ಮಂಗಳೂರು: ಭಾರತ ದೇಶದಲ್ಲಿ ಅತ್ಯಂತ ವಿಸ್ತೀರ್ಣವಾದ ಕೃಷಿ ಭೂಮಿ ಇದ್ದು ನಮ್ಮ ಹಿರಿಯ ಕೃಷಿಕರು, ಕೃಷಿಕ ಬಳಗದವರು ಆರೋಗ್ಯ ಪೂರ್ಣವಾದ ಆಹಾರ ಪದಾರ್ಥಗಳನ್ನು ಬೆಳೆಸುತ್ತಿದ್ದು ಭಾರತೀಯರು ಆರೋಗ್ಯವಂತರಾಗಿರಲು ಇದೇ ಮುಖ್ಯ ಕಾರಣ ಆಗಿತ್ತು ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಬ್ಯಾಂಕ್ ಆಫ್ ಬರೋಡದ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ಆರ್ ಹೇಳಿದರು.
ಭೂ ಸಂಪನ್ಮೂಲದ ಸದ್ಭಳಕೆ ಮಾಡಿಕೊಳ್ಳುವಂತೆ, ಇಂದಿನ ತಲೆಮಾರಿನ ಕೃಷಿಕ ವರ್ಗ ಆರೋಗ್ಯಕ್ಕೆ ಪೂರಕವಾದ ಸಿರಿ ಧಾನ್ಯಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಅಗತ್ಯವಾದ ನೆರವು ನೀಡಲು ಸಿದ್ಧವಾಗಿದೆ. ಮಹಿಳೆಯರು ಹಾಗೂ ಯುವಕರು ಸ್ವಾವಲಂಬಿ ಜೀವನ ಸಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸವಲತ್ತುಗಳನ್ನು ನೀಡಲು ನಮ್ಮ ಬ್ಯಾಂಕ್ನಿಂದ ಸಂಯೋಜಿತಗೊಂಡಿರುವ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಸಿದ್ಧವಾಗಿದೆ ಎಂದು, ಪ್ರತಿಷ್ಠಾನದ 32 ನೇ ಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ತಿಳಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಹಿಂದಿನ ಸಾಲಿನ ಕಾರ್ಯಕ್ರಮಗಳ ವಿವರ ಬಿಡುಗಡೆಗೊಳಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಪ್ರೇಮನಾಥ ಆಳ್ವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರತಿಷ್ಠಾನದ ಆಡಳಿತ ಮಂಡಳಿಯ ಹಾಗೂ ಪ್ರತಿಷ್ಠಾನದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರ್ವಾಹಕರಾದ ಸಚಿನ್ ಹೆಗ್ಡೆಯವರು ಸ್ವಾಗತಿಸಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಪ್ರಗತಿಪರ ಕೃಷಿಕರಾದ ಕಡಮಜಲು ಸುಭಾಶ್ ರೈ ಅವರನ್ನು ಸನ್ಮಾನಿಸಲಾಯಿತು.