ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರ ತಾಣಗಳ ಮೇಲೆ ಇಸ್ರೇಲಿ ಪಡೆಗಳು ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹಮಾಸ್ ಉಗ್ರರ ತಾಣವಾಗಿರುವ ಗಾಜಾದಲ್ಲಿ ಇಸ್ರೇಲ್ ಧಾಳಿಗೆ ನೂರಾರು ಉಗ್ರರು ಹತರಾಗಿದ್ದಾರೆ. ಆದರೆ ಗಾಜಾದಲ್ಲಿ ಇಸ್ರೇಲ್ ನ 222 ನಾಗರಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಉಗ್ರರು ಅವರನ್ನು ಮಾನವ ಗುರಾಣಿಯಂತೆ ಬಳಸಿಕೊಳ್ಳಲು ಹೊರಟಿದ್ದಾರೆ. ಈ ಉಗ್ರರು ಆಸ್ಪತ್ರೆಗಳು, ಮಸೀದಿಗಳ ಒಳಗೆ ಬಂಕರ್ ಗಳನ್ನು ನಿರ್ಮಿಸಿಕೊಂಡು ಅಲ್ಲಿ ಅಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ನಡೆದ ದಾಳಿಯಲ್ಲಿ ಹಮಾಸ್ ಉಗ್ರರ ಯುದ್ಧ ಟ್ಯಾಂಕರ್ ಗಳ ಧ್ವಂಸಕಾರಕ ತುಕಡಿಯ ಮುಖ್ಯಸ್ಥನಾದ ಇಬ್ರಾಹೀಂ ಅಲ್ ಸಹ್ರ್ ಎಂಬಾತನನ್ನು ಹತ್ಯೆಗೈದಿರುವುದಾಗಿ ಇಸ್ರೇಲಿ ಪಡೆಗಳು ತಿಳಿಸಿವೆ.
ಹತ್ಯೆಗೀಡಾದ ಆಲ್ ಸಹ್ರ್ ಹಾಮಾಸ್ ನ ಟ್ಯಾಂಕ್ ಪಡೆಗಳ ಕಮಾಂಡರ್ ಆಗಿದ್ದು ಈ ಹಿಂದೆ ಇಸ್ರೇಲ್ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿ ಯಶಸ್ವಿ ಆಗಿದ್ದ. ಗಾಜಾ ಪಟ್ಟಿಯ ಉತ್ತರ ವಲಯದಲ್ಲಿ ಈತನು ಅಡಗಿಕೊಂಡಿದ್ದು 2021ರಲ್ಲಿ ಇಸ್ರೇಲಿ ಸೈನಿಕರು ಸಾಗುತ್ತಿದ್ದ ಟ್ಯಾಂಕರ್ ಗಳ ಮೇಲೆ ಏಕಾಏಕಿ ದಾಳಿ ನಡೆಸಿ ಇಸ್ರೇಲಿ ಪಡೆಯ ಸ್ಟಾಫ್ ಸರ್ಜೆಂಟ್ ಆಗಿದ್ದ ಒಮರ್ ತಬೀಬ್ ಹಾಗೂ 11 ಇಸ್ರೇಲಿ ಸೈನಿಕರನ್ನು ಕೊಂದು ಹಾಕಿದ್ದ.
ಒಮರ್ ಹುತಾತ್ಮನಾದಾಗ ಆತನ ವಯಸ್ಸು ಕೇವಲ 21 ವರ್ಷ ಆಗಿತ್ತು. ಸೇನಾ ವಲಯದಲ್ಲಿ ಒಮರ್ ಅವರ ಸೇವೆ ಶೌರ್ಯಕ್ಕೆ ಹೆಸರಾಗಿದ್ದು ಅವರು ಮುಂದೊಂದು ದಿನ ಭರವಸೆಯ ಉನ್ನತ ಸೇನಾಧಿಕಾರಿಯಾಗುತ್ತಾರೆಂದೇ ಸೇನಾ ವಲಯದಲ್ಲಿ ಎಲ್ಲರೂ ಭಾವಿಸಿದ್ದರು. ಆದರೆ 2021ರ ಮೇ 13 ರಂದು ಸೇನಾ ಕ್ಯಾಂಪಿನಿಂದ ಅವರು ಜೀಪಿನಲ್ಲಿ ತೆರಳುತ್ತಿದ್ದಾಗ ಅವರ ಜೀಪನ್ನು ಆ್ಯಂಟಿ ಟ್ಯಾಂಕರ್ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಿದ್ದ ಹಮಾಸ್ ಉಗ್ರರು ಒಮರ್ ಅವರ ಸಾವಿಗೆ ಕಾರಣವಾಗಿದ್ದರು. ಒಮರ್ ಅವರ ಅಂತ್ಯಸಂಸ್ಕಾರದ ವೇಳೆ, ಸಹಸ್ರಾರು ಜನರು ಕಂಬನಿ ಮಿಡಿದಿದ್ದು ಇಡೀ ದೇಶವೇ ಮಮ್ಮಲ ಮರುಗಿತ್ತು. ಈಗ ಒಮರ್ ಅವರನ್ನು ಕೊಂದ ಇಬ್ರಾಹೀಂ ಅಲ್ ಸಹ್ರ್ ನನ್ನು ಹತ್ಯೆ ಮಾಡಿ ಇಸ್ರೇಲಿ ಪಡೆಗಳು ಸೇಡು ತೀರಿಸಿಕೊಂಡಿವೆ. ಇವನ ಹತ್ಯೆ ದಾಳಿಯಲ್ಲಿ ಮತ್ತೊಂದು ಮಹತ್ವದ ಸಾಧನೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡುತ್ತಿವೆ.
ಈ ನಡುವೆ ಹಮಾಸ್ ಸೋಮವಾರ ಇಬ್ಬರು ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದು, ಈವರೆಗೆ ಬಿಡುಗಡೆಗೊಂಡ ನಾಗರಿಕರ ಸಂಖ್ಯೆ ಒಟ್ಟು 4 ಕ್ಕೆ ತಲುಪಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಸಂಘಟನೆಯು ಇಸ್ರೇಲಿನ ನ್ಯೂರಿಟ್ ಕೂಪರ್ ಮತ್ತು ಯೋಚ್ವೆಡ್ ಲಿಫ್ಶಿಟ್ಜ್ ಅವರ ಬಿಡುಗಡೆಯನ್ನು ಮಾಡಿದ್ದು ಮತ್ತು ರೆಡ್ ಕ್ರಾಸ್ ಇದನ್ನು ಧೃಡಪಡಿಸಿದೆ. ಕನಿಷ್ಠ 1,400 ಜನರನ್ನು ಕೊಂದು 200 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ತೆಗೆದುಕೊಂಡ ಹಮಾಸ್ ಉಗ್ರರ ಮೇಲೆ ಇಸ್ರೇಲ್ ತನ್ನ ಆಕ್ರಮಣವನ್ನು ಪ್ರಾರಂಭಿಸಿ ಎರಡು ವಾರಗಳಿಗಿಂತ ಹೆಚ್ಚು ಸಮಯವಾಗಿದೆ.
ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಅಕ್ಟೋಬರ್ 7 ರಿಂದ ಪ್ರಾರಂಭವಾದಾಗಿನಿಂದ 5,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 15,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು ಸೋಮವಾರ ತನ್ನ ಸೈನಿಕರು “ಗಾಜಾ ಪಟ್ಟಿಯಲ್ಲಿ ನೆಲದ ಕಾರ್ಯಾಚರಣೆಗಾಗಿ ಪಡೆಗಳ ಸಿದ್ಧತೆ ಮತ್ತು ಸಾಮರ್ಥ್ಯಗಳನ್ನು ಸುಧಾರಿಸುವ ಸಲುವಾಗಿ ವಿವಿಧ ತರಬೇತಿ ವ್ಯಾಯಾಮಗಳನ್ನು” ನಡೆಸುತ್ತಿದ್ದಾರೆ ಎಂದು ಹೇಳಿದರು.
ಹಮಾಸ್ನ ಸಂಪೂರ್ಣ ಶರಣಾಗತವಾದರೆ ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ವಾಪಾಸ್ ಕಳಿಸಿಕೊಟ್ಟರೆ ಇಸ್ರೇಲ್ನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಜೊನಾಥನ್ ಕಾನ್ರಿಕಸ್ ಎಬಿಸಿ ರೇಡಿಯೊ ಮೆಲ್ಬೋರ್ನ್ಗೆ ತಿಳಿಸಿದ್ದಾರೆ.