ಮಂಗಳೂರು: ಕೇರಳದಲ್ಲಿ ಕೋರೊನಾ ರೂಪಾಂತರಿ ಜೆಎನ್ 1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಗಡಿಭಾಗವಾದ ತಲಪಾಡಿಯಲ್ಲಿ ಆರೋಗ್ಯ ಇಲಾಖೆ ಮತ್ತು ತಲಪಾಡಿ ಗ್ರಾಮ ಪಂಚಾಯತ್ ನಿಂದ ಜಾಗೃತಿ ಕಾರ್ಯಕ್ರಮ ಗುರುವಾರದಿಂದ ಆರಂಭವಾಗಿದೆ.
ಕೋಟೆಕಾರು ಆರೋಗ್ಯಕೇಂದ್ರದ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಗಡಿಯಲ್ಲಿ ಬ್ಯಾನರ್ ಹಾಕಿ ಜಾಗೃತಿಯೊಂದಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡುತ್ತಿದ್ದಾರೆ.
ತಲಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕೊರೊನಾ ಎಂಬ ಮಹಾಮಾರಿಯಿಂದ ರಕ್ಷಣೆಗೆ ಹಿರಿಯರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಶೀತ ಕಫ ಸೇರಿದಂತೆ ಆರೋಗ್ಯ ಸಮಸ್ಯೆಯಿರುವವರು ಸ್ಥಳೀಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ಗಡಿ ಪ್ರದೇಶದಲ್ಲಿ ಕೇರಳದಿಂದ ಬಂದಿರುವ ಪ್ರಯಾಣಿಕರು ಗುಂಪು ಸೇರದೆ ಅಂತರ ಕಾಯ್ದುಕೊಳ್ಳಬೇಕು ಎಂದು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಕುರಿತು ಕೋಟೆಕಾರು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಗೋಪಿ ಪ್ರಕಾಶ್ ಮಾಹಿತಿನೀಡಿ ಆತೋಗ್ಯ ಇಲಾಖೆಯ ಗೈಡ್ ಲೈನ್ಸ್ ನಂತೆ ಗಡಿ ಭಾಗದಲ್ಲಿ ಜಾಗೃತಿ ಕಾರ್ಯ ನಡೆಸುತ್ತಿದ್ದು ಕೇರಳ ಭಾಗದಿಂದ ಬರುವ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದರು.