ಬೆಂಗಳೂರು : ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯಗಳಾದ ಪರಿಣಾಮ ಮಕ್ಕಳು ಸೇರಿದಂತೆ 26 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಭಾನುವಾರ ರಾತ್ರಿಯಿಂದ 22 ಜನರನ್ನು ನಾರಾಯಣ ನೇತ್ರಾಲಯದಲ್ಲಿ ಮತ್ತು ನಾಲ್ವರು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಪೈಕಿ 12 ಮಂದಿಯ ಕಣ್ಣಿಗೆ ಗಂಭೀರ ಗಾಯಗಳಾಗಿವೆ.
ಹಬ್ಬದ ಸಮಯದಲ್ಲಿ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆ ಮತ್ತು ಮಿಂಟೋ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಸೌಲಭ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಮತ್ತು ಕಣ್ಣಿಗೆ ಗಾಯಗಳಾದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಮಿಂಟೋ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ 15 ಹಾಸಿಗೆಗಳ ಸಾಮರ್ಥ್ಯದ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ಮಹಿಳೆಯರು ಮತ್ತು ಯುವಕರಿಗೆ ತಲಾ ಹತ್ತು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಣ್ಣುಗಳನ್ನು ಹೊರತುಪಡಿಸಿ ಪಟಾಕಿ ಸಿಡಿಸುವಾಗ ಉಂಟಾಗುವ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಅನ್ನು ಸ್ಥಾಪಿಸಲಾಗಿದೆ. ದೀಪಾವಳಿಯನ್ನು ಆಚರಿಸುವಾಗ ಮತ್ತು ಪಟಾಕಿಗಳನ್ನು ಸಿಡಿಸುವಾಗ ಜಾಗರೂಕರಾಗಿರಬೇಕು ಎಂದು ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ.