ವಿಜಯನಗರ : ಯುನೆಸ್ಕೋ ಪಾರಂಪರಿಕ ತಾಣ ಹಂಪಿಯ ವಿರೂಪಾಕ್ಷ ದೇವಾಲಯದ ಐತಿಹಾಸಿಕ ಸ್ತಂಭವನ್ನು ವಿರೂಪಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ದೇವಾಲಯದ ಗುಮಾಸ್ತನನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅಧಿಕಾರಿಗಳು ದತ್ತಿ ಇಲಾಖೆಗೆ ನೋಟಿಸ್ ನೀಡಿ ವಿವರಣೆ ಕೇಳಿದ್ದರು.
ಈ ಸಂಬAಧ ಹಂಪಿ ದೇವಾಲಯದ ಗುಮಾಸ್ತ ಬಿ.ಜಿ.ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿ ದತ್ತಿ ಇಲಾಖೆ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ದೇವಾಲಯದ ಗರ್ಭಗುಡಿಯ ಬಳಿ ಎರಡು ಕಂಬಗಳ ನಡುವೆ ಗೇಟ್ ಅಳವಡಿಸಲು ಮೊಳೆ ಹೊಡೆಯುವ ಕಾರ್ಯವನ್ನು ಮಾಡಲಾಯಿತು. ಆದರೆ, ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ದತ್ತಿ ಇಲಾಖೆ ಎಎಸ್ಐನಿಂದ ಒಪ್ಪಿಗೆ ಪಡೆದಿರಲಿಲ್ಲ.
ದೇವಾಲಯದಲ್ಲಿ ಪೂಜೆಯನ್ನು ನಡೆಸುವ ಜವಾಬ್ದಾರಿಯನ್ನು ಮಾತ್ರ ದತ್ತಿ ಇಲಾಖೆಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವುದರಿಂದ ಹಂಪಿ ದೇವಾಲಯದಲ್ಲಿನ ಹಾನಿಯನ್ನು ಎಎಸ್ಐ ತಂಡವು ಗಮನಿಸಿದೆ. ಪಾರಂಪರಿಕ ಸ್ಮಾರಕಗಳಿಗೆ ಸಣ್ಣ ಹಾನಿಯನ್ನು ಸಹ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಎಎಸ್ಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯ ಕಾರ್ಯಕರ್ತರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.