ರಾಯ್ಪುರ: ಅದಾನಿ ಗ್ರೂಪ್ ಮತ್ತು ನರೇಂದ್ರ ಮೋದಿ ಸರ್ಕಾರದ ಮೇಲೆ ನಿತ್ಯವೂ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಚಾತುರ್ಯವೊಂದು ಸಾಮಾಜಿಕ ತಾಣಗಳಲ್ಲಿ ನಗೆ ಪಾಟಲಿಗೆ ಕಾರಣವಾಗಿದೆ.
ಭಾನುವಾರ ಛತ್ತೀಸ್ಗಢದ ರಾಜ್ನಂದಗಾಂವ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರಿಗೆ ಅನುಕೂಲವಾಗುವಂತೆ ನಿತ್ಯವೂ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತಿನ ಭರಾಟೆಯಲ್ಲಿ ಛತ್ತೀಸ್ ಘಡ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರಕಾರ ಎಂಬುದನ್ನೂ ರಾಹುಲ್ ಗಾಂಧಿ ಮರೆತು ಮಾತನಾಡಿದ್ದಾರೆ. “ನೀವು (ಮೋದಿ ಸರ್ಕಾರ) ಅದಾನಿ ಗ್ರೂಪ್ ಗಾಗಿ 24 X 7 ಕೆಲಸ ಮಾಡುತ್ತಿದ್ದೀರಿ. ಮತ್ತು ಈ ರಾಜ್ಯದಲ್ಲಿ ನಿಮ್ಮ ಮುಖ್ಯಮಂತ್ರಿ (ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರನ್ನು ಉಲ್ಲೇಖಿಸಿ) ಸಹ ಅದಾನಿಗಾಗಿ ಕೆಲಸ ಮಾಡುತ್ತಾರೆ” ಎಂದು ರಾಹುಲ್ ಗಾಂಧಿ ಸ್ವಪಕ್ಷೀಯರನ್ನೇ ಲೇವಡಿ ಮಾಡಿದರು.
ಆದರೆ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಅವರು ಈ ಹೇಳಿಕೆ ಬಳಸಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ.
ಎಕ್ಸ್ ನಲ್ಲಿ ಕಮೆಂಟ್ ಮಾಡಿರುವ ಅವರು ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಸದಾ ಅದಾನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಅಂತಿಮವಾಗಿ, ಸತ್ಯ ಹೊರಬಿದ್ದಿದೆ. ಅದಾನಿ, ಮತ್ತು ಕಾರ್ಪೊರೇಟ್ ಗುಂಪನ್ನು ಪೋಷಿಸಿದ್ದು ಕಾಂಗ್ರೆಸ್ ಪಕ್ಷವೇ ಎಂಬುದನ್ನು ರಾಹುಲ್ ಸ್ಪಷ್ಟಪಡಿಸಿದ್ದಾರೆ ಅವರು ತಮಾಷೆಯ ವ್ಯಕ್ತಿ ಎಂದು ಸಾಬೀತುಪಡಿಸಿದ್ದಾರೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅದಾನಿ ಗ್ರೂಪ್ಗೆ ಅನೇಕ ಕಾಂಗ್ರೆಸ್ ರಾಜ್ಯ ಸರ್ಕಾರಗಳು ಗುತ್ತಿಗೆಗಳನ್ನು ನೀಡುತ್ತಿವೆ. ಆದರೆ ಭಾಷಣ ಮಾಡುವಾಗ ಕಾಂಗ್ರೆಸ್ ನಾಯಕರು ಅದಾನಿ ಸಮೂಹವನ್ನು ಬಿಜೆಪಿಯೊಂದಿಗೆ ಸಮೀಕರಿಸಿ ಮಾತನಾಡುತ್ತಾರೆ ಎಂದು ಆರೋಪ ಇದೆ. ರಾಜಾಸ್ಥಾನದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಡಳಿತದ ಅಡಿಯಲ್ಲಿ ಅದಾನಿ ಸಮೂಹವು ಮುಂದಿನ 5 ರಿಂದ 7 ವರ್ಷಗಳಲ್ಲಿ ಪೂರ್ಣಗೊಳಿಸಬೇಕಾದ ಒಟ್ಟು 65 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಗುತ್ತಿಗೆ ಗಳನ್ನು ಪಡೆದುಕೊಂಡಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಪಾಲುದಾರರಾಗಿದ್ದ ಮಹಾ ವಿಕಾಸ್ ಅಗಾಧಿ ಸರ್ಕಾರದ ಅವಧಿಯಲ್ಲಿ, ಅದಾನಿ ಗ್ರೂಪ್ ದಿಘಿ ಬಂದರು ಯೋಜನೆಯನ್ನು ಪಡೆದುಕೊಂಡಿದೆ. 2015 ರಲ್ಲಿ, ಕಾಂಗ್ರೆಸ್ ನೇತೃತ್ವದ ಕೇರಳ ಸರ್ಕಾರವು ಅದಾನಿ ಬಂದರುಗಳಿಗೆ ವಿಜಿಂಜಂನಲ್ಲಿ ಹೊಸ ಬಂದರನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ನೀಡಿತು. ಅದಾನಿ ಪೋರ್ಟ್ಸ್ ಹರಾಜಿನಲ್ಲಿ 1,635 ಕೋಟಿ ರೂ.ಗಳ ಕಡಿಮೆ ಅನುದಾನವನ್ನು ಸಲ್ಲಿಸಿದ್ದರಿಂದ ವಯಬಿಲಿಟಿ ಗ್ಯಾಪ್ ಫಂಡಿಂಗ್ (ವಿಜಿಎಫ್) ಬಳಕೆಯ ಮೂಲಕ ಗುತ್ತಿಗೆ ನೀಡಲಾಗಿದೆ.
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಕಾಲದಲ್ಲಿಯೂ ಕೇಂದ್ರವು ಅದಾನಿ ಸಮೂಹಕ್ಕೆ 21 ಸಾವಿರ ಕೋಟಿ ರೂಪಾಯಿಗಳ 10 ಗುತ್ತಿಗೆಗಳನ್ನು ನೀಡಿತ್ತು. ಅದಾನಿ ಸಮೂಹವು ಹಿಂದಿನ ಯುಪಿಏ ಸರ್ಕಾರದ ಅವಧಿಯಲ್ಲಿಯೇ ಪ್ರವರ್ಧಮಾನಕ್ಕೆ ಬಂದಿತು ಎಂಬುದು ಅಂಕಿ ಅಂಶಗಳಿಂದಲೇ ಸ್ಪಷ್ಟವಾಗುತ್ತದೆ.
ಈ ಹಿಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೂ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಎರಡು ಮೂರು ಸಂದರ್ಭಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಒಗೆಯಬೇಕೆಂದು ತೀರ್ಮಾನಿಸಿದ್ದಾರೆ ಎಂದು ಹೇಳಿ ನಗೆ ಪಾಟಲಿಗೀಡಾಗಿದ್ದರು.