ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲವು ಭಾರತದ ಪ್ರಥಮ ಸಮರ್ಪಿತ ಅಂತರಿಕ್ಷ ವೀಕ್ಷಣಾಲಯ ಆದಿತ್ಯ- ಎಲ್ 1 ನಲ್ಲಿ ಸೌರ ನೇರಳಾತೀತ ಚಿತ್ರಣ ದೂರದರ್ಶಕ (ಸೋಲಾರ್ ಆಲ್ಟ್ರಾವಾಯಿಲೆಟ್ ಇಮೇಜಿಂಗ್ ಟೆಲಿಸ್ಕೋಪ್ = ಎಸ್ಯುಐಟಿ = ಸ್ಯೂಟ್) ನಲ್ಲಿ ಪ್ರಥಮ ಚಿತ್ರವನ್ನು ತೆಗೆದ ಸಂಭ್ರಮದಲ್ಲಿ ಭಾಗಿಯಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೊ) ಯು ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ-ಎಲ್1 ನ್ನು ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಿತ್ತು.
ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ (ಎಂಸಿಎನ್ಎಸ್) ನ ನಿರ್ದೇಶಕ, ಇಸ್ರೋದ ಅಂತರಿಕ್ಷ ವಿಜ್ಞಾನ ಕಾರ್ಯಕ್ರಮ ಕೇಂದ್ರ (ಸ್ಪೇಸ್ ಸಾಯನ್ಸ್ ಪ್ರೋಗ್ರಾಮ್ ಆಫೀಸ್) ದ ಮಾಜಿ ನಿರ್ದೇಶಕ ಡಾ. ಶ್ರೀಕುಮಾರ್ ಅವರು ಆದಿತ್ಯ- ಎಲ್ 1 ನ ಉಡಾವಣೆಯ ಕುರಿತು ವಿವರಿಸುತ್ತ, ‘ಆದಿತ್ಯ ಎಲ್1 ವಿಶಿಷ್ಟ ಸ್ಥಾನ ಲ್ಯಾಂಗ್ರೇಜ್ ಪಾಯಿಂಟ್ -1 ರಲ್ಲಿ ನೆಲೆ ಕಂಡಿದ್ದು ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆ ಬಹುತೇಕ ಸಮತುಲ್ಯ ಸ್ಥಿತಿಯಲ್ಲಿದೆ. ಇದು ಕಕ್ಷೆಯಲ್ಲಿ ಕಡಿಮೆ ನಿಭಾವಣ ಹೊಣೆಯ ಸ್ಥಾನವಾಗಿದ್ದು ಇದು ಸೂರ್ಯನ ಬಹುತೇಕ ನಿರಂತರ ಗೋಚರತೆಯನ್ನು ಸುಗಮಗೊಳಿಸುತ್ತದೆ.
ಸ್ಯೂಟ್ (ಸೌರ ನೇರಳಾತೀತ ಚಿತ್ರಣ ದೂರದರ್ಶಕ= ಸೋಲಾರ್ ಆಲ್ಟ್ರಾವಾಯಿಲೆಟ್ ಇಮೇಜಿಂಗ್ ಟೆಲಿಸ್ಕೋಪ್=ಎಸ್ಯುಐಟಿ) ನ್ನು ಅಭಿವೃದ್ಧಿ ಪಡಿಸುವಲ್ಲಿ ಹಲವು ಸಂಸ್ಧೆಗಳು ಕೈ ಜೋಡಿಸಿವೆ. ಪುಣೆಯ ಖಗೋಳ ವಿಜ್ಞಾನ ಮತ್ತು ಖಗೋಳಭೌತ ವಿಜ್ಞಾನದ ಅಂತರ್-ವಿಶ್ವವಿದ್ಯಾನಿಲಯ ಕೇಂದ್ರ (ಇಂಟರ್ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಪಿಸಿಕ್ಸ್ = ಐಯುಸಿಎಎ) ವು ಮುಖ್ಯ ಸಂಸ್ಥೆಯಾಗಿದ್ದು ಇದರೊಂದಿಗೆ ಕೈ ಜೋಡಿಸಿದ ಸಂಸ್ಥೆಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನ ಕೇಂದ್ರ (ಇಸ್ರೋ) ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸೇರಿವೆ.
ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ (ಎಂಸಿಎನ್ಎಸ್) ನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಜಿತ್ ಪದಿನ್ಹತ್ತೇರಿ ಅವರು ಸ್ಯೂಟ್ (ಎಸ್ಯುಐಟಿ) ನ ಯೋಜನಾ ವಿಜ್ಞಾನಿ ಮತ್ತು ನಿರ್ವಹಣ ವ್ಯವಸ್ಥಾಪಕರಾಗಿದ್ದು ಅವರು ಈ ಉಡಾವಣೆಯ ವಿವರವನ್ನು ನೀಡಿದ್ದು ಹೀಗೆ : ಸ್ಯೂಟ್ ನ ಸಾಧನೆ ವಿಶಿಷ್ಟವಾದುದಾಗಿದೆ ಮತ್ತು ಜಗತ್ತಿನಲ್ಲಿ ಪ್ರಥಮ ಬಾರಿಗೆ ನೇರಳಾತೀತ ವರ್ಣವಿಭಾಗೀಕರಣ ಶ್ರೇಣಿ (ಆಲ್ಟ್ರಾವಾಯಿಲೆಟ್ ಸ್ಪೆಕ್ಟ್ರಲ್ ರೇಂಜ್) 200 ಎನ್ಎಂ ನಿಂದ 400 ಎನ್ಎಂ ನ ನಡುವೆ ಸೂರ್ಯನ ಚಿತ್ರ ತೆಗೆಯಲಾಗಿದೆ. ಸೌರಲೋಹಜಲದಲ್ಲಿ (ಸೋಲಾರ್ ಪ್ಲಾಸ್ಮಾ) ಕಾಂತೀಯದ್ರವವಾಹಕ (ಮ್ಯಾಗ್ನೆಟೋಹೈಡ್ರೋಡೈನಾಮಿಕ್=ಎಂಎಚ್ಡಿ) ದ ಪ್ರಕ್ರಿಯೆಯು ಸೂರ್ಯನ ಮೇಲೆ ಕಪ್ಪುಕಲೆಗಳು, ಅಸಹಜವಾಗಿ ಹೊಳೆಯುವ ಭಾಗಗಳು, ತಂತುಗಳನ್ನು ಉಂಟುಮಾಡುತ್ತದೆ. ಇವು ಕೆಲವೊಮ್ಮೆ ಅನಿರೀಕ್ಷಿತವಾಗಿ ಬೃಹತ್ ಮೊತ್ತದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಈ ಶಕ್ತಿಯು ಮಿಲಿಯಗಟ್ಟಲೆ ಆ್ಯಟಂಬಾಬ್ಗಳು ಆಸ್ಫೋಟಿಸುವುದಕ್ಕೆ ಸಮವಾಗಿರುತ್ತದೆ. ಇವನ್ನು ಸೌರ ಜ್ವಾಲೆ (ಸೋಲಾರ್ ಫ್ಲ್ಯಾರ್ಸ್) ಎನ್ನಲಾಗುತ್ತದೆ. ಲೋಹ ದ್ರವ (ಪ್ಲಾಸ್ಮಾ) ದ ಚಿಮ್ಮುವಿಕೆಯನ್ನು ಪೂರ್ಣ ವಿಸರ್ಜನೆ (ಕೋರೋನಲ್ ಮಾಸ್ ಇಜೆಕ್ಷನ್) ಎನ್ನುತ್ತೇವೆ. ಈ ಎಲ್ಲ ಪ್ರಕ್ರಿಯೆಗಳನ್ನು ಸ್ಯೂಟ್ (ಎಸ್ಯುಐಟಿ) ಅಧ್ಯಯನ ಮಾಡಿದೆ ಮತ್ತು ಇದಕ್ಕೆ ಆಧಾರವಾಗಿರುವ ಭೌತವಿಜ್ಞಾನವನ್ನು ಸರಿಯಾಗಿ ಪರಿಶೀಲಿಸಿದೆ. ನಾವೆಲ್ಲ ತಿಳಿದಿರುವ ಹಾಗೆ ಸೂರ್ಯನಿಂದ ಹೊಮ್ಮುವ ನೇರಳಾತೀತ ಕಿರಣಗಳು ಭೂಮಿಯ ಮೇಲೆ, ಅದರಲ್ಲೂ ಮೇಲ್ಪದರದಲ್ಲಿ ನೇರ ಪರಿಣಾಮವನ್ನು ಬೀರುತ್ತವೆ. ಸ್ಯೂಟ್ (ಎಸ್ಯುಐಟಿ) ಯು ಸಾಮಾನ್ಯವಾಗಿ ಮತ್ತು ಕಾಂತೀಯ ಚಟುವಟಿಕೆಗಳ ಸಂದರ್ಭದಲ್ಲಿ ಸೂರ್ಯನಿಂದ ಎಷ್ಟು ನೇರಳಾತೀತ ಕಿರಣಗಳು ಹೊಮ್ಮುತ್ತವೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ ಈ ಕಾರ್ಯದಲ್ಲಿ ಮುಂದುವರಿದಿದೆ.
ಮಾಹೆಯ ಉಪಕುಲಪತಿಗಳಾದ ಲೆ. ಜ. (ಡಾ.) ಎಂ. ಡಿ. ವೆಂಕಟೇಶ್ ಅವರು ಮಹತ್ಸಾಧನೆಯಲ್ಲಿ ಮಾಹೆಯು ಭಾಗಿಯಾದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ‘ಇದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ. ರಾಷ್ಟ್ರೀಯ ಮಹತ್ತ್ವದ ಉದ್ದೇಶವಿರುವ ಕಾರ್ಯಗಳಿಗೆ ಮಾಹೆಯು ಯಾವತ್ತೂ ಬೆಂಬಲವನ್ನು ಮತ್ತು ಕೊಡುಗೆಯನ್ನು ನೀಡಲಿದೆ’ ಎಂದರು.
ಆದಿತ್ಯ – ಎಲ್ 1 ನಲ್ಲಿ ಸ್ಯೂಟ್ (ಎಸ್ಯುಐಟಿ) ನಿಂದ ತೆಗೆದ ಎರಡು ಪ್ರಪ್ರಥಮ ಚಿತ್ರಗಳು. ಎಡಬದಿಯ ಚಿತ್ರವು ವರ್ಣವಿಭಜನ ಆವರ್ತನ ಶ್ರೇಣಿಯ ಶಿಖರ ಪ್ರಸರಣ (ಸ್ಪೆಕ್ಟ್ರಲ್ ಬ್ಯಾಂಡ್ವಿಡ್ತ್ ಪೀಕ್ ಟ್ರಾನ್ಸ್ಮಿಶನ್) 388 ಎನ್ಎಂ ನಿಂದ 1 ಎನ್ಎಂನೊಳಗೆ ತೆಗೆದ ಚಿತ್ರವಾಗಿದೆ. ಇಲ್ಲಿ ಕಾಣುತ್ತಿರುವ ಕಪ್ಪು ಕಲೆಗಳನ್ನು ಸೂರ್ಯನ ಕಲೆಗಳು ಎನ್ನಲಾಗುತ್ತದೆ. ಇಲ್ಲಿ ಉಳಿದ ಭಾಗಗಳಿಗೆ ಹೋಲಿಸಿದರೆ ಕಾಂತೀಯ ಶಕ್ತಿಯು ಅತ್ಯಂತ ಅಧಿಕವಾಗಿರುತ್ತದೆ. ಈ ಕಪ್ಪುಕಲೆಗಳ ಸುತ್ತ ಇರುವ ಭಾಗಗಳು ನೇರಳಾತೀತ ಕಿರಣಗಳನ್ನು ಕೆಲವು ನಿರ್ದಿಷ್ಟ ವರ್ಣಗಳಲ್ಲಿ ಹೊರಹೊಮ್ಮುತ್ತವೆ. ಇವನ್ನು ಅಸಹಜವಾಗಿ ಹೊಳೆಯುವ ಭಾಗಗಳು (ಪ್ಲೇಜಸ್) ಎಂದು ಗುರುತಿಸಲಾಗುತ್ತದೆ. (ಬಲಬದಿಯ ಚಿತ್ರವನ್ನು ನೋಡಿ) ಹೆಚ್ಚಿನ ಚಿತ್ರಗಳಿಗಾಗಿ ಇಸ್ರೋದ ಜಾಲತಾಣ ಪುಟವನ್ನು ನೋಡಬಹುದು : https://www.isro.gov.in/Aditya_L1_SUIT.htmll