ಮಂಗಳೂರು: “ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಜ.24ರಿಂದ 28ರವರೆಗೆ ಮಂಗಳೂರು ಸ್ಟ್ರೀಟ್ ಫುಡ್ ಫೆಸ್ಟಿವಲ್ ದ್ವಿತೀಯ ಆವೃತ್ತಿಯ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಕಳೆದ ಬಾರಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ನನ್ನ ಮಾರ್ಗದರ್ಶನದಲ್ಲಿ ಸ್ಟ್ರೀಟ್ ಫುಡ್ ಪೆಸ್ಟ್ ಯಶಸ್ವಿಯಾಗಿದ್ದು ನಾಳೆ ಸಂಜೆ 7 ಗಂಟೆಗೆ ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ವರ್ಷದ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಲಕ್ಷಾಂತರ ಜನರನ್ನು ಆಕರ್ಷಿಸಿ ಭಾರೀ ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾಗಿತ್ತು. ಆಯಶಸ್ಸು ಸೀಸನ್ -2ಗೆ ಪ್ರೇರಣೆಯಾಗಿದ್ದು, ಈಗಾಗಲೇ ಸಾರ್ವಜನಿಕ ವಲಯದಿಂದ ಅತ್ಯುತ್ತಮ ಸ್ಪಂದನೆ ಹಾಗೂ ನಿರೀಕ್ಷೆ ಲಭಿಸಿದೆ” ಎಂದರು.
“ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವದವರೆಗೆ ಪ್ರತಿ ನಿತ್ಯ ಸಂಜೆ 4ರಿಂದ ರಾತ್ರಿ 10.30 ರವರೆಗೆ (ಕೊನೆಯ ಮೂರು ದಿನ, ಶುಕ್ರವಾರ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10.30 ತನಕ) ಸ್ಟ್ರೀಟ್ ಫುಡ್ ಪೆಸ್ಟ್ ನಡೆಯಲಿರುವ ಸ್ಥಳಗಳಲ್ಲಿ ಮಳಿಗೆ ನಿರ್ಮಾಣ ಸಹಿತ ಎಲ್ಲಾ ತಯಾರಿಗಳು ಬಹುತೇಕ ಪೂರ್ಣಗೊಂಡಿದೆ.
ಹೆಚ್ಚಿನ ಸಂಖ್ಯೆಯ ಮಳಿಗೆಗಳಿಂದ 160 ಸಂಖ್ಯೆಯ ವಿಶೇಷ ಆಹಾರ ಮಳಿಗೆಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯ-ದೇಶದ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರವನ್ನು ಪರಿಚಯಿಸಲಾಗುತ್ತಿದೆ.
ಗ್ರಾಹಕರಿಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ.
ಈ ಬಾರಿ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಹಕರು ಹಾಗೂ ಮಳಿಗೆದಾರರ ನಡುವೆ ನಗದು ಅಥವಾ ಕ್ಯಾಶ್ ರೂಪದ ವ್ಯವಹಾರಕ್ಕಿಂತ ಎಲ್ಲಾ ಮಳಿಗೆದಾರರಿಗೂ ನೀಡಲಾಗಿರುವ ಪ್ರತ್ಯೇಕ ಕ್ಯೂಆರ್ ಕೋಡ್ ಸ್ಕ್ಯಾನ್ ಬಳಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ಸಂಪೂರ್ಣ ಡಿಜಿಟಲ್ ವಹಿವಾಟು ಭವಿಷ್ಯದ ಭಾರತದ ಮುನ್ನೋಟವಾಗಿದ್ದು ಜನರನ್ನು ಆ ನಿಟ್ಟಿನಲ್ಲಿ ಪ್ರೇರೇಪಿಸುವ ಪ್ರಯತ್ನವೂ ಇದಾಗಿದೆ.ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತಿರಲು ಈ ಬಾರಿ ಕ್ರಮಬದ್ಧವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಕೊಟ್ಟಾರ ಚೌಕಿ ಕಡೆಯಿಂದ ಬರುವ ವಾಹನಗಳಿಗೆ ಉರ್ವ ಚರ್ಚ್ ಆವರಣ, ಉರ್ವ ಆಟದ ಮೈದಾನ, ಹಾಗೂ ಲೇಡಿಹಿಲ್ ವಿಕ್ಟೋರಿಯಾ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಾಂಪೋಸಿಟ್ ಪಿಯು
ಮಾಡಲಾಗಿದೆ. ಹಾಗೆಯೇ ಲಾಲ್ ಬಾಗ್ ಕಡೆಯಿಂದ ಬರುವ ವಾಹನಗಳಿಗೆ ಕೆನರಾ ಉರ್ವ ಶಾಲೆಯ ಆವರಣ ಮತ್ತು ಕರಾವಳಿ ಉತ್ಸವ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ನಿಗದಿತ ಸ್ಥಳಗಳಲ್ಲದೇ, ರಸ್ತೆಯ ಬದಿಯಲ್ಲಿvಎಲ್ಲಿಯೂ ವಾಹನ ಪಾರ್ಕಿಂಗ್ ಮಾಡದೇ ಕಾರ್ಯಕ್ರಮದ ಯಶಸ್ಸಿಗೆ
ಸಹಕರಿಸುವಂತೆ ಆಯೋಜಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಿಡ್ ಜೋನ್ ಗೆ ವಿಶೇಷ ಪ್ರಾಧಾನ್ಯತೆ:
ಕಳೆದ ಬಾರಿ ಇದ್ದಂತಹ ಹತ್ತು ಹಲವು ಮನರಂಜನಾಕಾರ್ಯಕ್ರಮಗಳು ಈ ಬಾರಿಯೂ ಸಹ ಇರಲಿದ್ದು ಮಕ್ಕಳ ಆಟದ ಜೋನ್ ಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದ್ದು, ಉತ್ಸವದ ಸಮಯದಲ್ಲಿ ಹಲವು ವೇದಿಕೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ವೇದಿಕೆಗಳಲ್ಲಿ ಆಚರಿಸಲು ಅವಕಾಶ ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ್, ರಾಘವೇಂದ್ರ ಹೊಳ್ಳ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಉದಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.