ಬದುಕಿನಲ್ಲಿ ತಿರುವುಗಳು ಸರ್ವೇಸಾಮಾನ್ಯ ಹಾಗಂತ ಎಲ್ಲವೂ ಒಳ್ಳೆಯ ದಿಕ್ಕಿನಲ್ಲಿ ಅಥವಾ ಒಂದೊಳ್ಳೆ ದಾರಿಯನ್ನು ತೋರುತ್ತವೆ ಅಂದುಕೊಳ್ಳುವುದು ನಮ್ಮ ಮೌಢ್ಯವೇ ಸರಿ.
ಹೀಗಿರುವಾಗ ಒಂದು ದಿನ ಬಂದಿರುವ ಸಂದೇಶ ಇಡೀ ಬದುಕಿನ ಯೋಜನೆಯನ್ನು ಬದಲಿಸುತ್ತದೆ. ಹೊಸ ಜಾಗ, ಹಳೇ ಕಟ್ಟಡ, ಹೊಸ ಮುಖಗಳು, ವಿಭಿನ್ನ-ವಿಚಿತ್ರ ಮನಸ್ಥಿತಿಗಳ ಪರಿಚಯ. ಕತ್ತಲೆ ಬದುಕಿಗೆ ಬೆಳಕು ಬಂದಂತೆ ಅನಿಸಿದರು ಇಲ್ಲಿ ಹೇಗೆ ಕಾಲ ಕಳೆಯುವುದು ಎನ್ನುವ ಯೋಚನೆ.
ಮೊದಲ ದಿನ ಖುಷಿಯ ಜೊತೆಗೊಂದಿಷ್ಟು ಅಳುಕು. ಬಂದಾಗಿದೆ ಮುಂಬರುವ ಎಲ್ಲಾ ಅಡೆತಡೆಗಳನ್ನು ಎದುರಿಸಲೇಬೇಕು ಎನ್ನುವ ಧೃಡ ನಿರ್ಧಾರವು ಒಂದೆಡೆ ಇದೆ. ನಗುಮುಖದ ಮೊದಲ ಪರಿಚಯದ ಜೊತೆಗೆ ಹೆಜ್ಜೆ ಇಡುತ್ತಾ ಮುಂದೆ ನಡೆದು ಸೇರಬೇಕಾದ ಜಾಗ ಸೇರಿದಾಗ ಕಂಡಿದ್ದು ಆ ಕಿಟಕಿ.
ಬೇರೋಬ್ಬರು ಕುಳಿತಿದ್ದ ಆ ಕಿಟಕಿ ಬದಿ ಜಾಗ ಪ್ರತಿಬಾರಿ ಅತ್ತ ಸೆಳೆಯುತ್ತಿತ್ತು. ಹೋಗಬೇಕು ಎನಿಸಿದಾಗೆಲ್ಲ ಒಂಥರಾ ಅಂಜಿಕೆಯಾದಂತೆ ಹೊಸ ಜಾಗ ಎಂದೂ ಇರಬಹುದು. ಒಬ್ಬೊಬ್ಬರಂತೆ ಎಲ್ಲರ ಪರಿಚಯವಾಗತೊಡಗಿತು. ಅಂತರಗಳ ಸಂಭಾಷಣೆ ಆತ್ಮೀಯತೆಯ ಹೆಚ್ಚಿಸಿತು, ಬದುಕಿನ ಜ್ಯೋತಿ ಬೆಳಗಿದಂತೆ.
ದಿನಗಳುರುಳಿದವು ಕಿಟಕಿ ಕಡೆಗೆ ಒಂದೆರಡು ಬಾರಿ ನೆಪವೊಡ್ಡಿ ಹೋಗಿದ್ದು ಖುಷಿ ಕೊಟ್ಟಿತಾದರು, ಹಿಂದಿರುಗಿದಾಗೆಲ್ಲ ಏನೋ ಕಳೆದುಕೊಂಡಂತೆ ಅನಿಸತೊಡಗಿತು. ಕಿಟಕಿಯಲ್ಲಿ ಅಂತದ್ದೇನಿರಬಹುದು ಎನ್ನುವ ಕುತೂಹಲ ಇದೀಗ ನಿಮಗೂ ಇರಬಹುದು ಅಲ್ವಾ? ನಾನು ಕಿಟಕಿ ನೋಡಿದಾಗೆಲ್ಲ ಬದುಕಿನಲ್ಲಿ ಕಾಣುವ ಅನೇಕ ಮಜಲುಗಳ ನೆನಪಾಗುವುದು ಹೇಗೆ ಎನ್ನುತ್ತೀರ. ಕಣ್ಣಿಗೆ ಎಲ್ಲವೂ ಸುಂದರವಾಗಿ ಕಂಡರು ಅದನ್ನು ತಲುಪಲು ಕಿಟಕಿಯಲ್ಲಿ ಕಾಣುವ ಸರಳುಗಳ ಹಾಗೆ ಸರದಿ ನಿಂತಿರುವ ಅಡೆತಡೆಗಳನ್ನು ದಾಟಬೇಕಾಗುತ್ತದೆ. ಹಾಗಾಗಿ ಈ ಕಿಟಕಿಗಳು ಬದುಕಿನ ಮಜಲುಗಳನ್ನು ತೋರ್ಪಡಿಸುತ್ತ ಎಚ್ಚರಿಸುತ್ತವೆ ಎಂದರೆ ತಪ್ಪಿಲ್ಲ.
ದಿನಗಳುರುಳಿ ತಿಂಗಳಾದರು ಕಿಟಕಿ ಗೋಜು ಕಡಿಮೆ ಆಗಲೇ ಇಲ್ಲ.ಕಾಲಿಯಾಗಿ ಕಾಣುವ ಜಾಗ ಪದೇ ಪದೇ ಕಾಡತೊಡಗಿತು,ಆಗಿದ್ದಾಗಲಿ ಎನುತಾ ಮಾತಿನ ಮಧ್ಯೆ ನಾನಲ್ಲಿ ಕುಳಿತುಕೊಳ್ಳಬಹುದೆ ಎಂದೆ ಅಷ್ಟೇ ,ಸರಿ ಕುಳಿತುಕೊಳ್ಳಿ ಎಂದಾಗ ಖುಷಿಯ ಪರಿವೇ ಇಲ್ಲ. ಸಮಯ ವ್ಯಯಿಸದೆ ಅಲ್ಲಿ ಸೇರಿದೆ. ತಂಪು ತಂಗಾಳಿ ಕೈಬೀಸಿ ಸ್ವಾಗತಿಸಲು ನಿಂತಂತೆ ಭಾಸವಾಯಿತು. ಬಾನಾಡಿಗಳ ಇಂಪು ಕಲರವ ಹಿತವೆನಿಸಿತು.
ಬಾನೆತ್ತರದ ಕಟ್ಟಡ ನೋಡಿದಾಗೆಲ್ಲ ಸಾಧನೆಯ ಮೆಟ್ಟಿಲುಗಳಂತೆ ಕಂಡರು, ಎಲ್ಲವೂ ನಾವಂದುಕೊಂಡಂತೆ ಆಗದು, ಸಾಲು ಸಾಲು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.ಆಗಿದ್ದಾಗಲಿ ನನ್ನದೆನ್ನುವುದು ಬಳಿಯೇ ಇರುವಾಗ ಇನ್ನೊಂದರ ಮೇಲೆ ಮೋಹ ಇರಕೂಡದು ಎನ್ನುವ ಹಾಗೆ ಬದುಕಬೇಕು. ಅಂದುಕೊಂಡಿದ್ದ ಸಿಗಬೇಕು ಎಂದರೆ ನಿಸ್ವಾರ್ಥ ಪ್ರಯತ್ನ ಕೂಡ ಮುಖ್ಯವಾಗುತ್ತದೆ. ಸ್ವಾರ್ಥ ಬದುಕು ಕ್ಷಣಿಕ ಒಡೆದ ಗಾಜಿನಂತೆ ಹೋದಲ್ಲೆಲ್ಲ ಚುಚ್ಚುತ್ತವೆ. ಹಾಗಾಗಿ ಶ್ರಮದ ಬೆಲೆಗೆ ಪ್ರತಿಫಲ ಖಂಡಿತ. ಬದುಕು ಪಂಜರದಂತೆ ಕಾಣುವ ಕಿಟಕಿಯಂತೆ ಹೊರಬರುವ ಪ್ರಯತ್ನ ಮಾತ್ರ ನಮ್ಮದಾಗಿರಬೇಕು.
ವಿಜಿತ.ಅಮೀನ್
ಬಂಟ್ವಾಳ