ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಒಂದು ವಿಶೇಷವಾದ ಹಬ್ಬ. ಹೊಲ ಗದ್ದೆಗಳು ಇದ್ದವರು ಕುಟುಂಬದವರು ಎಲ್ಲರು ಸೇರಿ ಎತ್ತಿನ ಗಾಡಿ, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳನ್ನು ಅಲಂಕರಿಸಿ ಹೊಲಕ್ಕೆ ಹೋಗಿ ಅಲ್ಲಿ ಬೆಳೆದ ಫಸಲಿಗೆ ಪೂಜೆ ಸಲ್ಲಿಸಿ, ನಂತರ ಭೂಮಿ ತಾಯಿಗೆ ಉಡಿ ತುಂಬಿ ನೈವೇದ್ಯ ಅರ್ಪಿಸಿ, ಹೊಲಗಳಿಗೆ ಚರಗ ಚೆಲ್ಲಿ ಕುಟುಂಬದವರೆಲ್ಲರು ಶ್ರದ್ಧೆ ಇಂದ ಭಕ್ತಿಯಿಂದ ಭೂಮಿ ಪೂಜೆ ಮಾಡಿ ಪ್ರತಿ ವರ್ಷ ಒಳ್ಳೆಯ ಬೆಳೆಯನ್ನು ಕೊಡಲಿ ಎಂದು ಬೇಡಿಕೊಳ್ಳುತ್ತಾರೆ.
ಈ ಹಬ್ಬವನ್ನು ಹಲವಾರು ಕಡೆಯಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. ವರ್ಷ ಪೂರ್ತಿ ಭೂಮಿಯಲ್ಲಿ ಬೆಳೆಯನ್ನು ಬೆಳೆಯುವ ರೈತನಿಗೆ ಭೂಮಿ ಒಂದು ಪಲವತ್ತತೆಯ ಪ್ರತೀಕವಾಗಿದೆ. ಈ ಸೀಗೆ ಹುಣ್ಣಿಮೆ ಹಬ್ಬವನ್ನು ನಮ್ಮ ರಾಜ್ಯದಲ್ಲಿ ಆಚರಣೆ ಮಾಡಲಾಗುತ್ತದೆ.
ಸೀಗೆ ಹುಣ್ಣಿಮೆಗೆ ವಿಶೇಷವಾಗಿ ಹೋಳಿಗೆ,ಕಡುಬು, ಸಾಂಬಾರು, ಶೇಂಗಾ ಚಟ್ನಿ, ಗುರಳ್ಳಿ ಚಟ್ನಿ, ಹುಳಿ ಚಿತ್ರನ್ನ, ಮೊಸರಿನ ಬುತ್ತಿ, ಕರ್ಚಿಕಾಯಿ, ಕಟಕಲು ರೊಟ್ಟಿ, ಪುಂಡಿ ಪಲ್ಯೆ, ಎಣಗಾಯಿ ಪಲ್ಯೆ, ಕಿಚಡಿ, ಅಕ್ಕಿಹುಗ್ಗಿ, ಚೆಟ್ನಿ, ಕರಿಂಡಿ, ಇತ್ಯಾದಿ ಭಕ್ಷ್ಯಗಳನ್ನು ತಯಾರಿಸಿ ಮನೆಯ ಮಂದಿಯ ಜೊತೆಗೆ ಸುತ್ತಮುತ್ತಲಿನ ಜನರನ್ನು ಕರೆದುಕೊಂಡು ಹೊಲಗಳಿಲ್ಲಿ ಎಲ್ಲರೂ ಸೇರಿ ಊಟ ಮಾಡುತ್ತಾರೆ.
ಈ ಸೀಗೆ ಹುಣ್ಣಿಮೆ ಹಬ್ಬ ರೈತ ಕುಟುಂಬಕ್ಕೆ ಒಂದು ವಿಶೇಷ ಹಬ್ಬವಾಗಿದೆ.