ಚಂಡೀಘಡ್: ಕಳೆದ ಫೆಬ್ರವರಿಯಲ್ಲಿ ಇಬ್ಬರು ಮುಸ್ಲಿಮರ ಹತ್ಯೆ ಆರೋಪದಡಿಯಲ್ಲಿ ರಾಜಸ್ಥಾನ ಪೊಲೀಸರು ಮೊಕದ್ದಮೆ ದಾಖಲಿಸಿದ ಮತ್ತು ತವರು ರಾಜ್ಯ ಹರಿಯಾಣದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ಗೋರಕ್ಷಕ ಮೋನು ಮಾನೇಸರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದ ನುಹ್ನಲ್ಲಿರುವ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಅವರನ್ನು ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಮೋನು ಅವರನ್ನು ಗುರುಗ್ರಾಮ್ನಲ್ಲಿ ನುಹ್ ಪೊಲೀಸರು ಬಂಧಿಸಿದ್ದಾರೆ. ಮಾನೇಸರ್ನಿಂದ ಪಿಸ್ತೂಲ್, ಮೂರು ಜೀವಂತ ಗುಂಡುಗಳು ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರೀ ಕಾರ್ಯವಿಧಾನ ಅನುಸರಿಸಿ ಬಂಧನದ ಬಗ್ಗೆ ನೆರೆಯ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ತಿಳಿಸಲಾಗಿದೆ ಎಂದು ನುಹ್ ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನದ ದೀಗ್ ಜಿಲ್ಲೆ ನುಹ್ಗೆ ಹೊಂದಿಕೊಂಡಿದೆ. ಕಳೆದ ಜುಲೈ 31 ರ ಹಿಂಸಾಚಾರದ ಮೊದಲು ಆನ್ಲೈನ್ನಲ್ಲಿ ಕಾಣಿಸಿಕೊಂಡ ವೀಡಿಯೊ ಕ್ಲಿಪ್ನಲ್ಲಿ ಮೋನು ಮಾನೇಸರ್ (30) ಅವರು ಬ್ರಿಜ್ ಮಂಡಲ್ ಜಲಾಭಿಷೇಕ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು ಮತ್ತು ಯಾತ್ರೆಗೆ ಸೇರುವಂತೆ ಜನರಿಗೆ ಮನವಿ ಮಾಡಿಕೊಂಡಿದ್ದರು.
ಮೋನು ಮಾನೇಸರ್ ಅವರು ಜಲಾಭಿಷೇಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮುಸ್ಲಿಂ ಬಹುಸಂಖ್ಯಾತ ಹಳ್ಳಿಗಳಲ್ಲಿ ದುಷ್ಕರ್ಮಿಗಳು ಪ್ರಚಾರ ಮಾಡಿದ್ದು ನಂತರ ನುಹ್ನಲ್ಲಿ ವಿಎಚ್ಪಿ ನೇತೃತ್ವದ ಯಾತ್ರೆ ಮೇಲೆ ದುಷ್ಕರ್ಮಿಗಳು ವ್ಯವಸ್ಥಿತ ಧಾಳಿ ನಡೆಸಿದ್ದರು. ಹಿಂಸಾಚಾರದಲ್ಲಿ ನುಹ್ ಮತ್ತು ಗುರುಗ್ರಾಮ್ನಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ನಿಷೇಧಿತ ಆದೇಶಗಳನ್ನು ವಿಧಿಸಿದ್ದರಿಂದ ಮತ್ತು ಮೊಬೈಲ್ ಇಂಟರ್ನೆಟ್ಗೆ ನಿರ್ಬಂಧಗಳನ್ನು ವಿಧಿಸಿದ್ದರಿಂದ ನುಹ್ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಕೆಲವು ದಿನಗಳವರೆಗೆ ನಿಷೇದಾಜ್ಞೆ ಜಾರಿಯಲ್ಲಿತ್ತು.
ನಂತರ ವಿಡಿಯೋ ಕುರಿತು ಕೇಳಲಾದ ಪ್ರಶ್ನೆಗೆ, ಹರಿಯಾಣ ಗೃಹ ಸಚಿವ ಅನಿಲ್ ವಿಜ್, “ನಾನು ಆ ವೀಡಿಯೊವನ್ನು ನೋಡಿದ್ದೇನೆ, ಅವರು ಎಲ್ಲಿಯೂ ಜನರನ್ನು ಗಲಭೆಗೆ ಪ್ರೇರೇಪಿಸುತ್ತಿಲ್ಲ … ಅವರು ಜನರನ್ನು ಯಾತ್ರೆಗೆ ಸೇರುವಂತೆ ಕೇಳುತ್ತಿದ್ದಾರೆ” ಎಂದು ಹೇಳಿದ್ದರು. ಆದರೆ ಹಿಂಸಾಚಾರದಲ್ಲಿ ಮನೇಸರ್ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನುಹ್ ಪೊಲೀಸರು ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹರಿಯಾಣದ ಭಿವಾನಿ ಜಿಲ್ಲೆಯ ಲೋಹರು ಎಂಬಲ್ಲಿ ಬೆಂಕಿ ಹಚ್ಚಲಾಗಿದ್ದ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಾದ ನಾಸಿರ್ (25) ಮತ್ತು ಜುನೈದ್ (35) ಶವವಾಗಿ ಪತ್ತೆಯಾದ ನಂತರ ರಾಜಸ್ಥಾನ ಪೊಲೀಸರು ಫೆಬ್ರವರಿಯಲ್ಲಿ ದಾಖಲಿಸಿದ ಎಫ್ಐಆರ್ನಲ್ಲಿ ಮಾನೇಸರ್ ಹೆಸರೂ ಇದೆ. ರಾಜಸ್ಥಾನದ ಭರತ್ಪುರ ಜಿಲ್ಲೆಯ ಮೃತರಿಬ್ಬರನ್ನು ಗೋರಕ್ಷಕರು ಅಪಹರಿಸಿದ್ದಾರೆ ಎಂದು ಆರೋಪಿ ನಂತರ ರಾಜ್ಯದ ಗಡಿ ದಾಟಿ ಹರಿಯಾಣಕ್ಕೆ ಬಂದಿದ್ದರು ಎನ್ನಲಾಗಿದೆ.
ಸಂಚು ರೂಪಿಸುವಲ್ಲಿ ಮತ್ತು ಅಪರಾಧಕ್ಕೆ ಕುಮ್ಮಕ್ಕು ನೀಡುವಲ್ಲಿ ಮನೇಸರ್ ಪಾತ್ರವು ಸಕ್ರಿಯ ತನಿಖೆಯಲ್ಲಿದೆ ಎಂದು ರಾಜಸ್ಥಾನ ಪೊಲೀಸರು ಕಳೆದ ತಿಂಗಳು ಹೇಳಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಮಾನೇಸರ್ನನ್ನು ಬಂಧಿಸಲು ರಾಜಸ್ಥಾನ ಪೊಲೀಸರಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ತಮ್ಮ ಸರ್ಕಾರ ನೀಡಲಿದೆ ಎಂದು ಈ ಹಿಂದೆ ಸುದ್ದಿಗಾರರಿಗೆ ತಿಳಿಸಿದ್ದರು. ವಿಶ್ವ ಹಿಂದೂ ಪರಿಷತ್ನ ಹರಿಯಾಣ ಘಟಕದ ಪದಾಧಿಕಾರಿ ವರುಣ್ ಶರ್ಮಾ, ಮಾನೇಸರ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಹೇಳಿದ್ದಾರೆ. ವಿನಾಕಾರಣ ಬಜರಂಗದಳದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಇದನ್ನು ಖಂಡಿಸುತ್ತೇವೆ ಎಂದರು.