ಇತ್ತೀಚೆಗೆ, ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿ ನವದೆಹಲಿಯಲ್ಲಿ ದೇಶದ ಮೊದಲ ಪ್ರಾದೇಶಿಕ ರ್ಯಾಪಿಡ್ ರೈಲು ವ್ಯವಸ್ಥೆ (ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ) – ಆರ್ಆರ್ಟಿಎಸ್ ‘ನಮೋ ಭಾರತ್’ಗೆ ಚಾಲನೆ ನೀಡಿದರು. ಏನಿದು ಆರ್ಆರ್ಟಿಎಸ್? ಇತರ ರೈಲಿಗಿಂತ ಇದು ಹೇಗೆ ವಿಭಿನ್ನ? ಈ ಲೇಖನದಲ್ಲಿ ತಿಳಿಯೋಣ.
ಏನಿದು ಆರ್ಆರ್ಟಿಎಸ್ ರೈಲು?
ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ/ Regional Rapid Transit System (RRTS) ಭಾರತದ ಮೊದಲ ಇಂಟರ್ಸಿಟಿ ರೈಲು ಸಾರಿಗೆ ಯೋಜನೆಯಾಗಿದೆ. ಮೊದಲ ಹಂತದ ಯೋಜನೆಯಲ್ಲಿ, ದೇಶದ ರಾಜಧಾನಿಯೊಂದಿಗೆ, ದೇಶದ ಇತರ ದ್ವಿತೀಯ ದರ್ಜೆಯ ನಗರ ಹಾಗೂ ಪಟ್ಟಣಗಳನ್ನು ರೈಲಿನ ಮೂಲಕ ಸಂಪರ್ಕಿಸಲಿದೆ. ಆರ್ಆರ್ಟಿಎಸ್ ರೈಲು, ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುವ ವೇಗವನ್ನು ಹೊಂದಿದೆ. ಈ ರೈಲುಗಳನ್ನು ನಮೋ ಭಾರತ್ ಎಂದು ಹೆಸರಿಸಲಾಗಿದೆ.
ಈ ಯೋಜನೆಯನ್ನು 30,274 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಹಣವನ್ನು ನೀಡಿದೆ.
ರೈಲಿನ ವೈಶಿಷ್ಟ್ಯಗಳು
• ವೈ ಫೈ ಸೌಲಭ್ಯ; ಮೊಬೈಲ್ ಹಾಗೂ ಲ್ಯಾಪ್ಟಾಪ್ ಚಾರ್ಜಿಂಗ್ ಪಾಯಿಂಟ್, ಪ್ರತ್ಯೇಕ ಲಗೇಜ್ ಕರಿಯರ್
• ರಾಪಿಡ್ಎಕ್ಸ್ ರೈಲು ಪ್ರೀಮಿಯಂ ಕೋಚ್ ಸೇರಿದಂತೆ 6 ಕೋಚ್ಗಳನ್ನು ಹೊಂದಿರುತ್ತದೆ. ಪ್ರತಿ ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅದಲ್ಲದೇ, ಬೇರೆ ಕೋಚ್ಗಳಲ್ಲಿ ಮಹಿಳೆಯರು, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಮೀಸಲು ಸೀಟುಗಳಿವೆ. ಪ್ರತಿ ರೈಲು 2X2 ಲೇಔಟ್ನಲ್ಲಿ 407 ಆಸನಗಳನ್ನು ಹೊಂದಿರುತ್ತದೆ.
• ಮ್ಯಾಗಜೀನ್ ಹೋಲ್ಡರ್, ಬಾಟಲ್ ಹೋಲ್ಡರ್, ಫೂಟ್ ರೆಸ್ಟ್, ಹ್ಯಾಂಗರ್ಗಳು ಮತ್ತು ಮೊಬೈಲ್ ಮತ್ತು ಲ್ಯಾಪ್ಟಾಪ್ ಚಾರ್ಜಿಂಗ್ ಪಾಯಿಂಟ್ಗಳು
• ಪ್ರೀಮಿಯಂ ಕೋಚ್ ಕಿಟಕಿಗಳ ಮೇಲೆ ಸನ್ ಶೀಲ್ಡ್
• ಪ್ರೀಮಿಯಂ ಕೋಚ್ಗೆ ಪ್ರವೇಶಕ್ಕಾಗಿ ಪ್ಲಾಟ್ಫಾರ್ಮ್ನಲ್ಲಿ ಪ್ರತ್ಯೇಕ ಗೇಟ್
• ಪ್ರಯಾಣಿಕರಿಗೆ ಸಹಾಯಕ್ಕಾಗಿ ರೈಲು ಪರಿಚಾರಕರು
ಆರ್ಆರ್ಟಿಎಸ್ ಮಹತ್ವ
ರಾಜಧಾನಿ ನವದೆಹಲಿಯಿಂದ ದೇಶದ ಇತರ ನಗರಗಳಿಗೆ ಸಂಚರಿಸುವ ಸಮಯವನ್ನು ಇದು ಕಡಿಮೆಗೊಳಿಸಲಿದೆ. ನಿತ್ಯಪ್ರಯಾಣಿಕರಿಗೆ ಇದು ಬಹಳ ಅನುಕೂಲವಾಗಲಿದೆ. ಖಾಸಗಿ ವಾಹನಗಳಲ್ಲಿ ಸಂಚರಿಸುವವರೂ ಆರ್ಆರ್ಟಿಎಸ್ ನಲ್ಲಿ ಸಂಚಾರ ಆರಂಭಿಸಿದರೆ ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಿಗುವ ನಿರೀಕ್ಷೆಯಿದೆ. ಇನ್ನು ಆರ್ಆರ್ಟಿಎಸ್ ಸುತ್ತಲೂ ವ್ಯಾಪಾರ ಕೇಂದ್ರಗಳು ತಲೆಯೆತ್ತುವ ಸಾಧ್ಯತೆಯಿವೆ ಹಾಗೂ ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚಲಿವೆ.
RRTS ನ ಮೊದಲ ಹಂತವು ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವೆ ಚಲಿಸುತ್ತದೆ, ಇದರಲ್ಲಿ ಐದು ನಿಲ್ದಾಣಗಳು ಸೇರಿವೆ: ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ. ದುಹೈ ಡಿಪೋ ಸೇರಿದಂತೆ 38.05 ಕಿಮೀ (23.64 ಮೈಲಿ) ಉದ್ದದ ಸಾಹಿಬಾಬಾದ್ – ಮೀರತ್ ದಕ್ಷಿಣ ವಿಭಾಗವು ಜನವರಿ 2024 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಇರುವ ರೈಲ್ವೇ ವ್ಯವಸ್ಥೆಗಿಂತ ಹೇಗೆ ಭಿನ್ನ?
ರೈಲು ಹಾಗೂ ಮೆಟ್ರೋ ವ್ಯವಸ್ಥೆ ಈಗಾಗಲೇ ನವದೆಹಲಿಯಲ್ಲಿ ಇದ್ದರೂ ಆರ್ಆರ್ಟಿಎಸ್ ರೈಲುಗಳು ಇವುಗಳಿಗಿಂತ ಬಹಳ ವೇಗವಾಗಿ ಚಲಿಸಲಿವೆ. ದೆಹಲಿಯ ಮೆಟ್ರೋ ಗರಿಷ್ಠ 120 ಕಿ. ಮೀ ವೇಗದಲ್ಲಿ ಸಂಚರಿಸಿದರೆ, ಆರ್ಆರ್ಟಿಎಸ್ ರೈಲು 160-180 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.
ಇನ್ನು ವೇಗ ಹೆಚ್ಚಿರುವುದರಿಂದ, ಮೆಟ್ರೋಗಿಂತಲೂ ಜಾಸ್ತಿ ಊರುಗಳನ್ನು ಇದು ತಲುಪಲಿದೆ. ಸೌಕರ್ಯದ ವಿಷಯದಲ್ಲೂ ಈ ರೈಲು ಬಹಳ ಸುಸಜ್ಜಿತವಾಗಿದೆ ಹಾಗೂ ತಾಂತ್ರಿಕವಾಗಿಯೂ ಬಹಳ ಮುಂದುವರೆದಿದೆ ಎನ್ನಬಹುದು.
8 ಕಾರಿಡಾರ್
ಆರ್ಆರ್ಟಿಎಸ್ ಯೋಜನೆ ಸದ್ಯ 8 ಕಾರಿಡಾರ್ಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ 3 ನ್ನು ಅಭಿವೃದ್ಧಿಪಡಿಸಲಾಗುತ್ತಿದೆ: ದೆಹಲಿ – ಗಾಝಿಯಾಬಾದ್ – ಮೀರತ್ (82 ಕಿಲೋಮೀಟರ್), ದೆಹಲಿ – ಗುರುಗ್ರಾಂ – ಎಸ್ಎನ್ಬಿ – ಅಲ್ವಾರ್ (164 ಕಿಲೋಮೀಟರ್) ಹಾಗೂ ದೆಹಲಿ – ಪಾಣಿಪತ್ (103 ಕಿಲೋಮೀಟರ್).
ಮುಂದಿನ ಹಂತದಲ್ಲಿ, ದೆಹಲಿ – ಫರಿದಾಬಾದ್ – ಬಳ್ಳಾಬ್ಘರ್ -ಪಲ್ವಾಲ್, ಘಜಿಯಾಬಾದ್ – ಖುರ್ಜಾ, ದೆಹಲಿ – ಬಹದ್ದೂರ್ಘರ್ – ರೋಹ್ಟಕ್, ಗಾಝಿಯಾಬಾದ್ – ಹಾಪುರ್ ಹಾಗೂ ದೆಹಲಿ – ಶೌದ್ರ – ಬರೌತ್.