ಶಿರಸಿ: “ನಾನು ಕಾಲ್ಪನಿಕ ಕತೆಗಳನ್ನು ಬರೆಯುವುದಿಲ್ಲ. ನನ್ನ ಹೆಚ್ಚಿನ ಕತೆಗಳು ಸಮಾಜಿಕ ಅಸಮಾನತೆ, ಶೋಷಣೆಯ ಹಿನ್ನೆಲೆಯಲ್ಲೇ ಹುಟ್ಟಿಕೊಂಡಿವೆ. ನಾಗರಿಕ ಸಮಾಜದಲ್ಲಿ ಇಂದಿಗೂ ಅಸ್ಪ್ರಶ್ಯತೆಯ ಪಿಡುಗು ಚಾಲ್ತಿಯಲ್ಲಿರುವುದು ಶೋಚನೀಯ” ಎಂದು ಕಥಾಕಾರ, ಗೋವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಕಾಶ್ ಪರ್ಯೆಂಕರ್ ಅಭಿಪ್ರಾಯಪಟ್ಟರು.
ಅವರು ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಶಿರಸಿಯ ನರೇಬೈಲ್ನಲ್ಲಿ ಚಂದನ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದೊಂದಿಗೆ ದಸೆಂಬರ 4 ಸೋಮವಾರ ಆಯೋಜಿಸಿದ “ಕಥಾಸಂಧಿ ಮತ್ತು ಸಂವಾದ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಅಸ್ಪ್ರಶ್ಯತೆ ಮತ್ತು ಸಮಾಜಿಕ ಅಸಮಾನತೆಯ ಕಥಾ ಹಂದರವನ್ನೊಳಗೊಂಡ ’ಕಾಜ್ರೊ’ ಕತೆಯನ್ನು ಡಾ. ಪ್ರಕಾಶ್ ಪರ್ಯೆಂಕರ್ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದರು. ’ಕಾಜ್ರೊ’ ಕತೆಯನ್ನು ಆದರಿಸಿ ತಯಾರಿಸಲಾದ ಕೊಂಕಣಿ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಬಗ್ಗೆ ಈ ಸಂದರ್ಭದಲ್ಲಿ ಕಥೆಗಾರರು ಸ್ಮರಿಸಿದರು.
ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಕಥೆಗಾರ ಡಾ. ಪ್ರಕಾಶ್ ಪರ್ಯೆಂಕರ್ ಅವರನ್ನು ಪರಿಚಯಿಸಿ, ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಲ್ನಾಡ್ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಸಂಘದ ಸ್ಥಾಪಕ ಲಕ್ಷ್ಮೀ ನಾರಾಯಣ ಹೆಗಡೆ, ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯರಾದ ಎಚ್. ಎಮ್. ಪೆರ್ನಾಲ್, ಶ್ರೀವಿದ್ಯಾ ಕಾಮತ್ ಮತ್ತು ಸ್ಟ್ಯಾನಿ, ಬೇಳ ಈ ಸಂದರ್ಭದಲ್ಲಿ ಹಾಜರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಾರ್ಥನ ಮತ್ತು ಮೇಘನಾ – ಪ್ರಾರ್ಥನಾ ಗಿತೆಯನ್ನು ಹಾಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀವಿದ್ಯಾ ಕಾಮತ್ ನಿರೂಪಿಸಿದರು. ವಿಜಯೇಂದ್ರ ಲಾಡ್ ವಂದಿಸಿದರು.