ಜೆರುಸಲೇಂ: ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿರುವ ಇಸ್ರೇಲ್ ಮತ್ತು ಹಾಮಾಸ್ ನಡುವಿನ ಕದನ ವಿರಾಮವು ತತ್ ಕ್ಷಣವೇ ಜಾರಿಗೆ ಬರಬೇಕೆಂದು ವಿಶ್ವಸಂಸ್ಥೆಯಲ್ಲಿ 120 ದೇಶಗಳ ಬೆಂಬಲ ಪಡೆದು ನಿರ್ಣಯ ಅಂಗೀಕರಿಸಲಾಗಿದೆ. ಆದರೆ ಈ ಕುರಿತ ತಿದ್ದುಪಡಿ ಪ್ರಸ್ತಾವನೆಯು ಬಹುಮತವಿಲ್ಲದ ಕಾರಣದಿಂದ ವಿಶ್ವಸಂಸ್ಥೆಯಲ್ಲಿ ಅಂಗೀಕಾರ ಆಗಿಲ್ಲ. ಈ ಪ್ರಸ್ತಾವನೆಯನ್ನು ಜೋರ್ಡಾನ್ ಸಿದ್ದಪಡಿಸಿ ಮಂಡಿಸಿತ್ತು. ಆದರೆ ಈ ಪ್ರಸ್ತಾವನೆಯಲ್ಲಿ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ಭಯೋತ್ಪಾದಕ ಧಾಳಿಯನ್ನು ಖಂಡಿಸುವ ಪ್ಯಾರಾವನ್ನು ಸೇರಿಸಿ ನಿರ್ಣಯವನ್ನು ತಿದ್ದುಪಡಿ ಮಾಡುವ ಕೆನಡಾದ ಪ್ರಸ್ತಾಪವನ್ನು ಭಾರತವು ಬೆಂಬಲಿಸಿತು. ಆದರೆ ಈ ತಿದ್ದುಪಡಿಯು ಬಹುಮತ ಪಡೆಯಲು ಸಾಧ್ಯವಾಗದೆ ವಿಫಲವಾಗಿದೆ.
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯಲ್ಲಿನ ನಿರ್ಣಯದ ಕುರಿತು ಭಾರತ ಶುಕ್ರವಾರ ಮತದಾನದಿಂದ ದೂರ ಉಳಿದಿದೆ. ಜೋರ್ಡಾನ್ ಪ್ರಸ್ತಾವಿಸಿದ ನಿರ್ಣಯವು ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವ ಪ್ರಾಣ ಹಾನಿ ಕುರಿತು ಕದನ ವಿರಾಮಕ್ಕೆ ಕರೆ ನೀಡಿತ್ತು. ಆದರೆ ಇದರಲ್ಲಿ ಹಮಾಸ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಮಾಸ್ನಿಂದ ಭಯೋತ್ಪಾದಕ ದಾಳಿಗಳನ್ನು ಖಂಡಿಸುವ ಪ್ಯಾರಾಗ್ರಾಫ್ ಅನ್ನು ಸೇರಿಸುವ ತಿದ್ದುಪಡಿಯನ್ನು ಕೆನಡಾ ಪ್ರಸ್ತಾಪಿಸಿದ್ದು ಭಾರತವು ಸೇರಿದಂತೆ 87 ಇತರ ರಾಷ್ಟ್ರಗಳು ಕೆನಡಾದ ಪ್ರಸ್ತಾವಿತ ತಿದ್ದುಪಡಿಯ ಪರವಾಗಿ ಮತ ಹಾಕಿವೆ. ಆದರೆ ಮೂರನೇ ಎರಡರಷ್ಟು ಬಹುಮತ ಇಲ್ಲದ ಕಾರಣ ಅದನ್ನು ಅಂಗೀಕರಿಸಲಾಗಲಿಲ್ಲ.
ಆದರೆ ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವುದು ಅತ್ಯವಶ್ಯಕ ‘ ಎಂಬ ಶೀರ್ಷಿಕೆಯ ಜೋರ್ಡಾನ್ ನ -ಕರಡು ನಿರ್ಣಯವನ್ನು ಅಂಗೀಕರಿಸಲಾಯಿತು, ಅದರ ಪರವಾಗಿ 120 ರಾಷ್ಟ್ರಗಳು ಮತ ಚಲಾಯಿಸಿದವು, ಅದರ ವಿರುದ್ಧ 14 ರಾಷ್ಟ್ರಗಳು ಮತ ಚಲಾಯಿಸಿದ್ದು ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್ ಮತ್ತು ಯುಕೆ ಸೇರಿ 45 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.
ಹಮಾಸ್ ಮತ್ತು ಒತ್ತೆಯಾಳು ಎಂಬ ಎರಡು ಪ್ರಮುಖ ಪದಗಳು ನಿರ್ಣಯದಿಂದ ಕಾಣೆಯಾಗಿವೆ ಎಂದು ವಿಶ್ವಸಂಸ್ಥೆಯಲ್ಲಿನ ಅಮೇರಿಕ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಮತದಾನದ ಮೊದಲು ಅದನ್ನು ವಿರೋಧಿಸಿದರು. “ನೀವು ಗಮನಿಸಿದಂತೆ, ನಮ್ಮ ಮುಂದಿರುವ ನಿರ್ಣಯದಲ್ಲಿ ಎರಡು ಪ್ರಮುಖ ಪದಗಳು ಕಾಣೆಯಾಗಿವೆ. ಮೊದಲನೆಯದು ಹಮಾಸ್. ಈ ನಿರ್ಣಯವು ಅಕ್ಟೋಬರ್ 7 ರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಹೆಸರಿಸಲು ವಿಫಲವಾಗಿದೆ ಇದು ಅತಿರೇಕವಾಗಿದೆ, ”ಎಂದು ರಾಯಭಾರಿ ಹೇಳಿದರು.
“ಈ ನಿರ್ಣಯವು ಇಸ್ರೇಲಿನ ಮುಗ್ಧ ಜನರ ಸಾವಿನ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಿಲ್ಲ. ಇಲ್ಲಿರುವ ಅನೇಕ ರಾಷ್ಟ್ರಗಳ ನಾಗರಿಕರನ್ನು ಹಮಾಸ್ ಮತ್ತು ಇತರ ಭಯೋತ್ಪಾದಕ ಗುಂಪುಗಳು ಒತ್ತೆಯಾಳುಗಳಾಗಿರುವ ನಾಗರಿಕರನ್ನು ಹೊಂದಿದ್ದಾರೆ” ಎಂದು ಲಿಂಡಾ ಹೇಳಿದರು. ಈ ಪ್ರಸ್ತಾವಿಸಿರುವ ನಿರ್ಣಯವು ದುಷ್ಟತನದ ಲೋಪಗಳಾಗಿವೆ. ಏಕೆಂದರೆ ಇದು ಹಮಾಸ್ನ ಕ್ರೌರ್ಯಕ್ಕೆ ರಕ್ಷಣೆ ನೀಡುತ್ತದೆ. ಕದನ ವಿರಾಮ ಆದರೆ ಹಾಮಾಸ್ ಮತ್ತೆ ಅಧಿಕಾರ ಹಿಡಿಯುತ್ತದೆ ಇದನ್ನು ಯಾವುದೇ ಸದಸ್ಯ ರಾಷ್ಟ್ರ ಅನುಮತಿಸಬಾರದು ಎಂದರು.
ಈ ಜೋರ್ಡಾನ್ ಪ್ರಸ್ತಾವಿಸಿರುವ ನಿರ್ಣಯವು ಇಸ್ರೇಲ್ ಅನ್ನು “ಆಕ್ರಮಿತ ಶಕ್ತಿ” ಎಂದು ಉಲ್ಲೇಖಿಸಿದೆ. ಪ್ಯಾಲೇಸ್ಟಿನಿಯನ್ ನಾಗರಿಕರು, ವಿಶ್ವಸಂಸ್ಥೆ ಸಿಬ್ಬಂದಿ ಮತ್ತು ಮಾನವೀಯ ಕೆಲಸಗಾರರು ಉತ್ತರದಲ್ಲಿರುವ ಗಾಜಾ ಪಟ್ಟಿಯಲ್ಲಿರುವ ಎಲ್ಲಾ ಪ್ರದೇಶಗಳಿಂದ ದಕ್ಷಿಣಕ್ಕೆ ಸ್ಥಳಾಂತರಗೊಳ್ಳಲು ಇಸ್ರೇಲ್ “ಆಕ್ರಮಿತ ಶಕ್ತಿ” ಯ ಆದೇಶವನ್ನು ರದ್ದುಗೊಳಿಸುವಂತೆ ನಿರ್ಣಯವು ಕರೆ ನೀಡಿದೆ.