ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಬೆಂಗಳೂರು, ತನ್ನ ಮೊದಲ ಎಂಐಕ್ಯೂ (ಮಾಹೆ ಬೆಂಗಳೂರು ಇಂಟರ್ಸ್ಕೂಲ್ ಕ್ವಿಜ್) ಜನವರಿ 5, 2024ರಂದು ಯಲಹಂಕ ಗೋವಿಂದಪುರ ಬೆಂಗಳೂರು ಕ್ಯಾಂಪಸ್ ನಲ್ಲಿ ಮುಕ್ತಾಯಗೊಂಡಿರುವುದಾಗಿ ಹೆಮ್ಮೆಯಿಂದ ಘೋಷಿಸಿದೆ. ಈ ಮಹತ್ವದ ಕಾರ್ಯಕ್ರಮವು 3500ಕ್ಕೂ ಹೆಚ್ಚು ಶಾಲೆಗಳ ಯುವ ಮನಸ್ಸುಗಳನ್ನು ಒಟ್ಟುಗೂಡಿಸಿತ್ತು. ಜೊತೆಗೆ ಬೌದ್ಧಿಕ ಮತ್ತು ಉತ್ಸಾಹದಾಯಕ ವಾತಾವರಣನ್ನು ಸೃಷ್ಟಿಸಿದ್ದಲ್ಲದೆ ಟೀಮ್ ವರ್ಕ್ ಮತ್ತು ಸಹಯೋಗದ ಮಹತ್ವವನ್ನು ತಿಳಿಸಿತು. ಕಾರ್ಯಕ್ರಮವನ್ನು ಮಾಹೆ ಬೆಂಗಳೂರಿನ ಪ್ರೊ ವೈಸ್ ಚಾನ್ಸಲರ್, ಮಾನ್ಯ ಪ್ರೊ.(ಡಾ.) ಮಧು ವೀರರಾಘವನ್ ಅವರು ಉದ್ಘಾಟಿಸಿದರು.
ಕ್ವಿಜ್ಮಾಸ್ಟರ್, ವೆಂಕಟೇಶ್ ಎಸ್ (ವೆಂಕಿ) ನೇತೃತ್ವದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಿತು. ಫಿನಾಲೆ ಪೂರ್ವ, ಮಧ್ಯ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ಎಂಬ ಆರು ವಿಭಿನ್ನ ವಲಯಗಳ 24 ಫೈನಲಿಸ್ಟ್ ಗಳ ನಡುವೆ ಬಿಗಿಯಾದ ಪೈಪೋಟಿಗೆ ಸಾಕ್ಷಿಯಾಯಿತು. ಸ್ಪರ್ಧೆಯು ವಿವಿಧ ಶೈಕ್ಷಣಿಕ ವಿಭಾಗಗಳ ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಭಾಗವಹಿಸುವವರ ಜ್ಞಾನದ ಆಳ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯ ಮತ್ತು ತಂಡವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸಿತು.
ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿಯ ಹ್ಯಾನ್ಸೆಲ್ ರಿಜು ಮ್ಯಾಥ್ಯೂ ಮತ್ತು ವರುಣ್ ಗೋಯಲ್ ಅವರು ವಿಜೇತರಾಗಿ ಹೊರಹೊಮ್ಮಿದರು. ಅವರು ಟ್ರೋಫಿ ಮನ್ನಣೆಯೊಂದಿಗೆ ರೂ.1,50,000 ಬಹುಮಾನವನ್ನು ಪಡೆದರು. ಸಿಲಿಗುರಿಯ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್ನ ರೋನಿತ್ ಬೋತ್ರಾ ಮತ್ತು ಕುಶಾಗ್ರಾ ಓಂ ದ್ವಿತೀಯ ಸ್ಥಾನ ಮತ್ತು ರೂ.1,00,000 ಬಹುಮಾನ ಪಡೆದರು. ಚೆನ್ನೈನ ಎಎಂಎಂ ಶಾಲೆಯ ಆರ್ಯನ್ ಘೋಷ್ ಮತ್ತು ಎಸ್ ಅಶ್ವಂತ್ ತೃತೀಯ ಸ್ಥಾನ ಮತ್ತು ರೂ.50,000 ಬಹುಮಾನ ಗಳಿಸಿದರು.
ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪ್ರೊ ವೈಸ್ ಚಾನ್ಸೆಲರ್ ಪ್ರೊ.ಮಧು ವೀರರಾಘವನ್ ಮಾತನಾಡುತ್ತಾ, “ಇಂಟರ್-ಸ್ಕೂಲ್ ರಸಪ್ರಶ್ನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದಕ್ಕೆ ನಾವು ಸಂತೋಷವಾಗಿದ್ದೇವೆ. ಸ್ಪರ್ಧೆಯಲ್ಲಿ ಹಾಜರಿದ್ದ ಯುವ ಮನಸ್ಸುಗಳು ಪ್ರದರ್ಶಿಸಿದ ಅಸಾಧಾರಣ ಪ್ರತಿಭೆಯ ಕುರಿತು ನಾನು ಹೆಮ್ಮೆಪಡುತ್ತೇನೆ. ಜ್ಞಾನದ ಅನ್ವೇಷಣೆಗೆ ಯಾವುದೇ ಮಿತಿಗಳಿಲ್ಲ, ಮತ್ತು ಇಂದಿನ ಕಾರ್ಯಕ್ರಮವು ನಮ್ಮ ಶಾಲಾ ಸಮುದಾಯದಲ್ಲಿನ ಬೌದ್ಧಿಕ ಚೈತನ್ಯದ ಅದ್ಭುತ ನಿದರ್ಶನವಾಗಿದೆ. ರಸಪ್ರಶ್ನೆಯಲ್ಲಿ ಭಾಗವಹಿಸಿದ ಎಲ್ಲರಿಗೂ, ಸಹಾಯ ಮಾಡಿದ ಶಿಕ್ಷಕರಿಗೆ ಮತ್ತು ಅದನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದ ಸಂಘಟಕರಿಗೆ ಧನ್ಯವಾದಗಳು. ಈ ಮುಖಾಮುಖಿಯು ಶಿಕ್ಷಣ, ಚಿಂತನೆ ಮತ್ತು ಟೀಮ್ ವರ್ಕ್ ಮೇಲೆ ಅಪಾರ ಪ್ರೀತಿಯನ್ನು ಹುಟ್ಟುಹಾಕಲಿ. ನೀವು ಬುದ್ಧಿವಂತಿಕೆ ಹೊಂದಲು ನಿಮ್ಮ ಅನ್ವೇಷಣೆಯನ್ನು ಪ್ರಾರಂಭಿಸಿದ್ದೀರಿ, ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಭರವಸೆಯ ಭವಿಷ್ಯವನ್ನು ನಿರ್ಮಿಸುವ ಸಾಮರ್ಥ್ಯವಿದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ” ಎಂದು ಹೇಳಿದರು.
ಚೊಚ್ಚಲ ರಸಪ್ರಶ್ನೆ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಾ ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಡೆಪ್ಯುಟಿ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಪ್ರಭು, “ಇಂದು ಅಂತಿಮ ಹಂತಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ನೋಡಲು ನಾನು ಉತ್ಸುಕತೆ ಹೊಂದಿದ್ದೆ. ದೇಶಾದ್ಯಂತ ಆನ್ಲೈನ್ ಸುತ್ತುಗಳಲ್ಲಿ ನೂರಾರು ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ 24 ತಂಡಗಳು ಫಿನಾಲೆಯಲ್ಲಿ ಭಾಗವಹಿಸಿವೆ. ಆದ್ದರಿಂದ ನಿಮ್ಮೆಲ್ಲರಿಗೂ ಮತ್ತೊಮ್ಮೆ ಆತ್ಮೀಯ ಸ್ವಾಗತ ಮತ್ತು ಇದನ್ನು ಇಲ್ಲಿ ಆಯೋಜಿಸಿದ್ದಕ್ಕಾಗಿ ಹಾಗೂ ಇದನ್ನು ಸ್ಮರಣೀಯಗೊಳಿಸಿದ್ದಕ್ಕಾಗಿ, ಎಂಐಕ್ಯೂನ ಮೊದಲ ಆವೃತ್ತಿಯನ್ನು ರಾಷ್ಟ್ರೀಯ ಮಟ್ಟದ ಆವೃತ್ತಿಯನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು. ಇದನ್ನು ವಾರ್ಷಿಕ ಕಾರ್ಯಕ್ರಮವನ್ನಾಗಿ ಮಾಡಲು ನಾವು ಉತ್ಸುಕರಾಗಿದ್ದೇವೆ ಮತ್ತು ನಿಮ್ಮಂತಹ ಇನ್ನೂ ಅನೇಕ ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸಲು ಎದುರು ನೋಡುತ್ತಿದ್ದೇವೆ”ಎಂದು ಹೇಳಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಬೆಂಗಳೂರು, ಮುಂಬರುವ ವರ್ಷಗಳಲ್ಲಿ ಎಂಐಕ್ಯೂ ಅನ್ನು ಯಶಸ್ವಿಯಾಗಿ ಆಯೋಜಿಸಲು ಎದುರು ನೋಡುತ್ತಿದೆ. ಉದ್ಘಾಟನಾ ಆವೃತ್ತಿಯು ಭವಿಷ್ಯದ ಆವೃತ್ತಿಗಳಿಗೆ ಉನ್ನತ ಗುಣಮಟ್ಟದ ಹಾದಿಯನ್ನು ಹಾಕಿಕೊಟ್ಟಿದ್ದು, ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಉತ್ಕೃಷ್ಟತೆ, ಸಹಯೋಗ ಮತ್ತು ನಾವೀನ್ಯತೆಗೆ ಮಾಹೆ ಬೆಂಗಳೂರಿನ ಬದ್ಧತೆಯನ್ನು ಸಾರಿಹೇಳುತ್ತದೆ. ಎಂಐಕ್ಯೂನ ಯಶಸ್ಸು, ಜ್ಞಾನ ಮತ್ತು ಬೌದ್ಧಿಕ ಪ್ರಯತ್ನಗಳನ್ನು ಸಂಭ್ರಮಿಸುವ ಸಂಸ್ಥೆಯ ಶ್ರದ್ಧೆಯನ್ನು ನೆನಪಿಸುತ್ತದೆ.