ಮಂಗಳೂರು: ಮಾಂಡ್ ಸೊಭಾಣ್ ನಿರ್ಮಾಣದ ‘ಅಸ್ಮಿತಾಯ್’ ಕೊಂಕಣಿ ಚಲನಚಿತ್ರವು 100 ನೇ ದಿನದ ಮೈಲಿಗಲ್ಲನ್ನು 23-12-23 ರಂದು ದಾಟಲಿದೆ. ಅಂದು ಬಿಜಯ್ ಭಾರತ್ ಸಿನೆಮಾದಲ್ಲಿ ಸಂಜೆ 4.00 ಗಂಟೆಗೆ ಶತದಿನಾಚರಣೆ ನಡೆಯಲಿದೆ. ಕರ್ನಾಟಕದ ಕೊಂಕಣಿ ಚಲನಚಿತ್ರ ಕ್ಷೇತ್ರದಲ್ಲಿ ಇದುವರೆಗೆ ಶತದಿನ ಪೂರೈಸಿದ ಪ್ರಥಮ ಸಿನೆಮಾ ಎಂದು ಅಸ್ಮಿತಾಯ್ ದಾಖಲೆ ಬರೆಯಲಿದೆ. ಮುಂಬಯಿಯ ಉದ್ಯಮಿ ಹಾಗೂ ಶಿಕ್ಷಣ ಕ್ಷೇತ್ರದ ದಿಗ್ಗಜ ಆಲ್ಡೆಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಸಿನೆಮಾದ ನಟ-ನಿರ್ದೇಶಕ ವರ್ಗವನ್ನು ಗೌರವಿಸಲಿದ್ದಾರೆ.
ಗಿನ್ನೆಸ್ ದಾಖಲೆ ಬರೆದ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್, `ಚಲನಚಿತ್ರದಿಂದ ಚಳುವಳಿ’ ಎಂಬ ಧ್ಯೇಯದೊಡನೆ ನಿರ್ಮಿಸಿದ ‘ಅಸ್ಮಿತಾಯ್’ ಚಲನಚಿತ್ರವು ಸೆಪ್ಟೆಂಬರ್ 15 ರಂದು ತೆರೆ ಕಂಡಿದ್ದು, ಇದುವರೆಗೆ ಮಂಗಳೂರು, ಉಡುಪಿ, ಉತ್ತರ ಕನ್ನಡ, ಗೋವಾ, ಮೈಸೂರು, ಬೆಂಗಳೂರು, ಕೇರಳ, ಅಹ್ಮದಾಬಾದ್, ಮುಂಬಯಿ ಹಾಗೂ ಯು.ಎ.ಇ., ಕುವೇಯ್ಟ್, ಬಹರೇಯ್ನ್, ಸೌದಿ ಅರೇಬಿಯಾ, ಕತಾರ್, ಓಮನ್, ಇಂಗ್ಲೆAಡ್, ಆಯರ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಕೆನಡಾ, ಅಮೇರಿಕಾ, ಜರ್ಮನಿ ಹೀಗೆ 14 ದೇಶಗಳ ವಿವಿಧ ಪ್ರದೇಶಗಳಲ್ಲಿ ಸುಮಾರು 490 ಕ್ಕೂ ಮಿಕ್ಕಿ ಪ್ರದರ್ಶನ ಕಂಡಿದೆ. ವಾಷಿಂಗ್ಟನ್ ಡಿಸಿಯ ಸೌಥ್ ಏಷಿಯಾ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದೆ.
ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದು, ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ನೀಡಿದ್ದಾರೆ. ಬಾಲರಾಜ ಗೌಡ ಸಿನೆಮಾಟೊಗ್ರಾಫಿ, ಮೇವಿನ್ ಜೊಯೆಲ್ ಪಿಂಟೊ ಸಂಕಲನ ಮಾಡಿದ್ದಾರೆ. ಮಾರ್ಕೆಟ್ ಬರ್ಡ್ ಹಾಗೂ ಕೊಮಿಡಿ ಕಂಪೆನಿ ಇವರು ಪ್ರಚಾರದ ಉಸ್ತುವಾರಿ ವಹಿಸಿದ್ದು, ವಿನೂತನ ಪರಿಕಲ್ಪನೆಗಳ ಮುಖಾಂತರ ಈ ಚಿತ್ರವನ್ನು ಜನರೆಡೆಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ.
ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಮುದಗೊಳಿಸುವ ಸಂಗೀತ ರಚಿಸಿದ್ದು, ಪ್ರಸಿದ್ಧ ಗಾಯಕರಾದ ನಿಹಾಲ್ ತಾವ್ರೊ, ಜೊಯ್ಸ್ ಒಝೇರಿಯೊ, ಡಿಯಲ್ ಡಿಸೋಜ, ವೈಭವ್ ಕಾಮತ್ ಮತ್ತಿತರ ಗಾಯಕರು ದನಿಗೂಡಿಸಿದ್ದಾರೆ. ಡೆನಿಸ್ ಮೊಂತೇರೊ, ಅಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕರ್, ಗೌರೀಶ್ ವೆರ್ಣೆಕರ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್, ಸುನೀಲ್ ಸಿದ್ದಿ, ಲುಲು ಫೊರ್ಟೆಸ್, ನವೀನ್ ಲೋಬೊ ಹೀಗೆ ಗೋವಾ ಮತ್ತು ಮಂಗಳೂರಿನ ಖ್ಯಾತ ಕಲಾವಿದರು ಪ್ರಮುಖ ಭೂಮಿಕೆಯಲ್ಲಿದ್ದಾರೆ. ಇತರ ಸುಮಾರು 500 ಕ್ಕೂ ಮಿಕ್ಕಿ ಕಲಾವಿದರು ಪ್ರಥಮ ಬಾರಿಗೆ ಕ್ಯಾಮರಾದ ಮುಂದೆ ಕಾಣಿಸಿದ್ದಾರೆ. ಮಾಂಡ್ ಸೊಭಾಣ್ ಈ ಚಿತ್ರವನ್ನು ಜನರ, ದಾನಿಗಳ ಸಹಕಾರದಿಂದ ನಿರ್ಮಿಸಿದ್ದು ಅಧ್ಯಕ್ಷ ಲುವಿ ಜೆ ಪಿಂಟೊ ನಿರ್ಮಾಣ ಮತ್ತು ಪ್ರದರ್ಶನಗಳ ಉಸ್ತುವಾರಿ ವಹಿಸಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಎರಿಕ್ ಒಝೆರಿಯೊ – (ಕತೆ ),ಲುವಿಸ್ ಜೆ. ಪಿಂಟೊ – (ನಿರ್ಮಾಪಕ ),ಜೊಯೆಲ್ ಪಿರೇರಾ – (ಚಿತ್ರಕತೆ, ಸಂಭಾಷಣೆ ),ನವೀನ್ ಲೋಬೊ – (ಕಾರ್ಯ ನಿರ್ವಾಹಕ ನಿರ್ಮಾಪಕ ),ಅಶ್ವಿನ್ ಡಿಕೋಸ್ತಾ, ವೆನ್ಸಿಟಾ ಡಾಯಸ್ (ಪಾತ್ರವರ್ಗ) ಹಾಜರಿದ್ದರು.