ಬೆಂಗಳೂರು: ರಾಜ್ಯದ 484 ಕೋಟಿ ರೂಪಾಯಿ ಮೌಲ್ಯದ 167 ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡಲಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಯೋಜನೆಗಳಿಗೆ ಅನುಮೋದನೆ ಕೋರಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೋಶಿ ಹೇಳಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ನಾನು ಕೇಂದ್ರ ಸಚಿವ ಶೇಖಾವತ್ ಅವರನ್ನು ಕೋರಿದ್ದೆ. ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುವುದು ಯೋಜನೆಯ ಉದ್ದೇಶವಾಗಿದೆ. ಕೃಷಿ ಭೂಮಿಗೆ ಲಭ್ಯವಿರುವ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ” ಎಂದು ಸಚಿವ ಜೋಶಿ ಹೇಳಿದರು.
ಪ್ರವಾಹದ ನೀರನ್ನು ಕೃಷಿ ಭೂಮಿಗೆ ಬಳಸಿಕೊಳ್ಳಲು ಈ ಯೋಜನೆಗಳು ತುರ್ತಾಗಿ ಅಗತ್ಯವಿದೆ. ‘ಉತ್ತರ ಕರ್ನಾಟಕ ಭಾಗದ ಬಹುತೇಕ ಭಾಗ ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತದೆ. ಈ ಪ್ರವಾಹದ ನೀರನ್ನು ಸಂಗ್ರಹಿಸಿ ನಂತರ ಕೃಷಿಗೆ ಬಳಸಬಹುದು” ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರ್ಕಾರವು ರೈತ ಸಮುದಾಯದ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ರೈತರಿಗೆ ಅಪಾರ ಅನುಕೂಲವಾಗಲಿದೆ ಎಂದರು.
“ಕರ್ನಾಟಕದವನಾದ ನಾನು ರಾಜ್ಯದ ರೈತರ ಸಂಕಷ್ಟಗಳ ಬಗ್ಗೆ ವಿವರವಾಗಿ ವಿವರಿಸಿದ್ದೇನೆ. ಕೇಂದ್ರ ಸಚಿವ ಶೇಖಾವತ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, 167 ನೀರಾವರಿ ಯೋಜನೆಗಳಿಗೆ ಶೀಘ್ರದಲ್ಲೇ ಒಪ್ಪಿಗೆ ನೀಡಲಾಗುವುದು ಎಂದು ಕೇಂದ್ರ ಸಚಿವ ಜೋಶಿ ಹೇಳಿದರು