆಂದೂರಿನ ಸೈoಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಸಂಭ್ರಮದ ಪವಿತ್ರ ಬಲಿಪೂಜೆ ನಡೆಯಿತು. ಗೌರವಾನ್ವಿತ ಅತಿ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಪಾಟ್ನಾದ ನಿವೃತ್ತ ಆರ್ಚ್ ಬಿಷಪ್ ವಂದನೀಯ ವಿಲಿಯಂ ಡಿಸೋಜಾ, ಬೆಂದೂರಿನ ಸೈoಟ್ ಸೆಬಾಸ್ಟಿಯನ್ ಚರ್ಚ ನ ಧರ್ಮಗುರು ವಂದನೀಯ ಫಾ | ವಿನ್ಸೆಂಟ್ ಮೊಂತೇರೋ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳೊಂದಿಗೆ ಬಲಿಪೂಜೆಯನ್ನು ನೆರವೇರಿಸಿದರು.
ಬಿಜೈ ಚರ್ಚ್ ನ ಧರ್ಮಗುರು ವಂದನೀಯ ಜೆ. ಬಿ. ಸಲ್ದಾನ್ಹ ಅವರು ಆರ್. ಎಫ್. ಸಿ. ಮಸ್ಕರೇನ್ಹಸ್ ರವರು ಬೆಥನಿ ಕನ್ಯಾ ಮಠ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಮತ್ತು ದೀನ ದಲಿತರ ಉದ್ಧಾರಕ್ಕಾಗಿ ದುಡಿದವರು. ಅವರ ತತ್ವ, ಆದರ್ಶಗಳು ನಮಗೆಲ್ಲರಿಗೂ ಆದರ್ಶ ಮತ್ತು ಅನುಕರಣೀಯವಾಗಿದೆ.ಅಂಥಹ ಮಹಾನ್ ಚೇತನ, ದೇವರ ಸೇವಕನಾದ ಅವರಿಗೆ ದೇವರು ಸಂತ ಪದವಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಫಾ | ಆರ್. ಎಫ್. ಸಿ. ಮಸ್ಕರೇನ್ಹಸ್ ಅವರ ಜೀವನ, ತತ್ವ ಮತ್ತು ಆದರ್ಶಗಳನ್ನು ಒಳಗೊಂಡ ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೆಥನಿ ಸಂಸ್ಥೆಯ ಮಹಾಮಾತೆ ಭಗಿನಿ ರೋಸ್ ಸೆಲಿನ್, ಇತರ ಭಗಿನಿಯರು, ಅನೇಕ ಧರ್ಮಗುರುಗಳು ಉಪಸ್ಥಿತರಿದ್ದರು.