ಉಳ್ಳಾಲ: ಮಾಜಿ ಪ್ರೇಯಸಿಯನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಜಿಲ್ಲಾ 2 ನೇ ಹೆಚ್ಚುವರಿ ನ್ಯಾಯಾಲಯ ಒಟ್ಟು 18 ವರ್ಷ 1 ತಿಂಗಳ ಸಜೆ ಹಾಗೂ ಸಂತ್ರಸ್ತೆಗೆ ರೂ. 2 ಲಕ್ಷ ರೂ ನೀಡುವಂತೆ ಆದೇಶ ನೀಡಿದೆ.
2019ರ ಜೂ.28 ರಂದು ದೇರಳಕಟ್ಟೆಯ ಬಗಂಬಿಲ ರಸ್ತೆಯಲ್ಲಿನ ಶಾಂತಿಧಾಮ ಬಳಿ ಆರೋಪಿ ಸುಶಾಂತ್ ಯಾನೆ ಶಾನ್ (31) ಕಾಲೇಜಿನಿಂದ ಬರುತ್ತಿದ್ದ ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಶಾಂತಿಧಾಮ ಬಳಿ ಅಡ್ಡಗಟ್ಟಿ ಯುವತಿ ಮುಂದೆ ಹೋಗದಂತೆ ತಡೆಹಿಡಿದು ಆಕೆಯನ್ನು ಅಪ್ಪಿಹಿಡಿದು ಚೂರಿಯಿಂದ ಎದೆ, ಹೊಟ್ಟೆ ಹಾಗೂ ದೇಹದ ವಿವಿದೆಡೆ ಇರಿದು ನಂತರ ಅದೇ ಚೂರಿಯಿಂದ ತನ್ನ ಕುತ್ತಿಗೆಗೆ ಹಾಗೂ ಕೈ ನಾಡಿಗೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದನು.
ಘಟನೆಯನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆ ಮೇಲಿನ ಭಾಗದಿಂದ ಗಮನಿಸಿ ತಕ್ಷಣ ಆಂಬ್ಯುಲೆನ್ಸ್ ಸಮೇತ ಘಟನಾ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು. ಪ್ರಕರಣದಲ್ಲಿ ದಾದಿಯ ಸೇವೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆಗೆ ಒಳಗಾಗತ್ತು. ಆರೋಪಿ ನೃತ್ಯ ತರಬೇತಿದಾರನಾಗಿದ್ದು, ಸಂತ್ರಸ್ತೆ ಕಲಿಯುತ್ತಿದ್ದ ಕಾಲೇಜಿನಲ್ಲಿ ನೃತ್ಯ ಕಲಿಸುತ್ತಿದ್ದ.
ಈ ಸಂದರ್ಭ ಇಬ್ಬರ ನಡುವೆ ಇದ್ದ ಗೆಳೆತನವನ್ನು ತಪ್ಪಾಗಿ ಅರ್ಥೈಸಿಕೊಂಡ ಸುಶಾಂತ್ ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ದ್ವೇಷದಿಂದ ಸಂತ್ರಸ್ತೆ ಕೊಲೆಗೆ ಯತ್ನಿಸಿದ್ದ. ಪ್ರಕರಣದ ಸಂಪೂರ್ಣ ಘಟನೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಿಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ತನಿಖಾದಿಕಾರಿಗಳು ಅದನ್ನೇ ಪ್ರಮುಖ ಸಾಕ್ಷ್ಯಾಧಾರವನ್ನಾಗಿ ದೋಷಾರೋಪಣಾ ಪತ್ರದಲ್ಲಿ ಅಳವಡಿಸಲಾಗಿತ್ತು.
2021ರ ಫೆ.10 ರಂದು ತನಿಖೆ ಆರಂಭಗೊಂಡಿದ್ದು, ಒಟ್ಟು 21 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಆರೋಪಿ ಸುಶಾಂತ್ ಸಹ ತನ್ನ ಸಹೋದರಿಯನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯವಾಗಿ ಹಾಜರುಪಡಿಸಿದ್ದನು. ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಧೀಶೇ ಪ್ರೀತಿ ಕೆ.ಪಿ ಆರೋಪಿ ವಿರುದ್ಧ ಕಲಂ 341 ಕ್ಕೆ 1 ತಿಂಗಳ ಸಜೆ, 326 ಕಲಂ ನಡಿ 7 ವರ್ಷದ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ, 307 ಕ್ಕೆ 10 ವರ್ಷದ ಕಠಿಣ ಸಜೆ ಮತ್ತು 1 ಲಕ್ಷ ದಂಡ ಪಾವತಿ, 354 ಕ್ಕೆ 1 ವರ್ಷದ ಕಠಿಣ ಸಜೆ ಮತ್ತು 10,000 ರೂ ದಂಡ ಪಾವತಿ ಹಾಗೂ 309 ಕ್ಕೆ 1,000 ದಂಡ. ಒಟ್ಟು 18 ವರ್ಷ 1 ತಿಂಗಳ ಸಜೆಯನ್ನು ಒಂದಾದ ನಂತರ ಒಂದರಂತೆ ಪ್ರತ್ಯೇಕವಾಗಿ ಅನುಭವಿಸುವಂತೆ ಆದೇಶಿಸಲಾಗಿದೆ.
ಇಲ್ಲಿಯವರೆಗೆ ಬಂಧನದಲ್ಲಿರುವ ಆರೋಪಿಯ ಶಿಕ್ಷೆಯನ್ನು ಸೆಟ್ಆಪ್ ಗೆ ಆದೇಶಿಸಿದೆ. ಸಂತ್ರಸ್ತೆ ಪರ ವಾದವನ್ನು ಜ್ಯೋತಿ ಪ್ರಮೋದ್ ನಾಯಕ್ ವಾದಿಸಿದ್ದರು. ಪ್ರಕರಣವನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದ ಗುರುವಪ್ಪ ಕಾಂತಿ ಯವರು ಸಮಗ್ರ ತನಿಖೆ ನಡೆಸಿ ಒಟ್ಟು 34 ಸಾಕ್ಷಿದಾರರನ್ನು ವಿಚಾರಣೆ ನಡೆಸಿ ಒಟ್ಟು ಆರು ಕಾಯಿದೆಗಳಡಿ ಪ್ರಕರಣ ದಾಖಲಿಸಿದ್ದರು.