ಅದೊಂದು ಪುಟ್ಟ ಕುಟುಂಬ, ಐದು ಹೆಣ್ಣು ಮಕ್ಕಳ ತಂದೆಯ ಪುಟ್ಟ ಗೂಡಿನ ಕಥೆಯಿದು. ಹಕ್ಕಿ ಗೂಡಂತೆ ಸಣ್ಣದಾಗಿದ್ದರು ಪ್ರೀತಿಗೇನು ಕಮ್ಮಿ ಇರಲಿಲ್ಲ. ಮಕ್ಕಳ ಆಸೆಯಂತೆ ಎಲ್ಲಾ ತಂದು ಕೊಡುತ್ತಿದ್ದರು. ಅದೆಷ್ಟೇ ಕಷ್ಟ ಬಂದರೂ ಸರಿ ಎಲ್ಲವನ್ನು ಎದುರಿಸಿ ನಿಲ್ಲುವ ತಂದೆಯ ಛಲ, ಮಕ್ಕಳ ಮೇಲಿನ ಮಮತೆ ಮೆಚ್ಚುವಂತಿತ್ತು.
ಅದೇನೋ ಗೊತ್ತಿಲ್ಲ ಒಂದು ದಿನ ಯಾರ ಕಣ್ಣು ಬಿತ್ತೋ ಏನೋ ಆ ಪುಟ್ಟ ಗೂಡಿನ ಹಕ್ಕಿಯೊಂದು ರೆಕ್ಕೆ ಬಡಿದು ತನ್ನಿಷ್ಟಕ್ಕೆ ತಕ್ಕಂತೆ ಹಾರಲು ಬಯಸಿತು, ಯಾರನ್ನೂ ಕೇಳದೆ ತಾನು ಪ್ರೀತಿಸಿದವನ ಜೊತೆ ವಲಸೆ ಹೋಯಿತು. ಮುದ್ದಾಗಿ ಒಂದಿಂಚು ನೋವಾಗದಂತೆ ಕಾಪಾಡಿಕೊಂಡು ಬಂದ ಹೆತ್ತ ಕರುಳಿಗೆ ಮರೆಯಲಾಗದ ನೋವನ್ನೀಡಿ ಹೊರಟು ಹೋಯಿತು.
ಮರ್ಯಾದೆಯೇ ಜೀವ ಅಂದುಕೊಂಡಿದ್ದ ಹಿರಿ ಜೀವ ಕುಗ್ಗಿತು, ಊರ ಬಾಯಿಗೆ ಸಿಕ್ಕ ಎಲೆ ಅಡಿಕೆಯಂತಾಯಿತು ಅವರ ಪರಿಸ್ಥಿತಿ. ಎಲ್ಲಿ ತಾನು ಕುಗ್ಗಿದರೆ ಇನ್ನುಳಿದ ಪುಟ್ಟ ಕಂದಮ್ಮಗಳು ನೊಂದುಕೊಳ್ಳುವರು ಎಂದು ಎಲ್ಲವನ್ನು ಸರಿದೂಗಿಸುವ ಪ್ರಯತ್ನ ಮಾಡಲು ಮುಂದಾಗುವನು ಆ ತಂದೆ. ಹೋಗಿದ್ದು ಹೋಗಲಿ ಕಣ್ಮುಂದೆ ಇರುವ ನಾಲ್ಕು ಮಕ್ಕಳನ್ನು ಒಂದೊಳ್ಳೆ ದಾರಿಗೆ ಸೇರಿಸುವ ಹಂಬಲ ಹೊತ್ತನವನು.ಆದರೆ ಹಾರಿ ಹೋದ ಹಕ್ಕಿಗೆ ಈ ಮೊದಲೇ ಮದುವೆ ಗೊತ್ತಾಗಿತ್ತು, ಆ ಮನೆಯ ಕಿರಿಕಿರಿ ಹೆಚ್ಚಾಯಿತು ಒಂದೆಡೆ ಮರ್ಯಾದೆ ಇನ್ನೊಂದೆಡೆ ಮಕ್ಕಳ ಭವಿಷ್ಯ ಏನೂ ತೋಚದಂತ ಪಾಡು.
ಹೀಗಿರುವಾಗ ಒಂದು ದಿನ ತಂದೆ ಚಿಕ್ಕ ಹಕ್ಕಿಯ ಬಳಿ ಬಂದು ಮದುವೆಯಾಗುತ್ತಿಯಾ ಎಂದು ಕೇಳಿದಾಗ ಆ ಹಕ್ಕಿಯು ಏನು ಉತ್ತರ ಕೊಡಬೇಕೆಂದು ತೋಚದೆ ‘ಹೂಂ’ ಎಂದು ಹೇಳಿತು. ಅದೇ ದಿನ ಮೊದಲ ಹಕ್ಕಿಯನ್ನು ನೋಡಲು ಬಂದ ಗಂಡು, ಪುಟ್ಟ ಹಕ್ಕಿಯನ್ನು ವರಿಸಲು ಕುಟುಂಬದ ಜೊತೆ ಮಾತುಕತೆ ಆರಂಭಿಸಿತು. ಆದರೆ ವಿಧಿ ಅದಕ್ಕೆ ಒಪ್ಪಲಿಲ್ಲ ಆ ಮದುವೆಯು ಮುರಿದು ಬಿತ್ತು. ಅದೇ ಸಮಯದಲ್ಲಿ ಚಿಕ್ಕ ಹಕ್ಕಿಗೆ ಯಜಮಾನನ ಕುಟುಂಬದಿಂದ ತನ್ನ ಮಗಳಿಗೆ ಒಬ್ಬ ರಾಜಕುಮಾರನಂತ ಗಂಡನ್ನು ನೋಡಿದರು. ಆ ರಾಜಕುಮಾರ ಎಲ್ಲರಿಗೂ ಒಪ್ಪಿಗೆಯಾಗಿ, ಅಲ್ಲಿ ಯಾವುದೇ ಯೋಜನೆ ಇಲ್ಲದೆ ಪುಟ್ಟ ಹಕ್ಕಿಯ ಮರ್ಯಾದ ಮದುವೆಯ ಎಲ್ಲ ಸಿದ್ಧತೆ ನಡೆದು ಹೋಯಿತು.
ಕಣ್ಮುಚ್ಚಿ ಬಿಡುವುದರೊಳಗೆ ಎಲ್ಲವೂ ನಡೆದು ಹೋಯಿತು. ತನ್ನ ಪುಟ್ಟ ಹಕ್ಕಿಯು ಅವಳ ರಾಜಕುಮಾರನ ಜೊತೆ ಸುಖವಾಗಿ ಸಂಸಾರ ನಡೆಸುತಿದ್ದರೂ, ತಂದೆಗೆ ತನ್ನ ಮಗಳದ್ದೆ ಚಿಂತೆ, ಏನನ್ನೂ ತಿಳಿಸದೆ ತನ್ನ ಉಳಿದ ಮರಿ ಹಕ್ಕಿಗಳನ್ನು ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುವುದರಲ್ಲಿ ತನ್ನ ಜೀವನವನ್ನೇ ಮುಡಿಪಾಗಿರಿಸಿರುವನು. ಮರ್ಯಾದೆ ಮದುವೆಯಲ್ಲಿ ಮಗಳ ಸಂತೋಷ ಮರೆಯದ ತಂದೆ ತನ್ನೆಲ್ಲ ನೋವನ್ನು ಬದಿಗಿರಿಸಿ ಬರೀ ಸಂತೋಷವನ್ನು ನೀಡುತ್ತಿದ್ದಾರೆ.
ತಂದೆಯೇ ಹಾಗೆ ತನ್ನೆಲ್ಲ ಖುಷಿಯನ್ನು ಮಕ್ಕಳಿಗಾಗಿ ಮುಡಿಪಿಟ್ಟುಕೊಂಡು ಬದುಕುತ್ತಾರೆ. ನಿಮ್ಮ ಸ್ವಾರ್ಥ ಬದುಕಿನ ಮೋಜಿಗೆ ನಿಷ್ಕಲ್ಮಷ ಮನಸಿಗೆ ಎಂದು ನೋವ ನೀಡದೆ, ಪ್ರೀತಿಯಿಂದ ಪ್ರೀತಿಯನ್ನು ಪಡೆದುಕೊಳ್ಳಿ.
ಬರಹ: ಕಾವ್ಯ ಪ್ರಜೇಶ್,ಗಟ್ಟಿ
ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು