ಅಂಕೋಲ: ಅಂಕೋಲಾ ತಾಲೂಕಿನ ಅಂದ್ಲೆಯಲ್ಲಿ 2019 ಡಿಸೆಂಬರ್ 17 ರಂದು ನಡೆದ ವೃದ್ಧ ದಂಪತಿಗಳ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಕಾರವಾರ ಪ್ರಧಾನ ಮತ್ತು ಜಿಲ್ಲಾ ಸೆಷೆನ್ಸ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಸಿದೆ.
ಸಾವಿತ್ರಿ ನಾಯಕ ದಂಪತಿಗಳ ಪರವಾಗಿ ಸರ್ಕಾರದ ವಿಶೇಷ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವಾ ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ 57 ಜನ ಸಾಕ್ಷ್ಯ ನುಡಿದಿದ್ದರು. ಸಾಂದರ್ಭಿಕ ಸಾಕ್ಷ್ಯಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ಕೊಲೆ ಆರೋಪವನ್ನು ಸಾಬೀತು ಮಾಡುವುದು ಸವಾಲಿನ ಕೆಲಸ ವಾಗಿತ್ತು. ಅಂಕೋಲಾ ಠಾಣೆಯ ಎಎಸೈ ಮಹಾಬಲೇಶ್ವರ ಅವರ ಶ್ರಮ ಹಾಗೂ ಸಹಕಾರವನ್ನು ಕೋರ್ಟ ಶ್ಲಾಘಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಮಾಧ್ಯಮಗಳಿಗೆ ಹೇಳಿದರು. ಕೊಲೆ ಸಾಬೀತಾದ ಪ್ರಕರಣದಲ್ಲಿ ಮೊದಲ ಆರೋಪಿ ಸುಕೇಶ್ ಚಂದ್ರು ನಾಯಕ(42) ಅಂದ್ಲೆ ಗ್ರಾಮದವನಾಗಿದ್ದು ಹಾಲಿ ವಾಸ ಬೆಂಗಳೂರು ಆಗಿತ್ತು . ಉಳಿದ ಮೂವರಾದ ವೆಂಕಟರಾವ್ (41) , ನಾಗಣ್ಣ ( 33) , ಭರತ್ ಈಶ್ವಾರಾಚಾರಿ(23) ಎಲ್ಲಾ ಬೆಂಗಳೂರು ಜಿಗಣಿ ಗ್ರಾಮದವರು. ನಾಲ್ವರು ಆರೋಪಿಗಳು 2020 ಜನೇವರಿ ಯಿಂದ ಕಾರಾಗೃಹದಲ್ಲಿದ್ದಾರೆ.
ಈ ನಾಲ್ವರು ಆರೋಪಿಗಳಿಗೆ ಸಮಾನ ಅಪರಾಧಕ್ಕೆ ಸಮಾನ ಶಿಕ್ಷೆಯಾಗಿದೆ. ಸಾಂಧರ್ಬಿಕ ಸಾಕ್ಷ್ಯ ಆಧರಿಸಿ ಬಂದ ಮಹತ್ವದ ತೀರ್ಪು ಇದು ಎಂದು ವಿಶೇಷ ಪ್ರಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಆಳ್ವಾ ವಿವರಿಸಿದರು . ಆರೋಪಿಗಳ ಅಪರಾಧ ಸಾಬೀತಾಗಿದೆ. ಐಪಿಸಿ ಸೆಕ್ಷನ್ 302 ರ ಪ್ರಕಾರ ಕೊಲೆ ಅಪರಾಧ, 395 ಸೆಕ್ಷನ್ ಅಡಿ ದರೋಡೆ , 201 ಅಡಿ ಸಂಚು ಹಾಗೂ ಸಾಕ್ಷ್ಯ ನಾಶ ಅಡಿ ಪ್ರತ್ಯೇಕ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ , ದರೋಡೆಗೆ ಪ್ರತ್ಯೇಕ ಐದು ವರ್ಷ ಶಿಕ್ಷೆ , ಐದು ಸಾವಿರ ರೂ. ದಂಡ ವಿಧಿಸಲಾಗಿದೆ. ಅಪರಾಧಿಗಳು ಜೀವಾವಧಿ ಶಿಕ್ಷೆ ಜೊತೆಗೆ ಹೆಚ್ಚುವರಿ ಸಜೆ ಅನುಭವಿಸಬೇಕಿದೆ ಎಂದರು.
ಹಾಗೂ ನಾಲ್ವರು ಅಪರಾಧಿಗಳು ತಲಾ 2.70 ಲಕ್ಷ ರೂ.ಕೋರ್ಟಗೆ ತುಂಬಬೇಕು. ದಂಡದ ಮೊತ್ತ ಕಟ್ಟಲು ತಪ್ಪಿದಲ್ಲಿ 3 ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದರು .ಕೊಲೆ ಮಾಡಿದ ಅಪರಾಧಿ ನಂಬರ್ ಒನ್ ಸುಕೇಶ್ ನಾಯಕ ,ಕೊಲೆಯಾದ ನಾರಾಯಣ ನಾಯಕರ ತಮ್ಮನ ಮಗ ಹಾಗೂ ಕೊಲೆಯಾದ ಸಾವಿತ್ರಿ ನಾಯಕ ರ ತಂಗಿ ಮಗಳನ್ನೇ ಮದುವೆಯಾಗಿದ್ದ ಎಂದರು. ಅಪರಾಧಿಗಳು ಬಳಸಿದ ಕಾರು, ಕೊಲೆಗೆ ಮುನ್ನ ಖರಿದೀಸಿದ ವಸ್ತುಗಳು, ನಾಲ್ಕು ಜನ ಆರೋಪಿಗಳು ಬಳಸಿದ ಕಾರ್ ಟೋಲ್ ಗಳಲ್ಲಿ ಪಾಸಾದ ಸಮಯ, ನಾಲ್ವರು ಅಪರಾಧಿಗಳು ಬೆಂಗಳೂರಿನಿಂದ ಹಾವೇರಿಗೆ ಬಂದಾಗ ಮೊಬೈಲ್ ಸ್ವಿಚ್ ಆಫ್ ಮಾಡುವುದು ಹಾಗೂ ಕೊಲೆ ಮಾಡಿದ ನಂತರ ಮತ್ತೆ ಹಾವೇರಿ ದಾಟಿದ ಮೇಲೆ ಮೊಬೈಲ್ ಆನ್ ಮಾಡುವುದು, ಕೊಲೆಯಾದ ದಂಪತಿಗಳ ಆಭರಣ ಅಪರಾಧಿ ಮನೆಗಳಲ್ಲಿ ಪತ್ತೆಯಾಗುವುದು ,ಆರೋಪ ಸಾಬೀತು ಮಾಡಲು ನೆರವಾದವು ಎಂದು ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವಾ ವಿವರಿಸಿದರು.