ಮಂಗಳೂರು: ಸ್ಪಂದನಾ ಟ್ರಸ್ಟ್ ಇನ್ಫೆಂಟ್ ಮೇರಿಸ್ ಕಾನ್ವೆಂಟ್ ಜೆಪ್ಪು, ತಮ್ಮ ಸಂಸ್ಠೆಯ 52 ನೇ ವಾರ್ಷಿಕೋತ್ಸವವನ್ನು ಹಾಗೂ ಕ್ರಿಸ್ಮಸ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿದರು.
ಭಗಿನಿ ಸಿಲ್ವಿಯಾ ಫೆರ್ನಾಂಡಿಸ್ ಇವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ನೆರೆದ ಸ್ವ-ಸಹಾಯ ಸಂಘದ ಮಹಿಳೆಯರನ್ನು ಹಾಗೂ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಿಯ ಮಹಿಳೆಯರೇ, ನೀವು ಸದಾ ನಿಮ್ಮ ಮಕ್ಕಳ ಹಾಗೂ ನಿಮ್ಮ ಕುಟುಂಬದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಸಂಸ್ಥೆಯು ಸದಾ ನಿಮ್ಮ ಬಗ್ಗೆ, ನಿಮ್ಮ ಹಾಗೂ ಮಕ್ಕಳ ಬಗ್ಗೆ ಕಾಳಜಿವಹಿಸಿ, ಮಕ್ಕಳ ವಿದ್ಯಾಭ್ಯಾಸ, ಸರಕಾರದಿಂದ ಸಿಗುವ ಸೌಲಭ್ಯಗಳ ಲಭ್ಯತೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳನ್ನು ನಿಮ್ಮದಾಗಿಸಲು ಶ್ರಮಿಸುತ್ತಾರೆ. ನೀವು ನಿಮ್ಮ ಕಾಲ ಮೇಲೆ ನಿಂತು ಸ್ವಾಲಂಬನೆ ಸಾಧಿಸುವುದೇ ಸಂಸ್ಥೆಯ ಉದ್ದೇಶ ಎಂದು ಹೇಳಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಯೆನೆಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ, ಜನರಲ್ ಮೆಡಿಸಿನ್ ಪ್ರೊಫೆಸರ್ ಡಾ. ಸಿಡ್ನಿ ಡಿಸೋಜ ಕಾರ್ಯಕ್ರಮವನ್ನು ಉದ್ದೇಶಿಸಿ ಸ್ಪಂದನ ಟ್ರಸ್ಟಿನ ಕೆಲಸ, ಕಾರ್ಯವೈಖರಿ ಹಾಗೂ ಅವರು ಪಡುವ ಶ್ರಮಕ್ಕೆ ದೇವರು 100 ಪಟ್ಟು ಆಶೀರ್ವಾದಿಸಲಿ ಎಂದು ಹಾರೈಸಿದರು.
ನಿರ್ದೇಶಕರು ಸಿ.ಒ.ಡಿ.ಪಿ, ವಂದನೀಯ ಗುರು ವಿನ್ಸೆಂಟ್ ಡಿ ಸೋಜ ನೆರೆದ ಸರ್ವರಿಗೂ ನಮ್ಮಲ್ಲಿ ತ್ಯಾಗ, ಪ್ರೀತಿ, ವಿಶ್ವಾಸ, ಶಾಂತಿ, ಸಹನೆ, ಕರುಣೆ, ಮಮತೆ ಇವೆಲ್ಲ ನಮ್ಮ ಜೀವನದಲ್ಲಿದ್ದು ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸೋಣ. ಬಾಲ ಯೇಸು ನಮ್ಮ ಕಾರ್ಪಣ್ಯಗಳನ್ನು ನಿವಾರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ನಮ್ಮನ್ನು ಹರಸಲಿ.
ಸ್ಪಂದನಾ ಟ್ರಸ್ಟಿನ ಆಡಳಿತಾಧಿಕಾರಿ ಭಗಿನಿ ಹೆಲೆನ್ ಫೆರ್ನಾಂಡಿಸ್ ರವರು ತಮ್ಮ ಕನ್ಯಾಜೀವನದ ಸ್ವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಇವರನ್ನು ಸಂಸ್ಥೆಯ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು. ಅನೇಕ ಮನೋರಂಜನೆ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಂಡಿದ್ದರು.