ಮಂಗಳೂರು: ಸಮಾಜ ಆರೋಗ್ಯಕರವಾಗಿರಬೇಕಾದರೆ ಡ್ರಗ್ಸ್ ನಿರ್ಮೂಲನೆ ಅಗತ್ಯ. ಡ್ರಗ್ಸ್ ಮುಕ್ತ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಯುವಕ-ಯುವತಿಯರ ಜವಾಬ್ದಾರಿ ಹಿರಿದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳೂರು ನಗರದಲ್ಲಿ ಬುಧವಾರ ಆಯೋಜಿಸಲಾದ ‘ಜತೆಯಾಗಿ ನಡೆಯೋಣ, ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023’ಗೆ ಮಂಗಳೂರು ಕುದುಲ್ ರಂಗರಾವ್ ಪುರಭವನದ ಎದುರು ಚಾಲನೆ ನೀಡಿದರು.
ಡ್ರಗ್ಸ್ ಆರಂಭದಲ್ಲಿ ಕುತೂಹಲ ಕೆರಳಿಸಿ ತಾತ್ಕಾಲಿಕ ಖುಷಿ ಕೊಡಬಹುದು. ಆದರೆ ಅನಂತರ ಅದು ಚಟವಾಗಿ ಬೆಳೆದು ಭವಿಷ್ಯವನ್ನೇ ನಾಶ ಮಾಡುತ್ತದೆ. ಡ್ರಗ್ಸ್ ಅಪಾಯದ ಕುರಿತು ಯುವಕ ಯುವತಿಯರು ತಾವಾಗಿ ಎಚ್ಚರದಿಂದ ಇರಬೇಕಾಗಿದೆ. ಅಲ್ಲದೆ ತಮ್ಮ ಸ್ನೇಹಿತರು ಅಡ್ಡದಾರಿ ಹಿಡಿಯದಂತೆ ಅವರಿಗೂ ತಿಳಿವಳಿಕೆ ನೀಡಬೇಕು ಎಂದು ಸಚಿವರು ಕಿವಿ ಮಾತು ಹೇಳಿದರು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪಕ್ಕದ ಕೇರಳ ಮತ್ತು ಇತರ ಕಡೆಗಳ ಸಂಪರ್ಕದಿಂದ ಮಂಗಳೂರಿನಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯುತ್ತಿವೆ. ಡ್ರಗ್ಸ್ನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮೇಯ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಫ್ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್ ಕೆ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ಗಳಾದ ಎಂ.ಶಶಿಧರ ಹೆಗ್ಡೆ ಭಾಸ್ಕರ್, ಪಾಲಿಕೆ ಸದಸ್ಯರಾದ ವಿನಯ್ರಾಜ್, ಅನಿಲ್ ಕುಮಾರ್, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್ ಬಿ.ಪಿ. ಉಪಸ್ಥಿತರಿದ್ದರು.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸ್ವಾಗತಿಸಿದರು. ವಾಕಥಾನ್ ಅಂಗವಾಗಿ ಏರ್ಪಡಿಸಲಾದ ರೀಲ್ಸ್ ಮತ್ತು ಶಾರ್ಟ್ ವೀಡಿಯೋ ಹಾಗೂ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಈ ವಾಕಥಾನ್ನಲ್ಲಿ 120 ಶಿಕ್ಷಣ ಸಂಸ್ಥೆಗಳ 4,000ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುರಭವನದಿಂದ ಆರಂಭಗೊಂಡ ವಾಕಥಾನ್ ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್, ಲಾಲ್ಬಾಗ್, ಲೇಡಿಹಿಲ್ ಮೂಲಕ ಮಂಗಳ ಕ್ರೀಡಾಂಗಣದವರೆಗೆ ಸಾಗಿತು.
ವಿದ್ಯಾರ್ಥಿಗಳೊಂದಿಗೆ ಸಚಿವರು, ಸಂಸದರು, ಶಾಸಕರು, ಮೇಯರ್, ವಿಧಾನಪರಿಷತ್ ಸದಸ್ಯರು, ಪೊಲೀಸ್ ಆಯುಕ್ತರು ಸೇರಿದಂತೆ ಗಣ್ಯರು ಕೂಡ ಹೆಜ್ಜೆ ಹಾಕಿದರು. ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ಗಾಯನ ನಡೆಯಿತು. ಭಿತ್ತಿಪತ್ರ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಡ್ರಗ್ಸ್ ಜಾಗೃತಿ ಘೋಷಣೆಗಳನ್ನು ಕೂಗಿದರು.