ರಾಜ್ಕೋಟ್: ಗುಜರಾತ್ ನ ಜುನಾಗಢ್ ಸಮೀಪದ ಮಂಗ್ರೋಲ್ ತಾಲೂಕಿನ ಮದ್ರಸಾವೊಂದರಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ಮೌಲಾನಾ ಕನಿಷ್ಠ ಏಳು ವಿದ್ಯಾರ್ಥಿನಿಯರಿಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಭಾನುವಾರ ಬಹಿರಂಗಪಡಿಸಿದ್ದಾರೆ.
ಸುಮಾರು 20 ದಿನಗಳ ಹಿಂದೆ 15 ವರ್ಷದ ವಿದ್ಯಾರ್ಥಿಯೊಬ್ಬರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 25 ವರ್ಷದ ಮೌಲಾನಾನನ್ನು ಮೊದಲು ಬಂಧಿಸಿದ್ದರು. ನಂತರ ಭಾನುವಾರ, ಅಪ್ರಾಪ್ತ ವಿದ್ಯಾರ್ಥಿ ನೀಡಿದ ದೂರಿನ ಹೊರತಾಗಿಯೂ ಮೌಲಾನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಪೊಲೀಸರು ಮದರಸಾದ 55 ವರ್ಷದ ಟ್ರಸ್ಟಿಯನ್ನು ಬಂಧಿಸಿದ್ದಾರೆ.
ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಟ್ರಸ್ಟಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಐ ಮಘ್ರಾನಾ ತಿಳಿಸಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 377, 323, 506 (2) ಮತ್ತು 144 ಮತ್ತು POCSO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪ್ರಕರಣದ ವಿವರಗಳ ಪ್ರಕಾರ, ಮೌಲಾನಾ ವಿರುದ್ಧ 15 ವರ್ಷದ ಬಾಲಕನೊಬ್ಬ ಅಸ್ವಾಭಾವಿಕ ಲೈಂಗಿಕತೆಯ ದೂರು ನೀಡಿದ್ದು, ಅದರ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಮಘ್ರಾನಾ ಅವರು ಇತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದು, ಮೌಲಾನಾ ಹುಡುಗರನ್ನು ಹಣದ ಆಮಿಷವೊಡ್ಡುವ ಮೂಲಕ ಅಥವಾ ಕೊಲ್ಲುವುದಾಗಿ ಬೆದರಿಕೆ ಹಾಕುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ ದೀಪಾವಳಿಯ ನಂತರ ಮೌಲಾನಾ ಹುಡುಗರನ್ನು ಶೋಷಿಸಲು ಪ್ರಾರಂಭಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಮಘ್ರಾನಾ ಹೇಳಿದ್ದಾರೆ. ಇಲ್ಲಿಯವರೆಗೆ ಏಳು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಪತ್ತೆ ಆಗಿದ್ದು ಇನ್ನೂ ಹೆಚ್ಚಿನ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಆರೋಪಿ ಮೌಲಾನಾ ಮದರ್ಸಾದಲ್ಲಿ ಉರ್ದು ಕಲಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಮದರಸಾದ ವಿದ್ಯಾರ್ಥಿಯು ನೀಡಿದ ದೂರಿನ ಹೊರತಾಗಿಯೂ ಟ್ರಸ್ಟಿಯು ಯಾವುದೇ ಕ್ರಮ ಕೈಗೊಳ್ಳದೆ ಸಂತ್ರಸ್ಥ ಬಾಲಕನನ್ನೇ ಸುಮ್ಮನಿರಿಸಿದ್ದ ಎಂದು ಆರೋಪಿಸಲಾಗಿದೆ. ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದ್ದು ಇಂತಹ ದೌರ್ಜನ್ಯಗಳು ನಡೆದಾಗ ಸಂಬಂದಿಸಿದವರು ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲೇಬೇಕಿದೆ. ಇಲ್ಲದಿದ್ದರೆ ಅವರ ಮೇಲೆಯೇ ಅಪರಾಧವನ್ನು ಮುಚ್ಚಿಟ್ಟ ಆರೋಪದ ಮೇರೆಗೆ ಅವರನ್ನೂ ಅಪರಾಧಿ ಎಂದು ಪರಿಗಣಿಸಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ.