ಉಡುಪಿ: ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಅವಲಕ್ಕಿಪಾರೆಯ ಆದಿಮ ಬಂಡೆ ಚಿತ್ರಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ದಿಶಾಂತ್ ದೇವಾಡಿಗ ಅವರು ಮರುಪರಿಶೀಲನೆಗೆ ಒಳಪಡಿಸಿರುತ್ತಾರೆ.
ಜಂಬಿಟ್ಟಿಗೆಯಿಂದ ನಿರ್ಮಾಣವಾದ ಕಲ್ಲಿನ ಮೇಲೆ ಈ ರೇಖಾಚಿತ್ರಗಳನ್ನು ಕೊರೆಯಲ್ಪಟ್ಟಿದ್ದು, ಇದರಲ್ಲಿ ಮಾನವನ, ಗೂಳಿಗಳ ಚಿತ್ರಗಳು, ಜ್ಯಾಮಿತಿಯ ರೇಖಾಚಿತ್ರ, ಎರಡು ವೃತ್ತದೊಳಗಡೆ + ಗುರುತಿನ ರೇಖಾ ಚಿತ್ರ ಮತ್ತು ಕಲ್ಗುಳಿಗಳು ಪತ್ತೆಯಾಗಿರುತ್ತದೆ. ಈ ರೇಖಾಚಿತ್ರಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಇವುಗಳು ಫಲವಂತಿಕೆಯ ಸೂಚಕವಾಗಿರಬಹುದೆಂದು ವಿದ್ವಾಂಸರು ತಿಳಿಸಿದ್ದಾರೆ.
ವೃತ್ತಾಕಾರದ ಒಳಗಿರುವಂತಹ + ಗುರುತು ಮರಣದ ಸಂಕೇತವೆಂದು ಡಾ. ಸಚಿನ್ ಕೆ ಆರ್. ತಿವಾರಿ (ಬನಾರಸ್ ಹಿಂದೂ ಯೂನಿವರ್ಸಿಟಿ – ವಾರಣಾಸಿ, ಉತ್ತರ ಪ್ರದೇಶ) ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.
ಅವಲಕ್ಕಿ ಪಾರೆಯಲ್ಲಿ ಹೆಚ್ಚಾಗಿ ಬೆಣಚು ಕಲ್ಲುಗಳು ಕಂಡು ಬರುವುದರಿಂದ ಈ ಮೊದಲು ಅಧ್ಯಯನ ಮಾಡಿದ ವಿದ್ವಾಂಸರು ಈ ನೆಲೆಯ ಕಾಲಮಾನವನ್ನು ಸುಮಾರು 10,000 BCE ಎಂದು ಪರಿಗಣಿಸಿ ಈ ರೇಖಾ ಚಿತ್ರಗಳು ಸೂಕ್ಷ್ಮ ಶಿಲಾಯುಗದ ಬೇಟೆಯ ಚಿತ್ರಗಳೆಂದು ಹಾಗೂ ಇವುಗಳನ್ನು ಕಲ್ಲಿನಿಂದ ಕುಟ್ಟಿ ಮಾಡಿರುವುದೆಂದು ಹೇಳಿರುತ್ತಾರೆ.
ಆದರೆ ಈ ರೇಖಾ ಚಿತ್ರಗಳನ್ನು ಗಮನಿಸಿದಾಗ ಈ ಬಂಡೆಯ ಮೇಲೆ ಇವುಗಳನ್ನು ಕೊರೆಯಲು ಗಟ್ಟಿಯಾದ ವಸ್ತುವಿನ (ಲೋಹ) ಅಗತ್ಯವಿರುತ್ತದೆ. ಹಾಗಾಗಿ ಈ ರೇಖಾ ಚಿತ್ರಗಳನ್ನು ಕಲ್ಲಿನಿಂದ ಕುಟ್ಟಿ ಮಾಡದೇ ಯಾವುದಾದರೊಂದು ಗಟ್ಟಿಯಾದ ಲೋಹವನ್ನು ಬಳಸಿ ಮಾಡಲಾಗಿದ್ದು ಕಾಲಮಾನದ ದೃಷ್ಟಿಯಿಂದ ಈ ರೇಖಾ ಚಿತ್ರಗಳು ಬೃಹತ್ ಶಿಲಾಯುಗಕ್ಕೆ (2700-800 CE) ಸೇರುತ್ತವೆ ಎಂದು ಯೂನಿವರ್ಸಿಟಿ ಆಫ್ ಕೇರಳ – ತಿರುವನಂತಪುರಂ ಇಲ್ಲಿನ ಪುರಾತತ್ವ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ. ಅಜಿತ್ ಕುಮಾರ್ ಮತ್ತು ಕರ್ನಾಟಕ ಯೂನಿವರ್ಸಿಟಿ – ಧಾರವಾಡ ಇಲ್ಲಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಡಾ. ರವಿ ಕೋರಿಸೆಟ್ಟರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕ್ಷೇತ್ರಕಾರ್ಯ ಶೋಧನೆಗೆ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು ಇಲ್ಲಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರು ಮಾರ್ಗದರ್ಶನ ನೀಡಿದ್ದು, ಸತೀಶ್ ಬಿ.ಎಸ್ ನಕ್ಸಲ್ ನಿಗ್ರಹದಳ – ಹೆಬ್ರಿ ಕ್ಯಾಂಪ್, ಉಡುಪಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಜಡ್ಕಲ್ ಉಪವಲಯ ಅರಣ್ಯಾಧಿಕಾರಿ ಸುನೀಲ್ ಕುಂಬಾರ್, ಸುನಿತ್ ಭಟ್ ಚಿತ್ತೂರು ಉಪವಲಯ ಅರಣ್ಯಾಧಿಕಾರಿ ಮತ್ತು ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿಗಳು ಸಹಕಾರ ನೀಡಿರುತ್ತಾರೆ.