ಹೆಡ್ಗೆವಾರ್ ಅಂದ್ರೆ ಯಾರು? ಅವರೇನು ಸ್ವಾತಂತ್ರ್ಯ ಹೋರಾಟಗಾರರಾ? ಅವರು ಒಂದು ದಿನವಾದರೂ ಹೋರಾಟ ಮಾಡಿದ್ದಾರೆಯೇ? ಎಂದೆಲ್ಲ ಪ್ರಶ್ನೆ ಕೇಳಿದ್ದೀರಲ್ಲಾ? ಇದು ನಿಮ್ಮ ಅಜ್ಞಾನವೋ, ಜಾಣಗುರುಡುತನವೋ ಗೊತ್ತಾಗುತ್ತಿಲ್ಲ. ಮನಸ್ಸಿಗೆ ಬಂದಂತೆ ಹಲುಬುವ ಬದಲು ವಿಷಯ ತಿಳಿದುಕೊಂಡು ಮಾತಾಡಿದರೆ ನಿಮ್ಮ ಕಿಮ್ಮತ್ತು ಸ್ವಲ್ಪವಾದರೂ ಉಳಿದೀತು. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಜವಾಬ್ದಾರಿತನದಿಂದ ಮಾತನಾಡಲು ಕಲಿತರೆ ಒಳ್ಳೆಯದು.
ಕೇಶವ ಬಲಿರಾಂ ಹೆಡ್ಗೆವಾರ ಅವರು೧೮೮೯ ರ ಎಪ್ರಿಲ್ ೧ ರಂದು ಅಂದರೆ ಯುಗಾದಿಯಂದು ನಾಗಪುರದ ಬಡ ಕುಟುಂಬದಲ್ಲಿ ಜನಿಸಿದರು. ಕಲ್ಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದವರು.
ಪದವಿ ಪಡೆದವರೇ ಅವರು ಡಾಕ್ಟರಿಕೆ ವೃತ್ತಿಗೆ ತೊಡಗದೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಆರಂಭದಲ್ಲಿ ಕ್ರಾಂತಿಕಾರಿಗಳ ಸಂಪರ್ಕ ಪಡೆದು ಅನುಶೀಲನ ಸಮಿತಿ, ಜುಗಾಂತರ್ ಮೊದಲಾದ ಸಂಘಟನೆಗಳಲ್ಲಿ ಕೆಲಸ ಮಾಡಿದರು.
ಕಾಂಗ್ರೆಸ್ ನಲ್ಲಿ
೧೯೧೯-೨೦ ರಲ್ಲಿ ಹೆಡ್ಗೆವಾರ್ ಅವರು ಲೋಕಮಾನ್ಯ ಬಾಲಗಂಗಾಧರ ಟಿಳಕರ ಸಂಪರ್ಕಕ್ಕೆ ಬಂದರು. ಟಿಳಕವಾದಿ ಕಾಂಗ್ರೆಸ್ಸಿನ ಕಾರ್ಯಕರ್ತರಾದರು. ೧೯೨೦ ರ ನಾಗಪುರ ಅಧಿವೇಶನದಲ್ಲಿ ಕಾಂಗ್ರೆಸ್ ಸಹಕಾರ್ಯದರ್ಶಿಯಾದರು. ಆಗಿನ ಹಿರಿಯ ನಾಯಕ ಬಿ. ಎಸ್. ಮೂಂಜೆಯವರ ಮಾರ್ಗದರ್ಶನದಲ್ಲಿ ಮುನ್ನಡೆದರು. ಹಿಂದೂ ಧರ್ಮತತ್ವಶಾಸ್ತ್ರದ ಪರಿಚಯ ಪಡೆದರು.
ಟಿಳಕರ ನಿಧನಾನಂತರ ಹೆಡ್ಗೆವಾರ್ ಅವರು ಅರವಿಂದ್ ಘೋಷರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಲು ಪ್ರಯತ್ನಿಸಿದರು. ಆದರೆ ಅದಾಗಲೇ ಆಧ್ಯಾತ್ಮಿಕ ಒಲವಿನಲ್ಲಿದ್ದ ಅರವಿಂದರು ಅದಕ್ಕೆ ಒಪ್ಪಲಿಲ್ಲ. ವಿಜಯರಾಘವಾಚಾರ್ಯರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.
ಹೆಡ್ಗೆವಾರ ಅವರು ಕಾಂಗ್ರೆಸ್ ಅಧಿವೇಶನದ ಸ್ವಯಂ ಸೇವಕರ ಉಪಮುಖ್ಯಸ್ಥರಾಗಿ ನೇಮಿಸಲ್ಪಟ್ಟರು. ಅದರ ಪೂರ್ಣಾವಧಿ ಕೆಲಸದಲ್ಲಿ ತೊಡಗಿದ ಹೆಡ್ಗೆವಾರ ಅವರು ೧೨೦೦ ಸ್ವಯಂ ಸೇವಕರ ಪಡೆ ಕಟ್ಟಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಈ ಸ್ವಯಂ ಸೇವಕ ಸಂಘಟನೆಗೆ ” ಭಾರತ್ ಸ್ವಯಂ ಸೇವಕ್ ಮಂಡಲ್” ಎಂಬ ಹೆಸರಿತ್ತು. ಡಾ. ಲಕ್ಷ್ಮಣ, ವಿ. ಪರಾಂಜಪೆ ಹಾಗು ಡಾ. ಹೆಡ್ಗೆವಾರ ಅದರ ಉಪಮುಖ್ಯಸ್ಥರಾಗಿದ್ದರು.
ಅಧಿವೇಶನದ ನಂತರ ಹೆಡ್ಗೇವಾರ್ ಆ ಇಡೀ ಪ್ರಾಂತದಲ್ಲಿ ಬಹಳ ಜನಪ್ರಿಯರೆನಿಸಿದರು. ” ಟಿಲಕ್ ಸ್ವರಾಜ್ಯ ಫಂಡ್” ನ ಸದಸ್ಯರಾದರು. ನಂತರ ನಡೆದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ರಾಜದ್ರೋಹದ ಆರೋಪದ ಮೇಲೆ ೧೯೨೧ ರಲ್ಲಿ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಯಿತು.
೧೯೩೦ ರಲ್ಲಿ ” ಜಂಗಲ್ ಸತ್ಯಾಗ್ರಹ” ದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರು ಮತ್ತೆ ೯ ತಿಂಗಳ ಶಿಕ್ಷೆಗೊಳಗಾದರು.
ಅಂದಿನ ಕಾಂಗ್ರೆಸ್ ಸಂಸ್ಥೆಯಲ್ಲಿದ್ದೇ ಇಷ್ಟೆಲ್ಲ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದ ಹೆಡ್ಗೆವಾರರು ಯಾರು ಎಂದು ಕೇಳುತ್ತಿರುವ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನ ಇತಿಹಾಸವೇ ಸರಿಯಾಗಿ ಗೊತ್ತಿದ್ದಂತಿಲ್ಲ. ಅವರ ಅಜ್ಞಾನಕ್ಕೆ ಮರುಕ ಪಡಬಹುದು.
ಆರೆಸ್ಸೆಸ್ ಸ್ಥಾಪನೆ
ಹೆಡ್ಗೆವಾರರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ್ದು ೧೯೨೫ ರಲ್ಲಿ. ಅದಕ್ಕೆ ಕೆಲ ವಿಶಿಷ್ಟ ಕಾರಣಗಳಿದ್ದವು.
ಕಾಕೋರಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ರಿಟಿಶ್ ಸರ್ಕಾರವು ಎಲ್ಲಾ ಪೋಲೀಸ್ ಹುದ್ದೆ ಮತ್ತು ಮ್ಯಾಜಿಸ್ಟ್ರೇಟ್ ಹುದ್ದೆಗಳಿಗೆ ಮುಸ್ಲಿಂ ಅಧಿಕಾರಿಗಳನ್ನೇ ನೇಮಿಸಿತ್ತು. ವಿಚಾರಣೆಗೊಳಗಾಗುವ ಕ್ರಾಂತಿಕಾರಿಗಳಿಗೆ ಗಲ್ಲು ಶಿಕ್ಷೆ ತಪ್ಪದಂತೆ ಮಾಡುವದೇ ಅವರ ಉದ್ದೇಶವಾಗಿತ್ತು. ಆದದ್ದೂ ಅದೇ. ಹಿಂದುಗಳನ್ನು ಕ್ರೂರವಾಗಿ ಹತ್ತಿಕ್ಕುವದೇ ಬ್ರಿಟಿಷರ ಗುರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸುವ ಅಗತ್ಯವನ್ನು ಮನಗಂಡ ಹೆಡ್ಗೇವಾರ ಅವರು ೧೯೨೫ ರಲ್ಲಿ ವಿಜಯದಶಮಿಯಂದು ಆರೆಸ್ಸೆಸ್ ಸ್ಥಾಪಿಸಿದರು. ನಂತರದ್ದು ಇತಿಹಾಸ. ಹೆಡ್ಗೆವಾರ್ ೧೯೪೦ ರಲ್ಲಿ ನಿಧನರಾದರು. ದೇಶದ ಅನೇಕ ಕಷ್ಟದ ಸನ್ನಿವೇಶದಲ್ಲಿ ಈ ಸಂಸ್ಥೆಯ ಸ್ವಯಂ ಸೇವಕರು ಮಾಡಿರುವ ಸೇವಾ ಕಾರ್ಯಗಳು ಅಪೂರ್ವ ಮತ್ತು ಅದ್ಭುತ. ದೇಶಭಕ್ತಿಯೊಂದೇ ಅದರ ತಳಹದಿ. ದೇಶಸೇವೆಯೊಂದೇ ಅದರ ಗುರಿ.
ಸಿದ್ಧರಾಮಯ್ಯ ರಾಜಕಾರಣಿಗಳಿಗೆ ಆರೆಸ್ಸೆಸ್ ಮಹತ್ವ ಅರ್ಥವಾಗದಿದ್ದರೆ ಆಶ್ಚರ್ಯವೇನೂ ಇಲ್ಲ. ಅದೇನೂ ದೇಶದ ಬೊಕ್ಕಸ ಲೂಟಿಮಾಡುವ ರಾಜಕೀಯ ಪಕ್ಷವಲ್ಲ ತಾನೆ. ಕಾಂಗ್ರೆಸ್ ಸಂಸ್ಥೆಯಲ್ಲೇ ಇದ್ದು ಹೋರಾಟ ಮಾಡಿದ/ ಜೈಲಿಗೆ ಹೋದ ಹೆಡ್ಗೆವಾರರು ಯಾರು ಎಂದು ಕೇಳಲು ನಿಮ್ಮ ಯೋಗ್ಯತೆಯನ್ನು ಮೊದಲು ತಿಳಿಯಿರಿ