ನವದೆಹಲಿ: ಒಂದೇ ಫೋನ್ ನಲ್ಲಿ ಎರಡೆರಡು ವಾಟ್ಸಪ್ ಖಾತೆಗಳನ್ನು ಹೊಂದುವ ಬಳಕೆದಾರರ ಹಳೆಯ ಬೇಡಿಕೆಗೆ ಕೊನೆಗೂ ವಾಟ್ಸಪ್ ನ ಮಾತೃಸಂಸ್ಥೆ ಮೆಟಾ ಅಸ್ತು ಎಂದಿದೆ.
ಈ ಬಗ್ಗೆ ಸ್ವತಃ ವಾಟ್ಸಪ್ ಮಾಲೀಕತ್ವ ಇರುವ ಫೇಸ್ ಬುಕ್ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಘೋಷಣೆ ಮಾಡಿದ್ದು, ಒಬ್ಬ ಬಳಕೆದಾರರು ಶೀಘ್ರದಲ್ಲೇ ತಮ್ಮ ಒಂದೇ ಮೊಬೈಲ್ ನಲ್ಲಿ ಎರಡು WhatsApp ಖಾತೆಗಳನ್ನು ಒಂದೇ ಸಮಯದಲ್ಲಿ ಲಾಗ್ ಇನ್ ಮಾಡಬಹುದು. ಮುಂಬರುವ ದಿನಗಳಲ್ಲಿ ವಾಟ್ಸಪ್ ಈ ನಿರ್ದಿಷ್ಟ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಹೊರತರಲಿದೆ ಎಂದು ಮಾರ್ಕ್ ಜುಕರ್ಬರ್ಗ್ ಘೋಷಿಸಿದ್ದಾರೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.
ವಾಟ್ಸಪ್ ಈ ನೂತನ ಕ್ರಮ ನಿಮ್ಮ ಕೆಲಸ ಮತ್ತು ವೈಯಕ್ತಿಕ ಖಾತೆಗಳ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ಬಳಕೆಯನ್ನು ಸರಳೀಕರಣಗೊಳಿಸಲು ಸಹಾಯಕವಾಗಿದೆ. ಈಗ ನೀವು ಇನ್ನು ಮುಂದೆ ಮತ್ತೊಂದು ಖಾತೆಗೆ ಲಾಗಿನ್ ಆಗಲು ಪ್ರತಿ ಬಾರಿ ಲಾಗ್ ಔಟ್ ಮಾಡುವ ಅಗತ್ಯವಿಲ್ಲ, ಎರಡು ಫೋನ್ಗಳನ್ನು ಕೊಂಡೊಯ್ಯಬೇಕು ಅಥವಾ ತಪ್ಪು ಸ್ಥಳದಿಂದ ಸಂದೇಶ ಕಳುಹಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ” ಎಂದು ಕಂಪನಿಯು ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಈಗಾಗಲೇ ಹಲವು ಬಗೆಗಳಲ್ಲಿ ಡಬಲ್ ವಾಟ್ಸಪ್ ಲಭ್ಯ
ಅಂದಹಾಗೆ ಈಗಾಗಲೇ ಹಲವಾರು ಡ್ಯುಯಲ್ ಮೆಸೆಂಜರ್ ಸೆಟ್ಟಿಂಗ್ ಇರುವ ಮೊಬೈಲ್ ಫೋನ್ ಗಳಲ್ಲಿ ಎರಡೆರಡು ವಾಟ್ಸಪ್ ಖಾತೆಗಳನ್ನು ನಿರ್ವಹಿಸಲಾಗುತ್ತಿದೆ. ಸ್ಯಾಮ್ ಸಂಗ್ ಫೋನ್ ಗಳಲ್ಲಿ ಸೆಕ್ಯೂರ್ ಫೋಲ್ಡರ್ ನಲ್ಲೂ ವಾಟ್ಸಪ್ ಮಾತ್ರವಲ್ಲದೇ ಎಲ್ಲ ರೀತಿಯ ಆ್ಯಪ್ ಗಳನ್ನೂ ಡ್ಯುಯಲ್ ಮೋಡ್ ನಲ್ಲಿ ಬಳಕೆ ಮಾಡುವ ಆಯ್ಕೆ ಇದೆ. ಇದೀಗ ಈ ಪಟ್ಟಿಗೆ ವಾಟ್ಸಪ್ ಅಧಿಕೃತವಾಗಿ ಹೆಜ್ಜೆ ಇಡುತ್ತಿದೆ
ಹಾಗಾದರೆ 2ನೇ ವಾಟ್ಸಪ್ ಖಾತೆ ಹೊಂದುವುದು ಹೇಗೆ?
ಎರಡನೇ ವಾಟ್ಸಪ್ ಖಾತೆಯನ್ನು ಹೊಂದಿಸಲು, ನಿಮಗೆ ಎರಡನೇ ಮೊಬೈಲ್ ಸಂಖ್ಯೆ ಮತ್ತು SIM ಕಾರ್ಡ್ ಅಥವಾ ಬಹು-SIM ಅಥವಾ eSIM ಅನ್ನು ಸ್ವೀಕರಿಸುವ ಫೋನ್ ಅಗತ್ಯವಿರುತ್ತದೆ. ಅಂತೆಯೇ ನಿಮ್ಮ WhatsApp ಸೆಟ್ಟಿಂಗ್ಗಳನ್ನು ಸರಳವಾಗಿ ತೆರೆದು, ನಿಮ್ಮ ಹೆಸರಿನ ಮುಂದಿನ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ ಅಲ್ಲಿ Add Account ಅಥವಾ ಖಾತೆಯನ್ನು ಸೇರಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ. ಆಗ ವಾಟ್ಸಪ್ ಅಪ್ಲಿಕೇಶನ್ನಲ್ಲಿ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.
ಸೆಟಪ್ ಮಾಡುವಾಗ, ಸಿಮ್ ಹೊಂದಿರುವ ನಿಮ್ಮ ಎರಡನೇ ಫೋನ್ ಅಥವಾ ಮಲ್ಟಿ-ಸಿಮ್ಗಾಗಿ ಭೌತಿಕ ಅಥವಾ eSIM ಸೌಲಭ್ಯ ಹೊಂದಿರುವ ಫೋನ್ ನಿಮಗೆ ಅಗತ್ಯವಿರುತ್ತದೆ. ಪ್ರತಿ ಖಾತೆಗೆ ಪ್ರತ್ಯೇಕ ಅಧಿಸೂಚನೆಗಳು ಮತ್ತು ಗೌಪ್ಯತೆ ಸೆಟ್ಟಿಂಗ್ಗಳನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗುತ್ತದೆ. ಇದು WhatsApp ಬೀಟಾ ಮತ್ತು ಸ್ಥಿರ ಆವೃತ್ತಿಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.
.