ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಐದು ವರುಷದ ಹೆಣ್ಮಗಳ ಚಿಕಿತ್ಸೆಗಾಗಿ ಉಳ್ಳಾಲದ ಟೀಮ್ ಹನುಮಾನ್ ಸಂಘಟನೆಯ ಉತ್ಸಾಹಿ ಯುವಕರ ತಂಡವು ನವರಾತ್ರಿಯಂದು ವೇಷ ಧರಿಸಿ ಕುಣಿದು ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಹಣವನ್ನು ದೇಣಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಉಳ್ಳಾಲ ಧರ್ಮನಗರ ನಿವಾಸಿ ರಂಜಿನಿ ಎಂಬವರ ಐದು ವರುಷದ ಮಗಳು ಶ್ರೇಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ತಗುಲಲಿದೆ. ರಂಜಿನಿ ಅವರ ಕುಟುಂಬ ಆರ್ಥಿಕವಾಗಿ ಸೊರಗಿದ್ದು ಮಗಳ ಕಾಯಿಲೆಯ ಚಿಕಿತ್ಸೆಗೆ ಹಣ ಭರಿಸಲು ಅಶಕ್ತವಾಗಿದೆ.ಶ್ರೇಯಳ ಚಿಕಿತ್ಸೆಗೆ ಸಹಕರಿಸಲು ಮುಂದಾದ ಸ್ಥಳೀಯ ಟೀಮ್ ಹನುಮಾನ್ ತಂಡದ ಎಳೆಯ ಪ್ರಾಯದ ಯುವಕರು ಕಳೆದ ನವರಾತ್ರಿಯಂದು ಯಕ್ಷಗಾನ ಶೈಲಿಯ ವೇಷ ಧರಿಸಿ ಮನೆ ಮನೆಗೆ ತೆರಳಿ ಕುಣಿದು ಹಣ ಸಂಪಾದಿಸಿದ್ದಾರೆ.
ಅಲ್ಲದೆ ಉಳ್ಳಾಲ ಶಾರದೋತ್ಸವಕ್ಕೂ ಟ್ಯಾಬ್ಲೋ ಮಾಡಿ ಶೋಭಾಯಾತ್ರೆಗೆ ಮೆರುಗು ನೀಡಿದ್ದಾರೆ.ವೇಷ ತೊಟ್ಟು ಕ್ರೋಢೀಕರಿಸಿದ ಒಟ್ಟು 1,67,649 ರೂಪಾಯಿಗಳ ಚೆಕ್ ಅನ್ನು ಧರ್ಮ ನಗರದ ನಾಗ ಸಾನಿಧ್ಯದಲ್ಲಿ ಟೀಮ್ ಹನುಮಾನ್ ಯುವಕರು ಹಿರಿಯರ ಕೈಯಿಂದ ರಂಜಿನಿ ಅವರಿಗೆ ಹಸ್ತಾಂತರಿಸಿದ್ದಾರೆ.
ಕಳೆದ ವರ್ಷವೂ ಯುವಕರು ನವರಾತ್ರಿಗೆ ವೇಷ ಧರಿಸಿ ಸಂಗ್ರಹಗೊಂಡ 1,26,000 ರೂಪಾಯಿಗಳನ್ನ ಮೂಡಬಿದಿರೆಯ ಐದು ವರುಷದ ಕ್ಯಾನ್ಸರ್ ಪೀಡಿತ ಬಾಲಕಿ ಶ್ರಿಯಾ ಎಂಬವಳಿಗೆ ನೀಡಿದ್ದು ಆಕೆ ಈಗ ಕ್ಯಾನ್ಸರ್ ನಿಂದ ಗುಣಮುಖವಾಗಿ ಶಾಲೆಗೆ ತೆರಳುತ್ತಿರುವುದು ಖುಷಿ ಕೊಟ್ಟಿದೆ ಎಂದು ತಂಡದ ಮುಖ್ಯಸ್ಥರಾದ ಜಗದೀಶ್ ಗೋಳಿಯಡಿ ತಿಳಿಸಿದ್ದಾರೆ.