ಮಂಗಳೂರು: ಡಿಸೆಂಬರ್ 03,2023 ರಂದು ಬೆಥನಿ ಪ್ರಾಂತೀಯ ಸಂಸ್ಥೆ ವಾಮಂಜೂರು ಇದರ ಹೊಸ ಕಟ್ಟಡದ ಉದ್ಘಾಟಣಾ ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಅಪರಾಹ್ನ 3.30ರ ವೇಳೆಗೆ ನೆರವೇರಿತು.
ವಂದನೀಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಇತರ ಹನ್ನೆರಡು ಮಂದಿ ಗುರುಗಳೊಂದಿಗೆ ಪೂಜಾವಿಧಿಯನ್ನು ನಡೆಸಿದರು. ಬೆಥನಿ ಸಂಸ್ಥೆಯ ಮಹಾಮಾತೆ ವಂದನೀಯ ಭಗಿನಿ ರೋಸ್ ಸೆಲಿನ್ರವರು ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬೆಥನಿ ಪ್ರಾಂತೀಯ ಸಂಸ್ಥೆ ವಾಮಂಜೂರು ಇದರ ಪ್ರಾಂತ್ಯಾಧಿಕಾರಿಣಿಯಾದ ವಂದನೀಯ ಭಗಿನಿ ಸಿಸಿಲಿಯಾ ಮೆಂಡೊನ್ಸಾರವರು ನಾಮ ಫಲಕವನ್ನು ಅನಾವರಣಗೊಳಿಸಿದರು.
ನಂತರ ಧರ್ಮಾಧ್ಯಕ್ಷರು ಇತರ ಗುರುಗಳೊಡನೆ ಸೇರಿ ಕಟ್ಟಡವನ್ನು ಆಶೀರ್ವಚಿಸಿದರು. ಭಗಿನಿ ರೊಯ್ಲಿನ್ ಮತ್ತು ಭಗಿನಿ ಶುಭರವರು ಅಶೀರ್ವಚನ ಕಾರ್ಯಕ್ರಮವನ್ನು ನಿರೂಪಿಸಿದರು. ಅಪರಾಹ್ನ ಸುಮಾರು 6 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ವಂದನೀಯ ಭಗಿನಿ ರೋಸ್ ಸೆಲಿನ್ರವರು ಅಧ್ಯಕ್ಷ ಸ್ಥಾನ ವಹಿಸಿ ಬೆಥನಿ ಭಗಿನಿಯರು ತಮ್ಮ ಸಂಸ್ಥಾಪಕರ ಆಶಯವನ್ನು ಪೂರೈಸಲು ಕರೆ ನೀಡಿದರು.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ ಇಂಜಿನಿಯರ್, ಗುತ್ತಿಗೆದಾರರು ಹಾಗೂ ಇತರ ಕಾರ್ಮಿಕರಿಗೆ ಕಾಣಿಕೆಯನ್ನಿತ್ತು ಗೌರವಿಸಲಾಯಿತು. ಸಂಸ್ಥೆಯ ಖಜಾಂಚಿ ಭಗಿನಿ ಫ್ಲಾವಿಯ ವಿಲ್ಮ, ಪ್ರಾಂತ್ಯಾಧಿಕಾರಿಣಿ ಭಗಿನಿ ಸಿಸಿಲಿಯಾ ಮೆಂಡೊನ್ಸಾ, ಮಹಾಮಾತೆ ಭಗಿನಿ ರೋಸ್ಸೆಲಿನ್ ಇವರನ್ನು ಕಟ್ಟಡಯೋಜನಾ ಕಾರ್ಯವನ್ನು ನೆರವೇರಿಸಿದಕ್ಕಾಗಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ವಾಮಂಜೂರು ಚರ್ಚಿನ ಮುಖ್ಯ ಗುರುಗಳು ವಂದನೀಯ ಗುರು ಜೇಮ್ಸ್ ಡಿಸೋಜಾ, ಸಂತ ಜೋಸೆಫ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕರಾದ ವಂದನೀಯ ಗುರು ಕೆನೆತ್ ಕ್ರಾಸ್ತಾರವರು ತಮ್ಮ ಭಾಷಣದಲ್ಲಿ ಬೆಥನಿ ಭಗಿನಿಯರ ಸೇವೆಯನ್ನು ಶ್ಲಾಘಿಸಿದರು. ಸಂತ ರೇಮಂಡ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ವಿತಾಲಿಸ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಗಿನಿ ಲೊಲಿಟಾ ಪಿರೇರಾ ಹಾಗೂ ಸಹಬಳಗದ ಭಗಿನಿಯರು ಪ್ರಾರ್ಥನಾಗೀತೆಯನ್ನು ನಡೆಸಿಕೊಟ್ಟರು. ತರಬೇತಿ ಹಂತದಲ್ಲಿರುವ ರೋಸಾ ಮಿಸ್ತಿಕಾ ಭಗಿನಿ ತರಬೇತಿ ಕೇಂದ್ರದ ಭಗಿನಿಯರು ಸ್ವಾಗತ ನೃತ್ಯವನ್ನು ನೆರವೇರಿಸಿದರು. ಭಗಿನಿ ಸಿಸಿಲಿಯಾ ಮೆಂಡೊನ್ಸಾರವರು ತಮ್ಮ ಸ್ವಾಗತ ಭಾಷಣದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಭಗಿನಿ ರೋಶಲ್ ಹಾಗೂ ಭಗಿನಿ ಲಿಲ್ಲಿ ಪಿರೇರಾರವರು ಗೌರವಾನ್ವಿತ ಕಾರ್ಮಿಕರ ವ್ಯಕ್ತಿಪರಿಚಯವನ್ನಿತ್ತರು. ಭಗಿನಿ ಶಾಂತಿ ಫ್ಲಾವಿಯಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಭಗಿನಿ ಅನ್ನಾ ಮರಿಯರವರು ವಂದನಾರ್ಪಣೆ ಗೈದರು.