ಜೆರುಸಲೇಮ್: ತನ್ನ ಅಮಾಯಕ 1400 ಪ್ರಜೆಗಳನ್ನು ಭಯೋತ್ಪಾದನಾ ಧಾಳಿಯ ಮೂಲಕ ಕೊಂದಿರುವ ಹಾಮಾಸ್ ಉಗ್ರರ ಹೆಡೆಮುರಿ ಕಟ್ಟಲು ಇಸ್ರೇಲ್ ಧಾಳಿಗಳನ್ನು ತೀವ್ರಗೊಳಿಸಿದೆ. ಆದರೆ ನಾಗರಿಕರನ್ನೂ ಗುರಾಣಿಗಳಂತೆ ಬಳಸಿಕೊಳ್ಳುತ್ತಿರುವ ಹಾಮಾಸ್ ಉಗ್ರರು ಯುದ್ದ ಸಮಯದ ಬಳಕೆಗೆಂದೇ ನಿರ್ಮಿಸಲಾದ ಬಂಕರ್ ಮತ್ತು ಸುರಂಗ ಮಾರ್ಗಗಳಲ್ಲಿ ಅವಿತುಕೊಂಡು ಇಸ್ರೇಲ್ ವಿರುದ್ದ ಪ್ರತಿಧಾಳಿ ನಡೆಸುತಿದ್ದಾರೆ. ಈಗಾಗಲೇ ಇಸ್ರೇಲಿನ ಸೇಡಿನ ಧಾಳಿಗೆ 4000 ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮತ್ತು ಉಗ್ರರು ಕೊಲ್ಲಲ್ಪಟಿದ್ದಾರೆ. ಉಗ್ರರ ನಾಮಾವಶೇಷ ಮಾಡಲು ಅವರ ಅಡಗುದಾಣಗಳನ್ನು ನಾಶ ಮಾಡಲೇಬೇಕಿದೆ ಎಂದರಿತಿರುವ ಇಸ್ರೇಲ್ ಸುರಂಗದೊಳಗೆ ಇರುವ ಉಗ್ರರ ನಿರ್ನಾಮಕ್ಕೆ ವಿನೂತನ ತಂತ್ರಗಾರಿಕೆ ಬಳಸಿಕೊಳ್ಳುತ್ತಿದೆ.
ಯುದ್ದ ತಂತ್ರಗಾರಿಕೆ ಮತ್ತು ಧಾಳಿಗೆ ಅತ್ಯಾಧುನಿಕ ಶಸ್ತಾಸ್ತ್ರ ಬಳಸುವ ಇಸ್ರೇಲ್ ಈ ಹಮಾಸ್ನ ಸುರಂಗ ಜಾಲದ ವಿರುದ್ಧ ಹೋರಾಡಲು ಸ್ಪಾಂಜ್ ಬಾಂಬ್ಗಳನ್ನು” ತಯಾರಿಸುತ್ತಿದೆ, ಇದು ನೊರೆಯ ಕ್ಷಿಪ್ರ ಸ್ಫೋಟವನ್ನು ಸೃಷ್ಟಿಸುತ್ತದಲ್ಲದೆ , ವೇಗವಾಗಿ ವಿಸ್ತರಿಸುತ್ತದೆ ಮತ್ತು ನಂತರ ಗಟ್ಟಿಯಾಗುತ್ತದೆ. ಈ ಸುರಂಗ ಮಾರ್ಗಗಳು ನೂರಾರು ಕಿಲೋಮೀಟರ್ಗಳವರೆಗೆ ವಿಸ್ತರಿಸಿದ್ದು 360-ಚದರ-ಕಿಲೋಮೀಟರ್ಗಳ ಕರಾವಳಿ ಪಟ್ಟಿ ಮತ್ತು ಅದರ ಸುತ್ತಲಿನ ಗಡಿಗಳ ಕೆಳಗೆ 80 ಮೀಟರ್ಗಳಷ್ಟು ಆಳಕ್ಕೆ ಇಳಿಯುವಂತಹ ವಿವಿಧ ರೀತಿಯ ಸುರಂಗಗಳನ್ನು ಹಮಾಸ್ ಬಳಸುತ್ತಿದೆ.
ಈ ಸ್ಪಾಂಜ್ ಬಾಂಬ್ ಗಳು ಸ್ಫೋಟಗೊಳ್ಳುವ ಶಬ್ದ ಉಂಟು ಮಾಡುವ ಬಾಂಬ್ ಗಳಲ್ಲ. ಇವು ದ್ರವ ರೂಪದ ರಸಾಯನಿಕ ಬಾಂಬ್ ಗಳಾಗಿದ್ದು ಎರಡು ರಸಾಯನಿಕಗಳ ಮಿಶ್ರಣದಿಂದ ನೊರೆಗಳ ಗೋಡೆಯನ್ನೇ ಸೃಷ್ಟಿಸುವ ಬಾಂಬ್ ಗಳಾಗಿವೆ. ಇವುಗಳನ್ನು 2 ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ 2 ರೀತಿಯ ರಾಸಾಯನಿಕಗಳನ್ನು ತುಂಬಿಸಿ ಇಡಲಾಗಿರುತ್ತದೆ. ಈ 2 ಚೀಲಗಳನ್ನು ಒಂದು ಲೋಹದ ಕಂಬಕ್ಕೆ ಕಟ್ಟಿಡಲಾಗುತ್ತದೆ. ಬಾಂಬ್ ಎಸೆದಾಗ ಈ ಎರಡೂ ಚೀಲಗಳು ಕಂಬದಿಂದ ಬೇರ್ಪಟ್ಟು ರಸಾಯನಿಕಗಳು ಹೊರಬರುತ್ತವೆ. ಈ ರಸಾಯನಿಕಗಳು ಒಂದಕ್ಕೊಂದು ಮಿಶ್ರಣವಾದ ಕೂಡಲೇ ದ್ರವವು ಭಾರೀ ನೊರೆ ಸೃಷ್ಟಿಸುತ್ತದೆ. ಈ ನೊರೆಯು ಆ ನಂತರ ಗಟ್ಟಿಯಾಗುತ್ತದೆ ಹಾಗೂ ಸುರಂಗಗಳ ರಂಧ್ರಗಳು ಮತ್ತು ಬಾಗಿಲುಗಳನ್ನು ಮುಚ್ಚಿಬಿಡುತ್ತದೆ. ಇದರಿಂದ ಹಮಾಸ್ ಉಗ್ರರು ಸುರಂಗದಿಂದ ಹೊರಬರಲು ಆಗುವುದಿಲ್ಲ .
ಈ ರೀತಿಯ ಸ್ಪಾಂಜ್ ಬಾಂಬ್ ಗಳನ್ನು ಸುರಂಗಗಳ ಕಿಂಡಿ ಮತ್ತು ಬಾಗಿಲಿನ ಬಳಿ ಪ್ರಯೋಗಿಸಲಾಗುತ್ತದೆ. ಇದರಿಂದ ಇಲಿಗಳು ಬೋನಿನಲ್ಲಿ ಸಿಕ್ಕುವಂತೆ ಉಗ್ರರು ಅಲ್ಲೇ ಸಿಕ್ಕಿ ಹೊರಬರಲಾಗದೇ ಪ್ರಾಣ ಕಳೆದುಕೊಳ್ಳುತ್ತಾರೆ.
ಆದರೆ ಇದರ ರಾಸಾಯನಿಕ ಮಿಶ್ರಣ ಅಪಾಯಕಾರಿ ಆಗಿದ್ದು ಈ ಹಿಂದೆ ಇದರ ಪ್ರಯೋಗದ ವೇಳೆ ಕೆಲವು ಇಸ್ರೇಲಿ ಸೈನಿಕರು ಕಣ್ಣು ಕಳೆದುಕೊಂಡಿದ್ದೂ ಉಂಟು ಎಂದು ವರದಿಗಳು ಹೇಳಿವೆ.
ಯಹಲೋಮ್ ಎನ್ನುವುದು ಇಸ್ರೇಲ್ನ ಯುದ್ಧ ಎಂಜಿನಿಯರಿಂಗ್ ಕಾರ್ಪ್ಸ್ನ ವಿಶೇಷ ಕಮಾಂಡೋ ಪಡೆ ಆಗಿದ್ದು ಇದನ್ನು “ವೀಸೆಲ್ಗಳು” ಎಂದೂ ಕರೆಯಲಾಗುತ್ತದೆ. ಈ ಸೇನಾ ಘಟಕವು ಸುರಂಗಗಳ ಪತ್ತೆ, ತೆರವು ಮತ್ತು ನಾಶಗೊಳಿಸುವಲ್ಲಿ ಪರಿಣತಿಯನ್ನು ಹೊಂದಿದೆ.
ಇಸ್ರೇಲ್ ನ ಧಾಳಿಗೆ ಈಗಾಗಲೇ ಸುಮಾರು 200 ಕ್ಕೂ ಅಧಿಕ ಉಗ್ರರು ಮತ್ತು ಹಾಮಾಸ್ ಕಮಾಂಡರ್ ಗಳು ಬಲಿಯಾಗಿದ್ದಾರೆ, ಆದರೆ ತನ್ನ ನಾಗರಿಕರ ಮೇಲೆ ನಡೆದ ಧಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿರುವ ಇಸ್ರೇಲ್ ವಿಶ್ವ ಸಂಸ್ಥೆಯ ಕದನ ವಿರಾಮ ಘೋಷಣೆಗೂ ಕ್ಯಾರೇ ಅಂದಿಲ್ಲ.