ಬೆಂಗಳೂರು: ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿರುವ ನರ್ಸರಿ ಶಾಲೆಯ ಕಟ್ಟಡವು ಸೋಮವಾರ ತರಗತಿಗಳು ಪ್ರಾರಂಭವಾಗುವ ಮೊದಲೇ ಕುಸಿದು ಬಿದ್ದಿದ್ದರಿಂದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಶಿವಾಜಿನಗರ ಪ್ರದೇಶದ ಸಮೀಪದ ಕುಕ್ಸ್ ರಸ್ತೆಯಲ್ಲಿರುವ ಈ ಆಂಗ್ಲ ಮಾಧ್ಯಮ ನರ್ಸರಿ ಶಾಲೆಗೆ 90 ಮಕ್ಕಳು ದಾಖಲಾಗಿದ್ದಾರೆ.
ಪ್ರತಿನಿತ್ಯ 70-80 ನರ್ಸರಿ ಮಕ್ಕಳು ಶಾಲೆಗೆ ಬರುತ್ತಿದ್ದು, ಶಾಲಾ ಅವಧಿಯಲ್ಲಿ ಕಟ್ಟಡ ಕುಸಿದಿದ್ದರೆ ಭಾರಿ ದುರಂತ ಸಂಭವಿಸುತ್ತಿತ್ತು.
ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ಅವಶೇಷಗಳನ್ನು ತೆರವುಗೊಳಿಸಲು ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಥಿಲಗೊಂಡ ಕಟ್ಟಡದಲ್ಲಿ ನರ್ಸರಿ ಶಾಲೆ ನಡೆಸುತ್ತಿರುವ ಅಧಿಕಾರಿಗಳು ಮಕ್ಕಳಿಗೆ ತೀವ್ರ ಅಪಾಯ ತಂದೊಡ್ಡಿದ್ದಾರೆ ಎಂದು ಸ್ಥಳೀಯರು ಟೀಕಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಅಧಿಕಾರಿಗಳು ಈಗಾಗಲೇ ಕ್ಷೇತ್ರದಲ್ಲಿ ಹಳೆಯ ಕಟ್ಟಡಗಳನ್ನು ಗುರುತಿಸಿದ್ದಾರೆ. ಕುಸಿದು ಬಿದ್ದ ಕಟ್ಟಡ ಸೇರಿದಂತೆ ಮೂರು ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಹೊಸ ಕಟ್ಟಡ ನಿರ್ಮಿಸಲಾಗುವುದು,” ಎಂದು ಹೇಳಿದರು.