ನಮ್ಮ ಹಿಂದೂ ಧರ್ಮದಾಗ ಆಚರಣೆಗೆ ಭಾಳ ಪ್ರಾಮುಖ್ಯತೆ ಕೊಟ್ಟಾರ. ಹಬ್ಬ ಇರಲಿ ಎನೇ ಇರಲಿ ಅದನ್ನ ವಿಜೃಂಭಣೆಯಿಂದ ಆಚರಸ್ತೆವಿ. ನಮ್ಮಲ್ಲೇ ಎಷ್ಟೋ ಜನರ ಮನ್ಯಾಗ ಪದ್ದತಿನ ಹಿಂಗ ಅದಲಾ; ಎನ ಇರಲಿಲ್ಲಾ ಅಂದ್ರೂ ಹಬ್ಬಕ್ಕ ಇಷ್ಟೆಲ್ಲಾ ಮಾಡಲ್ಲಿಕ್ಕೆ ಬೇಕು ಹಂಗ ಅದ. ಒಂದ ಸಣ್ಣ ಉದಾಹರಣೆ ಕೊಡಬೇಕ ಅಂದ್ರ ನಮ್ಮ ಮನಿ ಕೆಲಸದಾಕಿ ಮನ್ಯಾಗ ಒಂದ ಪದ್ಧತಿ ಅದ ಅದೇನ ಅಂದ್ರ, ಈ ವರ್ಷ ಎನ್ ಗಣಪತಿ ಹೇಳಿರತದಲಾ ಅದರಕ್ಕಿಂತಾ ಜಾಸ್ತಿ ರೊಕ್ಕದ ಗಣಪತಿಮೂರ್ತಿ ಮುಂದಿನ ಸಲಾ ಹೆಳೋದು. ಅಂದ್ರ ವಟ್ಟ ನಮ್ಮ ಮಂದಿಗೆ ಬೆಕ್ಕಾದ್ದ ಆಗ್ಲಿ ಹಬ್ಬಕ್ಕ ತಿನಸು ಉಣಸಿಗೆ ಕಮ್ಮಿ ಮಾಡೋದಿಲ್ಲಾ.
ಯಾಕ ಅಂದ್ರ ಆಚರಣೆಯಿಂದನ ನಮ್ಮ ಸಂಸ್ಕೃತಿ ಮತ್ತ ಪರಂಪರೆ ಉಳಿತದ. ಎಲ್ಲಾದಕ್ಕೂ ಎನ್ ದೇವರ adjust ಮಾಡಕೋತಾನ ತೋಗೊ ಅಂದ್ರ ಅಲ್ಲಾ. ನಾವು ಆಚರಣೆ ಮಾಡಬೇಕು ಮತ್ತ ಬಾಕಿದಾವರ ಕಡೆಯಿಂದನು ಮಾಡಸಬೇಕು . ಇನ್ನ ನಮ್ಮ ದೇಶದ ಹಬ್ಬಗಳ ಬಗ್ಗೆ ಹೇಳೊದ ಆದ್ರ, ಇಲ್ಲೇ ೩೬೫ ದಿನಾನೂ ಒಂದಿಲ್ಲಾ ಒಂದ ಕಡೆ ಹಬ್ಬ ನಡಿತನ ಇರತದ. ಅದರಾಗ ಈ ನವರಾತ್ರಿ ಅದು ಇತ್ತು ಅಂದ್ರ ಮುಗದ ಹೊತು. ತಮ್ಮ ಸಂಪ್ರದಾಯ ಮತ್ತ ಪ್ರಾದೇಶಿಕ ಆಚರಣೆಗೆ ತಕ್ಕ ಹಂಗ ಎಲ್ಲಾರೂ ಹಬ್ಬಾ ಮಾಡತಾರ. ನಮ್ಮಲ್ಲೆ ಹೆಂಗ ನಾವ ಒಂದಿಷ್ಟ ಕಿಲೋಮೀಟರ್ ಗೆ ಭಾಷಾ ಬದ್ಲ ಆಗತದಲಾ ಹಂಗ ನಮ್ಮ ಆಚರಣೆಗಳೂ ಬದ್ಲ ಆಗತ್ತದ.
ಯಾಕ ಹಿಂಗ ಹೇಳಿದೆ ಅಂದ್ರ ನಮ್ಮ ಬೆಳಗಾವಿನ್ಯಾಗ ಗಣಪತಿ ಮತ್ತ ದಸರಾ ಭಾಳ ಧಾಂ ಧೂಂ ದಿಂದ ಮಾಡತೇವಿ. ಅದಕ್ಕ ಇಲ್ಲಿದ್ದ ಮರಾಠಿ ಮತ್ತ ಕನ್ನಡ ಸಂಪ್ರದಾಯದ ಸಮ್ಮಿಲನನ ಕಾರಣಾ. ಭಾಷಾ ಗಡಿ ಗಂತ ನಾವ ಬಾಕಿ ಟೈಮ್ ನ್ಯಾಗ ಹೊಡದಾಡಿದ್ರೂ ಹಬ್ಬಾ ಮಾತ್ರ ಕೂಡೆ ಆಚರಸ್ತೇವಿ.
ಬೆಳಗಾವಿ ನ್ಯಾಗ ಕೆಲವೊಂದ ಆಚರಣೆಗೊಳು ವಿಭಿನ್ನ ಆಗ್ಯಾವ( ಈಗ ಎಲ್ಲಾ ಆಚರಣೆ ಎಲ್ಲಾ ಕಡೆನೂ ಅನುಕರಣೆ ಮಾಡ್ಲಿಕತ್ತಾರ ಅದ ಮಾತ ಬ್ಯಾರೆ). ಅದ್ರಾಗಿಂದ ಕೆಲವೊಂದನ್ನ ನಿಮ್ಮ ಮುಂದ ಹೇಳಿಕ್ಕೆ ಪ್ರಯತ್ನ ಮಾಡತೇನಿ .
೧) ದುರ್ಗಾ ಮಾತಾ ದೌಡ:-
ದೌಡ ಅಂದ್ರ ಓಡೋದು ಅಂತ ಅರ್ಥ. ಬೆಳಗಾವಿ ನ್ಯಾಗ ದಸರಾದ್ದ ೧೦ ದಿನಾ ಊರಾಗಿಂದ ಬ್ಯಾರೆ ಬ್ಯಾರೆ ಕಡೆ ಅಂದಾಜ ೭ ರಿಂದ ೧೦ ಸಾವಿರ ಮಂದಿ ಮುಂಜಾನೆ ೬ ರಿಂದ ೮: ೩೦ ತನಾ ದುರ್ಗಾ ಮಾತಾನ ಹೆಸರ್ಲೇ ಓಡತಾರ. ಇದರ ಹಿಂದಿನ ಇತಿಹಾಸ ಹೇಳಬೇಕ ಅಂದ್ರ ಈ ದೌಡ ಮಹಾರಾಷ್ಟ್ರದ ಸಾಂಗ್ಲಿನ್ಯಾಗ ಸಂಭಾಜಿರಾವ್ ಭೀಡೆ ಅನ್ನಾವರು ೨೫ ವರ್ಷದ ಹಿಂದ ಚಾಲು ಮಾಡಿದ್ರು. ಹಿಂದೂಗಳ ಸಂಘಟನೆ ಮತ್ತ ಗಾಯನದ ಮುಖಾಂತರ ದುರ್ಗೆಯ ಆರಾಧನೆ ಇದರ ಹಿಂದಿನಉದ್ದೇಶ. ಬೆಳಗಾವಿ ನ್ಯಾಗ ದೌಡ ಚಾಲು ಆಗಿ ೨೧ ವರ್ಷ ಆತು. ಇಲ್ಲಿನ ಮುದಕರು,ಯುವಕರು, ಹುಡಗೋರು, ಹುಡಗ್ಯಾರು ಯಲ್ಲಾರು ಸೇರಿ ಇದ್ರಾಗ ಭಾಗವಹಿಸ್ತಾರ.
೨) ದಾಂಡಿಯಾ & ಗರ್ಭಾ :-
ಇದನ್ನ ವಿಶೇಷವಾಗಿ ಮಾರವಾಡಿ ಮತ್ತ ಗುಜರಾತಿ ಜನ ದೇವಿ ಆರಾಧನೆಯಂತ ಅಲ್ಲಿನ ಸಂಪ್ರದಾಯಿಕ ಅರವಿ ಹಾಕೊಂಡು ತಮ್ಮ ಜಾನಪದ ಹಾಡು ಕುಣಿತದ ಮೂಲಕ ದೇವಿಯನ್ನ ಆರಾಧನೆ ಮಾಡತಾರ . ಅದು ಈಗ ನಮ್ಮಲ್ಲಿ ಹೆಂಗ ಆಗೇದ ಅಂದ್ರ ಅವರಕ್ಕಿಂತ ಜಾಸ್ತಿ ನಮ್ಮ ಮಂದಿನ ಅಲ್ಲೇ ಸೇರಲಿಕತ್ತಾರ. ಅದ್ರಾಗ ಕೆಲೊಂದ ಕಡೆ ಬಹುಮಾನನು ಇಟ್ಟಿರತಾರ. ಬ್ಯಾರೆ ಬ್ಯಾರೆ ಗಲ್ಲಿಯವರು ತಮ್ಮ ಗಲ್ಲಿನ್ಯಾಗ ದಾಂಡಿಯಾ ಆಯೋಜನೆ ಮಾಡತಾರ ಅದನ್ನ ನೋಡಿಲ್ಲಿಕ್ಕೆ ಛಂದ.
೩) ಕಿಲ್ಲಾ :-
ಕಿಲ್ಲಾ ಅಂದ್ರ ಕೋಟೆ ಅಂತ ಅರ್ಥಾ. ನಮ್ಮಲ್ಲಿ ಪ್ರತಿ ಗಲ್ಯಾಗಿಂದ ಹುಡಗೋರ ದಸರಾ ಸುಟ್ಟಿನ್ಯಾಗ ಶಿವಾಜಿ ಮಹಾರಾಜರ ಕಿಲ್ಲಾ ಅಂತ ಕಟ್ಟತ್ತಾರ. ಕಲ್ಲು ಮಣ್ಣು ಇಟ್ಟಂಗಿ ಯಲ್ಲಾ ಗೋಳೆ ಹಾಕಿ ಶಿವಾಜಿ ಮಹಾರಾಜರು ಗೆದ್ದಂತ ಕಿಲ್ಲಾಗಳ ಪ್ರತಿರೂಪವನ್ನ ಮಾಡತಾರ ಅದ್ರಾಗ ಪ್ರಮುಖವಾಗಿ ತೋರಣಗಡ, ಪ್ರತಾಪಗಡ, ಪುರಂಧರಗಡ, ಶಿವನೇರಿಗಡ ಹಿಂಗ ಬಹಳಷ್ಟು ಕಿಲ್ಲಾಗಳನ್ನ ಕಟ್ಟತಾರ. ಅದನ್ನ ಒಂದ ಹುಡುಗಾ ಅದರ ಪೂರ್ವಾಪರ ಇತಿಹಾಸವನ್ನ ಬಂದ ಜನರಿಗೆ ವಿವರಣೆಯನ್ನ ಕೊಡತಾನ. ಅವರ ಕೊಡೊ ವಿವರಣೆಗೆ ಕೆಲವೊಂದು ಸಂಘ ಸಂಸ್ಥೆಗಳು ಅವರಿಗೆ ೧೦- ೧೫ ಸಾವಿರ ರೂಪಾಯಿ ಬಹುಮಾನ ಕೊಡತ್ತಾರ. ಇದರ ಮುಖ್ಯ ಉದ್ದೇಶ ಅಂದ್ರ ನಮ್ಮ ದೇಶದ ನೈಜ ಇತಿಹಾಸ ಮಂದಿಗೆ ತಿಳಿಬೇಕು ಅಂತ.
ಈ ಮೊದ್ಲ ಹೇಳಿದಂಗ ನಮ್ಮ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕ ಬದ್ಲ ಆಗತದ. ಹಂಗ ನಮ್ಮ ಆಚರಣೆ ಬದ್ಲ ಆದಷ್ಟು ಮತ್ತ ಹೊಸ ಹುರುಪಿನ್ಯಾಗ ನಮ್ಮ ಮಂದಿ ಧರ್ಮ – ಆಚಾರ- ವಿಚಾರ ಸಂಸ್ಕ್ರತಿ ಸಂಪ್ರದಾಯದ ಕಡೆ ಜನ ವಾಲತಾರ. ನಮ್ಮ ಧರ್ಮ ಉಳಿತದ. ಹಿಂಗ ನಮ್ಮ ಗಡಿ ಜಿಲ್ಲೆ ಬೆಳಗಾವಿನ್ಯಾಗ ಮರಾಠಿ ಮತ್ತ ಕನ್ನಡ ಸಂಪ್ರದಾಯ ಸಮ್ಮಿಲನದಿಂದ ನಾವು ಹಬ್ಬ ಆಚರಣೆ ಮಾಡ್ತೇವಿ.