ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಬೆಂಗಳೂರು ನಗರ ಸಾರಿಗೆ ಸಂಸ್ಥೆ (BMTC) ಗೆ ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನದ ಸ್ಟಾರ್ ಬಸ್ ಇವಿಗಳನ್ನು ಪೂರೈಕೆ ಮಾಡುವ ಮೂಲಕ ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದೆ. ಒಟ್ಟು 921 ಸ್ಟಾರ್ ಬಸ್ ಇವಿ ಅಂದರೆ ವಿದ್ಯುತ್ ಚಾಲಿತ ಬಸ್ ಗಳನ್ನುಯ ಪೂರೈಕೆ ಮಾಡುವ ಸಂಬಂಧ ಟಾಟಾ ಮೋಟರ್ಸ್ ನ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲೂಶನ್ಸ್ ಲಿಮಿಟೆಡ್ ಮತ್ತು ಬಿಎಂಟಿಸಿ ನಡುವೆ ಒಪ್ಪಂದವಾಗಿದೆ. ಈ ಬಸ್ ಗಳನ್ನು ಸಂಪೂರ್ಣ ದೇಶೀಯವಾಗಿ ತಯಾರಿಸಲಾಗಿದ್ದು, 12 ಮೀಟರ್ ಲೋ-ಫ್ಲೋರ್ ನ ಎಲೆಕ್ಟ್ರಿಕಲ್ ಬಸ್ ಗಳಾಗಿವೆ. ಒಪ್ಪಂದದ ಪ್ರಕಾರ ಮುಂದಿನ 12 ವರ್ಷಗಳ ಅವಧಿಯಲ್ಲಿ 921 ಬಸ್ ಗಳನ್ನು ಪೂರೈಕೆ ಮಾಡಿ ಅವುಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಜವಾಬ್ದಾರಿಯನ್ನು ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲೂಶನ್ಸ್ ಲಿಮಿಟೆಡ್ ನೋಡಿಕೊಳ್ಳಲಿದೆ. ಬಿಎಂಟಿಸಿಗೆ ಈ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸುವ ಮೂಲಕ ಟಾಟಾ ಕಂಪನಿಯು ಬೆಂಗಳೂರು ನಗರದ ನಾಗರಿಕರಿಗೆ ಆರಾಮದಾಯಕ, ಅನುಕೂಲಕರ ಮತ್ತು ಶೂನ್ಯ ಮಾಲಿನ್ಯದ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ ಉಪಕ್ರಮಗಳನ್ನು ಅಳವಡಿಸಿಕೊಂಡು ಶೂನ್ಯ ಮಾಲಿನ್ಯದ ವಿದ್ಯುತ್ ಚಾಲಿತ ಬವಸ್ ಗಳನ್ನು ಮುಂದಿನ ಪೀಳಿಗೆ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾಗಿದೆ. ಸುರಕ್ಷಿತವಾದ ಬ್ಯಾಟರಿ ವ್ಯವಸ್ಥೆಗಳು, ಆರಾಮದಾಯಕ ಮತ್ತು ಅನುಕೂಲಕರವಾದ ಇಂಟ್ರಾ-ಸಿಟಿ ಪ್ರಯಾಣಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿ ಈ ಬಸ್ ಗಳು ಸುಸಜ್ಜಿತವಾಗಿವೆ.
ಟಾಟಾ ಮೋಟರ್ಸ್ ನ ಈ ಎಲೆಕ್ಟ್ರಿಕ್ ಬಸ್ ಅನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವರು ಮತ್ತು ಬಿಎಂಟಿಸಿ ಅಧ್ಯಕ್ಷರಾದ ರಾಮಲಿಂಗಾರೆಡ್ಡಿ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಬಿಎಂಟಿಸಿ (ಎಸ್&ವಿ) ನಿರ್ದೇಶಕರಾದ ಕಲಾ ಕೃಷ್ಣಮೂರ್ತಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು ಇದ್ದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ಮಾತನಾಡಿ, “ಬೆಂಗಳೂರು ನಗರದಲ್ಲಿ ಟಾಟಾ ಎಲೆಕ್ಟ್ರಿಕ್ ಬಸ್ ಗಳ ಮೂಲಮಾದರಿಗಳ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಟಾಟಾ ಮೋಟರ್ಸ್ ನ ಅತ್ಯಾಧುನಿಕ ಬಸ್ ಗಳನ್ನು ಪರಿಚಯಿಸಲು ನಮಗೆ ಸಂತೋಷವಾಗುತ್ತಿದೆ. ಈ ಎಲೆಕ್ಟ್ರಿಕ್ ಬಸ್ ಗಳ ಗಮನಾರ್ಹವಾದ ಕಾರ್ಯಕ್ಷಮತೆಯು ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ನಮ್ಮ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಬಿಎಂಟಿಸಿ ಹೊಂದಿರುವ ಬದ್ಧತೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಬಸ್ ಗಳು ಪರಿಸರ ಸ್ನೇಹಿ ಸಾರಿಗೆಗೆ ಕೊಡುಗೆ ನೀಡುವುದರ ಜೊತೆಗೆ ನಗರದಲ್ಲಿ ಶಬ್ಧ-ಮುಕ್ತ ಮತ್ತು ಆರಾಮದಾಯ ಸಾರಿಗೆ ವ್ಯವಸ್ಥೆಗೆ ಕೊಡುಗೆಯನ್ನು ನೀಡುತ್ತವೆ’’ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲೂಶನ್ಸ್ ಲಿಮಿಟೆಡ್ ನ ಸಿಇಒ ಮತ್ತು ಎಂಡಿ ಅಸೀಂ ಕುಮಾರ್ ಮುಖ್ಯೋಪಾಧ್ಯಾಯ್ ಅವರು, “ಬಿಎಂಟಿಸಿ ಫ್ಲೀಟ್ ನಲ್ಲಿ ಸೇರ್ಪಡೆಗೊಂಡ ಟಾಪ್-ಆಫ್-ಲೈನ್ ಸ್ಟಾರ್ ಬಸ್ ಇವಿಗಳನ್ನು ವೀಕ್ಷಿಸಲು ನಾವು ಉತ್ಸುಕರಾಗಿದ್ದೇವೆ. ಬೆಂಗಳೂರಿನ ನಾಗರಿಕರಿಗೆ ನಮ್ಮ ಕೊಡುಗೆಯು ಅತ್ಯಾಧುನಿಕ, ಪರಿಸರ ಸ್ನೇಹಿ ಕೊಡುಗೆಗಳಿಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಬಸ್ಸುಗಳು ಬಿಎಂಟಿಸಿಯ ಫ್ಲೀಟ್ ಅನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಸಾರ್ವಜನಿಕ ಸಾರಿಕೆಯನ್ನು ಸುರಕ್ಷಿತ, ಆರಾಮದಾಯಕ, ತಂತ್ರಜ್ಞಾನ ಚಾಲಿತ ಮತ್ತು ಶಕ್ತಿ-ಸಮರ್ಥವಾಗಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಈ ಬಸ್ಸುಗಳನ್ನು ಅತ್ಯಾಧುನಿಕ ಸೌಲಭ್ಯಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ಹಂತಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗಿದೆ’’ ಎಂದು ತಿಳಿಸಿದರು.
ಟಾಟಾ ಮೋಟರ್ಸ್ ಇದುವರೆಗೆ ದೇಶದ ಹಲವು ನಗರಗಳಿಗೆ 1,500 ಬಸ್ ಗಳನ್ನು ಪೂರೈಕೆ ಮಾಡಿದೆ. ಈ ಬಸ್ ಗಳು 10 ಕೋಟಿ ಕಿಲೋಮೀಟರ್ ಗೂ ಅಧಿಕ ದೂರದವರೆಗೆ ಕ್ರಮಿಸಿವೆ. ಶೇ.95 ರಷ್ಟು ಕಾರ್ಯಕ್ಷಮತೆಯನ್ನು ಹೊಂದಿರುವುದು ಸಾಬೀತಾಗಿದೆ. ಟಾಟಾ ಸ್ಟಾರ್ ಬಸ್ ಇವಿ ಒಂದು ಕಟ್ಟಿಂಗ್ ಎಡ್ಜ್ ಇ-ಬಸ್ ಆಗಿದ್ದು, ನಗರ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರ ಪೂರ್ಣ-ಎಲೆಕ್ಟ್ರಿಕ್ ಡ್ರೈವ್ ಟೋನ್ ನೊಂದಿಗೆ ಈ ಅತ್ಯಾಧುನಿಕ ವಾಹನವು ಶಕ್ತಿ ಬಳಕೆಯನ್ನು ಉತ್ತಮಗೊಳಿಸುತ್ತದೆ. ಇದು ಕಡಿಮೆ ಶಕ್ತಿಯ ಬಳಕೆ ಮತ್ತು ಕಾರ್ಯಾಚರಣೆ ವೆಚ್ಚಗಳಿಗೆ ಕಾರಣವಾಗುತ್ತದೆ. ಇದರ ಬೋರ್ಡಿಂಗ್ ಸುಲಭವಾಗಿರುತ್ತದೆ. ಆರಾಮದಾಯಕವಾದ ಆಸನ ವ್ಯವಸ್ಥೆ ಮತ್ತು ಚಾಲಕ ಸ್ನೇಹಿ ಕಾರ್ಯಾಚರಣೆಗಳಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ. ಸಂಪೂರ್ಣವಾಗಿ ಶೂನ್ಯ ಹೊರಸೂಸುವಿಕೆಯನ್ನು ಖಚಿತಪಡಿಸುವುದರಿಂದ ಇದು ಪರಿಸರಸ್ನೇಹಿ ವಾಹನವಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಶನ್, ಏರ್ ಸಸ್ಪೆನ್ಷನ್, ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ, ಪ್ಯಾನಿಕ್ ಬಟನ್ ನಂತಹ ಇನ್ನಿತರ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್ ಸ್ವಚ್ಛವಾದ ಸಾರ್ವಜನಿಕ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಗರ ಪ್ರಯಾಣಿಕರ ಸಾರಿಗೆ ಅಗತ್ಯತೆಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.