ಜಗತ್ತು ಅದೆಷ್ಟು ವಿಶಾಲವೋ ಅಷ್ಟೇ ವೇಗವಾಗಿ ಬದಲಾಗುತ್ತಾ ಹೋಗುತ್ತಿದೆ. ವಿಚಿತ್ರವೋ ವಿಶಿಷ್ಟವೋ ವಿಚಾರಗಳು,ಯೋಚನೆಗಳು,ಆಸೆ,ಆಚರಣೆ ಹೀಗೆ ಇನ್ನೂ ಹಲವು ವಿಷಯಗಳೂ ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಿವೆ.
ಏನೇ ಬದಲಾದರೂ ಬಾಲ್ಯದ ನೆನಪುಗಳು ಮಾತ್ರ ಹಾಗೇ ಇದೆ. ವಿನಾಕಾರಣ ದಾರಿ ಮಧ್ಯೆ ಸಿಕ್ಕ ಮರಕ್ಕೆ ಕಲ್ಲೊಡೆದ ನೆನಪು, ಹೂ ಕಿತ್ತು ಕಿವಿಗಿಟ್ಟ ನೆನಪು, ನಿಂತ ನೀರಲ್ಲಿ ಆಡಿ ಮೈತುಂಬ ಕೆಸರು ಮೆತ್ತಿಕೊಂಡ ನೆನಪು ಹೀಗೆ ಇನ್ನು ಹಲವಾರು ನೆನಪುಗಳ ಜೋಳಿಗೆಯೇ ಇದೆ.
ಹಳ್ಳಿ ಎಂದರೆ ಸಾಕು ತಟ್ಟನೆ ನೆನಪಾಗುವುದೇ ಮಾವಿನ ಮರ, ತೊರೆ,ಗುಡ್ಡ ತೋಟಗಳು ಆ ಸೊಬಗು ಮಾತಿನಲ್ಲಿ ಹೇಳತೀರದು. ಮಾವು ಕಂಡರೆ ಸಾಕು ಅತ್ತಿತ್ತ ಕಣ್ಣು ಹಾಯಿಸಿ ಯಾರಿಲ್ಲವೆಂದು ಖಾತರಿಸಿಕೊಂಡು ಸನ್ನೆ ಮಾಡಲು ಇಬ್ಬರನ್ನು ನಿಲ್ಲಿಸಿ, ಮರ ಹತ್ತಿ ಹಣ್ಣು ಕೊಯ್ದು ತಿಂದ ಖುಷಿಗೆ ಸಾಟಿಯೇ ಇಲ್ಲ. ಆ ರುಚಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತೋಟದ ಯಜಮಾನ ಬಂದರೆ ಸಾಕು ಸನ್ನೆ ಸಿಕ್ಕಿದ್ದೆ ತಡ ಓಟಕ್ಕಿತ್ತ ನೆನಪು ಕೈ ಕಾಲುಗಳೆಲ್ಲ ಗಾಯದ ಕಲೆ ಆದರು ಆ ನೋವಲ್ಲೂ ಖುಷಿ ಇತ್ತು.
ಮಾವಿನ ಹಣ್ಣಿನ ಸಂದರ್ಭದಲ್ಲಂತು ದಿನನಿತ್ಯ ವಿವಿಧ ಬಗೆಯ ಖಾದ್ಯ ಮಾವಿನ ರಸಾಯನ,ಮಿಡಿ ಉಪ್ಪಿನಕಾಯಿ,ಮಾವಿನ ಚಟ್ನಿ,ರಸಾಯನ ಹೀಗೆ ಬಾಯಲ್ಲಿ ನೀರೂರಿಸುವ ಬಗೆ ತಿಂಡಿಗಳು ಏನೇ ಹೇಳಿ ಹಳ್ಳಿ ಸೊಬಗಿಗೆ ಸರಿಸಾಟಿಯೇ ಇಲ್ಲ.
ಗದ್ದೆ,ಹೊಲ,ತೋಟಗಳಲ್ಲಿ ಪ್ರಕೃತಿ ಮಡಿಲಲ್ಲಿ ಕೆಲಸ ಮಾಡುತ್ತಾ ಜಾನಪದ ಸೊಗಡುಗಳನ್ನು ಕೇಳುತ್ತಾ ಆಹ್ಲಾದಿಸುತ್ತಾ ಜೀವನ ಸಾಗಿಸುವ ಪರಿ ಈಗ ಕಾಣಸಿಗುವುದು ಬಲು ಅಪರೂಪ. ತಾವು ಬೆಳೆಸಿದ ಹಣ್ಣು,ತರಕಾರಿಗಳನ್ನು ಹಂಚಿಕೊಂಡು ತಿನ್ನುವ ಮನಸ್ಥಿತಿ ಹಳ್ಳಿಯಲ್ಲಿ ಮಾತ್ರ ಕಾಣಸಿಗುವುದು.ಕೂಡುಕುಟುಂಬ ಎಲ್ಲರ ಜೊತೆಗೊಂದಿಷ್ಟು ಹರಟೆ ಮಾತುಗಳು ಈಗಂತು ಎಲ್ಲವೂ ಕಣ್ಮರೆಯಾಗಿವೆ ಎಂದರೆ ತಪ್ಪಿಲ್ಲ.
ಹಬ್ಬ ಹರಿದಿನ ಬಂತೆಂದರೆ ನಮ್ಮ ಖುಷಿಗೆ ಪಾರವೇ ಇಲ್ಲ,ಹೊಸ ಬಟ್ಟೆ, ಮನೆತುಂಬ ಜನ,ನಗು,ತುಂಟಾಟ ಆದರೆ ಯಾಂತ್ರಿಕ ಬದುಕು ಸಾಂಪ್ರದಾಯಿಕ ಕ್ಷಣಗಳನ್ನು ಕಸಿದುಕೊಂಡಿದೆ. ಅಲ್ಲಲ್ಲಿ ಕಾಣಸಿಗುವ ಹಳೆ ನೆನಪುಗಳು, ಸಾಂಪ್ರಾದಾಯಿಕ ತಿನಿಸುಗಳು, ಆಚರಣೆಗಳು ನಮ್ಮನ್ನು ಮತ್ತೊಮ್ಮೆ ಹಳ್ಳಿ ಜೀವನಕ್ಕೆ ಕೊಂಡೊಯ್ಯುವಂತ ಸ್ಥಿತಿ ಈಗಿದೆ. ಬದಲಾಗಬೇಕಿದೆ ಹಳ್ಳಿ ಸೊಬಗನ್ನು ಇನ್ನಷ್ಟು ಹೆಚ್ಚಿಸಬೇಕಿದೆ.
ಕಾವ್ಯ ಪ್ರಜೇಶ್,ಗಟ್ಟಿ
ಬೆಸೆಂಟ್ ಮಹಿಳಾ ಕಾಲೇಜು
ಮಂಗಳೂರು