ಮಾನವ ಈ ಬದುಕಿನ ವ್ಯಾಮೋಹದಲ್ಲಿ ಸಿಲುಕಿ ಬಂಧನಕ್ಕೊಳಗಾಗಿರುತ್ತಾನೆ. ಬದುಕಿನ ಸಾರ್ಥಕತೆಯ ಅರಿವು ಸುಲಭವಾಗಿ ಆಗುವುದಿಲ್ಲ. ವ್ಯಾಮೋಹವನ್ನೇ, ಷಟ್ವರ್ಗ ಸುಖಗಳನ್ನೇ ಹಿತವೆಂದು ಭಾವಿಸಿರುತ್ತಾನೆ. ಆದರೆ ಬದುಕಿನ ಅಂತ್ಯದಲ್ಲಿ ಜೀವನ ಎಂದರೆ ಏನು ಎಂಬುದರ ಅರಿವು ಉಂಟಾಗತೊಡಗುತ್ತದೆ. ಆ ಸಂದರ್ಭದಲ್ಲಿ ಬರುವ ಆ ಅರಿವಿನಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೆ ಬಸವಣ್ಣ ಹೇಳುವುದು ‘ಹೊತ್ತು ಹೋಗದ ಮುನ್ನ ಪೂಜಿಸು ಕೂಡಲ ಸಂಗಮದೇವನ’ ಎಂದು. ಎದೆಯ ಹೊಸ್ತಿಲಲ್ಲಿ ನಿಂತು ದೇವರು ಕಾಯುತ್ತಿರುವಾಗ ಬಾಗಿಲನ್ನು ತೆರೆದು ಬಿಡಬೇಕು. ಆದರೆ ನಾವು ಹಾಗೆ ಮಾಡುವುದಿಲ್ಲ, ಕದ ಮುಚ್ಚಿರುತ್ತೇವೆ. ಆದರೆ ನಮ್ಮ ಎದೆಯ ಬಾಗಿಲ ಬಳಿ ನಿ೦ತು ಒಳಗೆ ಬರಲು ಆ ದೇವರು ಕಾದಿರುವಾಗ ಕದ ತೆರೆದು ಸ್ವಾಗತಿಸಬೇಕೆಂಬ ಭಾವ ಈ ಕವಿತೆಯಲ್ಲಿ ವ್ಯಕ್ತವಾಗಿದೆ. ಕವಿ ಹೇಳುವಂತೆ
ಜೀವನ ಮೋಹದ ಮಾಯೆಯಲ್ಲಿ ಮುಳುಗಿ ಹೋಗಿರುವಾಗ ಅದಕ್ಕೆ ಕೊಡಲಿ: ಪಟ್ಟಂತೆ, ಸಿಡಿಲು ಸಿಡಿದಂತೆ ದೇವರ ನಾಮ ಸ್ಮರಣೆ ತೇಲಿ ಬಂದ ಆ ದಿನವನ್ನು ಕವಿ ನೆನೆಯುತ್ತಾರೆ, ಯಾವ ಮೋಹದ ಬಲೆಯಲ್ಲಿ, ಜಂಜಾಟದ ಬದುಕಿನಲ್ಲಿ ಸಿಲುಕಿ ಮುಳುಗಿ ಹೋಗಿರುವಾಗ ಸತ್ ಮಾರ್ಗದತ್ತ ಹೊಯ್ಯ ದೇವರ ಸ್ಮರಣೆಯ ಗಂಧ ತೇಲಿ ಬಂದ ದಿನವನ್ನು ಇಲ್ಲಿ ಸರಿಸಿದ್ದಾರೆ. ದುಂಬಿ ಹೇಸಿಗೆಯ ಹೂವೇ ಶ್ರೇಷ್ಠವೆಂದು ತಿಳಿದು ಅದರ ಮಕರಂದ ಹೀರಿ ಮರೆತಿರುವಾಗ ನಂದನದ ಹೂವಿನ ಕಂಪು ಬಡಿದ ರೀತಿಯಲ್ಲಿ ದೇವರ ನಾಮ ತೇಲಿ ಬರುತ್ತದೆ, ಇದುವರೆಗೆ ಇದ್ದ ಪ್ರೇಮ ಸಂಕೇತಗಳನ್ನು, ಮೋಹಗಳನ್ನು, ಶ್ರೇಷ್ಠವೆಂದು ತಿಳಿದು ನೀಚ ಗಿಳಿಯಂತೆ ಸುಖ ಪಡುತ್ತೇವೆ. ಆದರೆ ಆ ಸುಖ ಕನಸಿನಂತೆ, ಅದು ಸತ್ವವಲ್ಲ, ಶಾಶ್ವತವಲ್ಲ, ಕೋಗಿಲೆ ಕನಸಿನಲ್ಲಿ ಮಾವಿನ ಚಿಗುರನ್ನು ಕಂಡು ನಲಿಯುವಂತೆ ನಮ್ಮ ಬದುಕಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಹಿರಿಯದಾದೊಂದು ಬೆಳಕು ಬಂದಿತು. ಆ ನಾಮಸ್ಮರಣೆ ಸುವಾಸನೆಯ ಕಂಪನ್ನು ತಂದಿತ್ತು. ಆದರೂ ಆ ಮೋಹ ಆ ನೇಹ ಬದುಕಿನಿಂದ ಪೂರ್ಣವಾಗಿ ಮರೆಯಾಗಿ ಹೋಗಿಲ್ಲ. ಈಗ ಅದು ನೆನಪಾಗುತ್ತಿದೆ. ಆದರೆ ಈ ಮೋಹವೆಲ್ಲ ಕೃತಕ ಭಗವಂತನ ನೆನಹೊಂದೇ ಶಾಶ್ವತವೆಂದು ಅದಕ್ಕಾಗಿ ಕವಿ ಹಂಬಲಿಸುತ್ತಾರೆ. ಜಂಜಾಟದ ಬದುಕಿನಿಂದ ಮೇಲೆತ್ತಲು ಇರುವ ಒಂದೇ ಮಾರ್ಗ ನಿನ್ನ ನಾಮವೆಂದು ಬೇಂದ್ರೆ ಹೇಳುತ್ತಾರೆ:
ಕೇವಲ ನಿನ್ನ ನಾಮದ ಸ್ಮರಣೆಯಿಂದಲೇ ಬದುಕಿಗೆ ನೆಮ್ಮದಿ ಸಿಕ್ಕಿದೆಯೆಂದ ಮೇಲೆ ಸದಾ ನಿನ್ನ ಜೊತೆಗಿರುವ ಶಾಶ್ವತ ಸುಖವನ್ನು ಕೊಡು ಎಂದು ಕವಿ ಇಲ್ಲಿ ಬಯಸಿದ್ದಾರೆ. ಒಂದು ಸಿದ್ಧಿಗಾಗಿ ಸನ್ಯಾಸಿಗಳು ತಿರುಗಾಡುವ ರೀತಿ ಆ ಬೆಳಕಿಗಾಗಿ ಕಾಯುತ್ತಿದ್ದೇನೆ, ವಿರಹಿಣಿ ತನ್ನ ಪತಿಯ ಶವದ ಮೇಲೆ ತಲೆಯಿಟ್ಟು ಒಂದು ಮಾತನ್ನಾದರೂ ಆಡಬಾರದ ಎಂಬಂತೆ ಒಂದು ಮಾತಿಗಾಗಿ ಒಂದು ಕರುಣೆಗಾಗಿ ಕಾಯುತ್ತಿದ್ದೇನೆ, ಗುಟುಕು ಕೊಡು ತೊಟಕು ಕೊಡು ಎಂದು ಕೇಳುತ್ತಾರೆ. ಆತ್ಮ ಘಾತವನ್ನುಂಟುಮಾಡುವ ಈ ಮೋಹದ ಕಾಡಬೇಗೆಯನ್ನು ನಂದಿಸಿಬಿಡು, ಭಕ್ತಿಯಲ್ಲಿ ನನ್ನನ್ನು ಸಂಧಿಸು; ಹಳೆಯದೆಲ್ಲ ಹರಿದು ಹೋಗಲಿ, ನಂದಿ ಹೋಗಲಿ, ಹೊಸದು ಬರಲಿ ನಿನ್ನ ನಾಮಸ್ಮರಣೆಯಿಂದ ಆ ಕಡಬೇಗೆ ನಂದಿ ಹೋಗಲಿ, ಆಗ ಆ ಬೆಳಕಿನ ಹಾಲನ್ನು ಕುಡಿಯುತ್ತೇನೆ, ಹಸಿದವನ್ನು ಹಾಲು ಕುಡಿದಂತೆ ಕುಡಿದು, ಕುಣಿದು ಸಂತೋಷ ಪಡುತ್ತೇನೆ, ನಿನ್ನ ನಾಮಸ್ಮರಣೆ, ನಿನ್ನ ಸಂಗ ನನಗೆ ಬೇಕೆಂದು ಕವಿ ಹಂಬಲಿಸಿದ್ದಾರೆ. ಆ ದಿನ ನಿನ್ನ ನಾಮವನ್ನು ಕೇಳಿದಾಗಿನ ಸಂದರ್ಭವನ್ನು ನೆನೆದರೆ ಸಂತಸವಾಗುತ್ತದೆ, ಆ ಸಂತೋಷ, ಆ ಸುಖ ಸದಾ ಇರಲೆಂದು ಕವಿ ಆಶಿಸಿದ್ದಾರೆ.