ಶಿವಮೊಗ್ಗ: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಅವರನ್ನು ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತನ ಮೇಲೆ ಆರು ಜನರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನ್ ಅವರ ಹಣೆ ಮತ್ತು ಕಿವಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಪಟ್ಟಣದ ಕಾಂಚನ್ ಹೋಟೆಲ್ ನಿಂದ ಭಾನುವಾರ ರಾತ್ರಿ ಊಟದ ಪಾರ್ಸೆಲ್ ತರಲು ಹೋಗಿದ್ದಾಗ ಗ್ಯಾಂಗ್ ಅವರ ಮೇಲೆ ಹಲ್ಲೆ ನಡೆಸಿದೆ.
ಸ್ಥಳೀಯ ಕಾಂಗ್ರೆಸ್ ಶಾಸಕ ಸಂಗಮೇಶ್ವರ್ ಅವರನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗೋಕುಲ್ ಕೃಷ್ಣನ್ ಸೋಮವಾರ ಹೇಳಿದ್ದಾರೆ. ಭದ್ರಾವತಿ ಪಟ್ಟಣದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮತ್ತು ಎಂಪಿಎಮ್ಎಲ್ ಕಾರ್ಖಾನೆಯನ್ನು ಪುನರಾರಂಭಿಸುವ ಭರವಸೆಯ ಬಗ್ಗೆ ಸಂತ್ರಸ್ತ ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಿದ್ದರು. ಪೋಸ್ಟ್ ನಂತರ, ಸಂತ್ರಸ್ತನ ಕಾರನ್ನು ಗುರಿಯಾಗಿಸಿಕೊಂಡು ಶನಿವಾರ ಹಾನಿಗೊಳಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ನ್ಯೂಟೌನ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಗಣೇಶ್ (22), ಹರ್ಷ (22) ಮತ್ತು ನಾಗೇಗೌಡ (22) ಎಂದು ಗುರುತಿಸಲಾಗಿದೆ.