ಆಳುವ ಸರಕಾರಗಳಿಗೆ ಪ್ರವಾಸೋದ್ಯಮ ದಿನವನ್ನು ಆಚರಿಸುವಲ್ಲಿ ಇರುವ ಉತ್ಸಾಹ ಆ ಕ್ಷೇತ್ರವನ್ನು ಸಮರ್ಪಕವಾಗಿ ಬೆಳೆಸುವ ಆಸಕ್ತಿಯೇ ಇಲ್ಲದಿರುವುದು ವಿಷಾದದ ಸಂಗತಿ. ಕರ್ನಾಟಕದಲ್ಲಿ ಪ್ರೇಕ್ಷಣೀಯ ಪ್ರವಾಸಿ ಸ್ಥಳಗಳಿಗೇನೂ ಕೊರತೆಯಿಲ್ಲ. ಆದರೆ ಆ ತಾಣಗಳಲ್ಲಿ ಅಗತ್ಯ ಪ್ರವಾಸಿ ಸೌಲಭ್ಯಗಳನ್ನು ಒದಗಿಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನಗಳು ಮಾತ್ರ ನಡೆಯುತ್ತಿಲ್ಲ. ರಾಜಕಾರಣಿಗಳಲ್ಲಿ ಯಾವುದೇ ದೂರದರ್ಶಿತ್ವ ಇಲ್ಲದ್ದರಿಂದ ಅವರಿಗೆ ಪ್ರವಾಸೋದ್ಯಮದ ಮಹತ್ವವೂ ತಿಳಿದಿಲ್ಲ. ಥೈಲ್ಯಾಂಡ್ ಸಿಂಗಾಪುರ ಮಲೇಶಿಯಾದಂತಹ ಸಣ್ಣ ಪುಟ್ಟ ದೇಶಗಳಲ್ಲಿ ಪ್ರವಾಸೋದ್ಯಮವೇ ಬಹಳ ದೊಡ್ಡ ಆದಾಯ ತರುತ್ತಿವೆ. ಅದಕ್ಕೆ ಕಾರಣ ಅಲ್ಲಿ ಅದ್ಭುತವಾದ ರೀತಿಯಲ್ಲಿ ಪ್ರವಾಸೀ ಆಕರ್ಷಣೆ ಮತ್ತು ಸೌಲಭ್ಯಗಳನ್ನು ನಿರ್ಮಿಸಿರುವುದು. ದೇಶವಿದೇಶಗಳಿಂದ ದಿನನಿತ್ಯ ಬರುತ್ತಿರುವ ಪ್ರವಾಸಿಗರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಲಾಗುವುದು. ಭಾರತದಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಪ್ರವಾಸೀ ಸ್ಥಳಗಳಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲದಂತಾಗಿದೆ. ಪ್ರವಾಸೋದ್ಯಮವನ್ನು ಬೆಳೆಸಿದರೆ ಅದರಿಂದ ಬಹಳ ದೊಡ್ಡ ಪ್ರಮಾಣದ ಆದಾಯ ಸರಕಾರಕ್ಕೆ ಬರುತ್ತದೆನ್ನುವುದನ್ನು ಅಧಿಕಾರಕ್ಕೆ ಬರುವವರು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಪ್ರವಾಸೋದ್ಯಮ ಖಾತೆ ಸಚಿವರಾದವರು ಸಮರ್ಥರಿದ್ದರೆ ಮತ್ತು ಇದನ್ನು ಬೆಳೆಸುವುದರಲ್ಲಿ ಆಸಕ್ತಿ ಇದ್ದವರಾದರೆ ಬೇಕಾದಷ್ಟು ಅವಕಾಶಗಳಿವೆ. ಕರ್ನಾಟಕದಲ್ಲಿ ಬಹಳ ವಿಸ್ತಾರವಾದ ಸಮುದ್ರ ತೀರವಿದೆ. ನಿಸರ್ಗ ಸಂಪತ್ತು ಅಪಾರವಾಗಿದೆ. ಜಲಪಾತಗಳಿವೆ. ಕ್ಷೇತ್ರ ಸ್ಥಳಗಳಿವೆ. ಅಪೂರ್ವ ಶಿಲ್ಪಕಲಾ ತಾಣಗಳಿವೆ. ಎಲ್ಲ ಇದ್ದೂ ಏನೂ ಇಲ್ಲದ ಸ್ಥಿತಿ ನಮ್ಮ ರಾಜ್ಯದ್ದು. ಗೇರುಸೊಪ್ಪಾ ಜಲಪಾತದಂತಹ ಜಗತ್ಪ್ರಸಿದ್ಧ ಸ್ಥಳದಲ್ಲೂ ಸರಿಯಾದ ಸೌಕರ್ಯಗಳಿಲ್ಲ. ಇದೆಲ್ಲ ರಾಜಕಾರಣಿಗಳ ಅಜ್ಞಾನ ಮತ್ತು ನಿರ್ಲಕ್ಷ್ಯ ಮನೋಭಾವದ ಪರಿಣಾಮ. ಈ ಮನೋಭಾವ ಹೋಗದೇ ಯಾವ ಸುಧಾರಣೆಯೂ ಆಗಲಾರದು. ಕೇವಲ ಪ್ರವಾಸೋದ್ಯಮ ದಿನವನ್ನಾಚರಿಸುವ ಪ್ರಚಾರ ಪ್ರಿಯತೆಯಿಂದ ಏನೂ ಪ್ರಯೋಜನವಿಲ್ಲ.