ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜನರ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಿದ್ದ ಪ್ರಕರಣಗಳು ವರದಿ ಆಗಿದ್ದವು. ಮೊದಲಿಗೆ ಯಾವ ರೀತಿ ಹಣ ಕಡಿತವಾಗಿದೆ ಎಂದು ಬ್ಯಾಂಕ್ ನವರಿಗೂ ಗೊತ್ತಾಗುತ್ತಿರಲಿಲ್ಲ. ಇದೀಗ ಪೋಲೀಸರು ಈ ಪ್ರಕರಣದ ಆಳವಾದ ತನಿಖೆ ನಡೆಸಿ ಇಬ್ಬರು ದುಷ್ಕರ್ಮಿಗಳ ಹೆಡೆಮುರಿ ಕಟ್ಟಿದ್ದಾರೆ.
ಬಿಹಾರದಿಂದ ಬಂಧಿಸಿ ಕರೆತಂದಿರುವ ಈ ಇಬ್ಬರೂ ದುಷ್ಕರ್ಮಿಗಳನ್ನು ಮೊಹಮದ್ ಅಬುಜರ್ ಮತ್ತು ಪರ್ವೇಜ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ರಾಜ್ಯ ನೋಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಧಿಕೃತ ವೆಬ್ಸೈಟ್ ‘ಕಾವೇರಿ 2.0’ನಲ್ಲಿ ಸಾರ್ವಜನಿಕರ ಆಧಾರ್ ಕಾರ್ಡ್ ಸಂಖ್ಯೆ ಕದ್ದು ಬಳಿಕ ಎಇಪಿಎಸ್ ಸಾಧನವನ್ನು ಬಳಸಿ ಜನರ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದರು.
ಈ ಇಬ್ಬರಿಂದ ₹1.05 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 2 ಲ್ಯಾಪ್ಟಾಪ್, 2 ಮೊಬೈಲ್ ಹಾಗೂ 3 ಬೆರಳಚ್ಚು ಸ್ಕ್ಯಾನರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಹಕರೊಬ್ಬರು ಇತ್ತೀಚೆಗೆ ತಮ್ಮ ಬ್ಯಾಂಕ್ ಖಾತೆಯಿಂದ ಎರಡು ಹಂತದಲ್ಲಿ ₹48 ಸಾವಿರ ದೋಚಿರುವ ಬಗ್ಗೆ ಸಂತ್ರಸ್ತರು ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಸಿಇಎನ್ ಇನ್ಸ್ಪೆಕ್ಟರ್ ಎಂ.ಮಲ್ಲಿಕಾರ್ಜುನ್ ನೇತೃತ್ವದ ತಂಡವು, ದೂರುದಾರನ ಖಾತೆಯಿಂದ ಹಣ ವರ್ಗವಾಗಿದ್ದ ಬ್ಯಾಂಕ್ ಖಾತೆಯ ಬೆನ್ನತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 115 ಎಇಪಿಎಸ್ ವಂಚನೆ ಪ್ರಕರಣಗಳನ್ನು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದಂತಾಗಿದೆ. ಈ ಇಬ್ಬರೂ ದುಷ್ಕರ್ಮಿಗಳು ಬಿಹಾರದ ನೇಪಾಳ ಗಡಿಗೆ ಸಮೀಪವಿರುವ ಪಟ್ಟಣವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಕಸ್ಟಮರ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದರು. ಇಬ್ಬರೂ ಎಸ್ಎಸ್ಎಲ್ಸಿ ಫೇಲ್ ಆಗಿದ್ದರೂ ಖದೀಮತನದಲ್ಲಿ ಡಾಕ್ಟರೇಟ್ ಮಾಡುವಷ್ಟು ಪಂಡಿತರಾಗಿದ್ದರು. ಇಬ್ಬರೂ ಆಧಾರ್ ಕಾರ್ಡ್, ಪಾನ್ ಕಾರ್ಡ್, ಹಣ ವರ್ಗಾವಣೆ ಸೇರಿದಂತೆ ಇನ್ನಿತರ ಸರ್ವಿಸ್ಗಳನ್ನು ನೀಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಬೆರಳಚ್ಚು ಹಾಗೂ ಆಧಾರ್ ಕಾರ್ಡ್ ನಂಬರ್ ಬಳಸಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಲ್ಲಿನ ಹಣ ಎಗರಿಸುವ ಬಗ್ಗೆ ಅರಿತುಕೊಂಡಿದ್ದರು. ಬಿಹಾರದ ತಮ್ಮ ಸರ್ವಿಸ್ ಸೆಂಟರ್ನಲ್ಲಿ ಕುಳಿತುಕೊಂಡೇ ಸರ್ಕಾರಿ ಜಾಲತಾಣಗಳಿಗೆ ಗ್ರಾಹಕರ ಆಧಾರ್ ಕಾರ್ಡ್ ನಂಬರ್ ಹಾಗೂ ಬೆರಳಚ್ಚು ಸಿಗುವ ಮಾಹಿತಿ ಪರಿಶೀಲಿಸುತ್ತಿದ್ದರು. ಕರ್ನಾಟಕ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಜಾಲತಾಣದಲ್ಲಿ ಶೋಧಿಸಿದಾಗ ಸಾರ್ವಜನಿಕವಾಗಿ ಸಿಗುವಂತಹ ನೋಂದಣಿಗೆ ಸಂಬಂಧಿಸಿಂತೆ ಆಧಾರ್ ಕಾರ್ಡ್ ನಂಬರ್ ಹಾಗೂ ಬೆರಳಚ್ಚು ಸಂಗ್ರಹಿಸಿ ವಿವಿಧ ಸಾಫ್ಟ್ವೇರ್ ಮುಖಾಂತರ ಬೆರಳಚ್ಚು ಸ್ಪಷ್ಟವಾಗಿ ಕಾಣಿಸುವ ವ್ಯವಸ್ಥಿತವಾಗಿ ರೂಪಿಸಿಕೊಂಡು ಮೈಕ್ರೊ ಎಟಿಎಂಗಳ ಮುಖಾಂತರ ಬ್ಯಾಂಕ್ ಖಾತೆದಾರರ ಹಣ ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಸಾಕು. ಖಾತೆ ನಂಬರ್ ಅಥವಾ ಒಟಿಪಿ, ಕೋಡ್ ನಂಬರ್ ಇಲ್ಲದೆ ಕೇವಲ ಆಧಾರ್ ಸಂಖ್ಯೆ ಹಾಗೂ ಬೆರಳಚ್ಚು ಬಳಸಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ನಲ್ಲಿ (ಎಇಪಿಎಸ್) ಗರಿಷ್ಠ ₹ 10 ಸಾವಿರದವರೆಗೆ ಜನರು ಹಣ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಬ್ಯಾಂಕ್ಗಳ ಸಮೀಪದಲ್ಲಿ ಮಿನಿ ಎಟಿಎಂ ಯಂತ್ರಗಳನ್ನು ಕೇಂದ್ರ ಸರ್ಕಾರ ವಿತರಿಸಿದೆ. ಈ ವ್ಯವಸ್ಥೆಯನ್ನು ಸೈಬರ್ ವಂಚಕರಿಗೆ ವರದಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದು , ಬಿಹಾರದ ಕುಗ್ರಾಮದಲಿ ಕೂತುಕೊಂಡೇ ಈ ವಂಚಕರು ರಾಜ್ಯದ ಜನರ ಹಣ ಎಗರಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲೂ ಇಂತಹ ವಂಚನೆ ಪ್ರಕರಣಗಳು ವರದಿ ಆಗಿದದ್ವು . ಮಂಗಳೂರು ಪೋಲೀಸರು ಬಿಹಾರ ರಾಜ್ಯದ ಸುಪೌಲ್ ನ ದೀಪಕ್ ಕುಮಾರ್ ಹೆಂಬ್ರಮ್ (33) ಅರಾರಿ ಜಿಲ್ಲೆಯ ವಿವೇಕ್ ಕುಮಾರ್ ಬಿಶ್ವಾಸ್ (24) ಮದನ್ ಕುಮಾರ್ (23) ಎಂಬ ದುಷ್ಕರ್ಮಿಗಳನ್ನು ಹೆಡೆ ಮುರಿ ಕಟ್ಟಿದ್ದರು.. 6 ತಿಂಗಳಿನ ಅವಧಿಯಲ್ಲಿ ಮಂಗಳೂರು ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿದ ಬಳಿಕ ನೋಂದಣಿದಾರರ ಹಣವು ಇತ್ತೀಚೆಗೆ 2 ತಿಂಗಳ ಅವಧಿಯಲ್ಲಿ ಅವರು ಹೊಂದಿರುವ ವಿವಿಧ ಬ್ಯಾಂಕ್ಗಳಿಂದ ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಮಂಗಳೂರು ನಗರದ ಸೆನ್ ಕೈಂ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ.
ಪ್ರತಿಯೊಬ್ಬರೂ ಇನ್ನು ಮುಂದೆ ಆಧಾರ್ ಸಂಖ್ಯೆ ಜತೆ ಬೆರಳಚ್ಚು ನೀಡುವಾಗ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ ಬೆರಳಚ್ಚು ಸಂಗ್ರಹಿಸುವ ಕಾವೇರಿ 2.0 ತಂತ್ರಾಂಶದ ಭದ್ರತೆಯನ್ನೂ ರಕ್ಷಿಸಲು ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ.