ದೇಶದಲ್ಲಿ ಗಾಂಧಿ ಹತ್ಯೆಯಿಂದ ದೇಶದಲ್ಲಿ ಆತಂಕದ ಸ್ಥಿತಿ ಆವರಿಸಿಕೊಂಡಿತು.ದೇಶದಲ್ಲಿ ಒಂದು ಸಮುದಾಯವನ್ನೇ ಗುರಿಯನ್ನಾಗಿಸಿಕೊಂಡು ದಾಳಿಗಳು ನಡೆದವು. ಇದರಿಂದ ಹತ್ಯೆಗೆ ಏನು ಸಂಬಂಧವಿಲ್ಲದವರೂ ಸಹ ಪರಿತಪಿಸುವಂತಹ ಪರಿಸ್ಥಿತಿ ದೇಶದಲ್ಲಿ ಉಂಟಾಯಿತು. ಅದು ಸಾವರ್ಕರ ಅವರಿಗೂ ತಟ್ಟಿತು ಒಂದಾನೊಂದು ಕಾಲದಲ್ಲಿ ಹಿಂದೂ ಮಹಾ ಸಭಾದ ಸದಸ್ಯನಾಗಿದ್ದ ಎಂಬ ಕಾರಣಕ್ಕೆ ನಾಥೂರಾಮ ಗೋಡ್ಸೆ ಹಾಗೂ ಸಾವರ್ಕರ್ ಅವರಿಗೆ ಸಂಬಂಧವಿದೆ ಎಂದು ನೆಹರೂ ಮತ್ತವರ ತಂಡ ದೇಶದ ತುಂಬೆಲ್ಲಾ ಹಬ್ಬಿಸಿತು. ಇದರಿಂದ ಸಾವರ್ಕರ್ ನೊಂದುಕೊಂಡರು.
ಇದೇ ವೇಳೆಗೆ ಸರಿಯಾಗಿ ಸಾವರಕರ್ ಬರೆದಿದ್ದ ‘ಆತ್ಮಹತ್ಯೆ ಮತ್ತು ಆತ್ಮಾರ್ಪಣೆ’ ಲೇಖನ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಕಂಡು ಅನೇಕ ಆಪ್ತರು ಅವರ ವಿಚಾರಿಸತೊಡಗಿದರು.ಆಗ ಆತ್ಮಾರ್ಪಣೆ ಮಾಡಿಕೊಳ್ಳ ಬೇಕೆಂದು ನಿರ್ಧಾರ ಮಾಡಿದ್ದ ಸಾವರ್ಕರ್ ಅದನ್ನು ಕೈ ಬಿಡಬೇಕಾಯಿತು.
1965ರ ಆಗಸ್ಟ್ನ ವೇಳೆಗೆ ಅವರ ಆರೋಗ್ಯ ತೀರಾ ಹದಗೆಟ್ಟಿತು. ಸರಿಸುಮಾರು ಅದೇ ವೇಳೆಗೆ ಪಾಕಿಸ್ತಾನಿ ಸೈನ್ಯ ಭಾರತದ ಮೇಲೆ ಆಕ್ರಮಣ ಮಾಡಿತು. ಭಾರತೀಯ ಸೇನೆ ಕೆಚ್ಚೆದೆಯಿಂದ ಹೋರಾಟ ನಡೆಸಿ ಲಾಹೋರಿನವರೆಗೆ ವಿಜಯಪತಾಕೆ ಕೊಂಡೊಯ್ಯುತ್ತಿದೆ ಎಂಬ ಸುದ್ದಿಯೇ ಸಾವರ್ಕರ್ ಅವರನ್ನು ಮತ್ತೆ ಪುಟಿದೇಳುವಂತೆ ಮಾಡಿತು.
ಸಂಪೂರ್ಣ ರಾಷ್ಟ್ರ ಸಾವರ್ಕರ್ ಅವರ ಸೈನ್ಯನಿಯೋಜನೆಯ ಮಹತ್ವವನ್ನು ಈಗ ಕಾಣಲಾರಂಭಿಸಿತು. ಭಾರತ ವಿಭಜಿತವಾಗಿಯೇ ಉಳಿಯಿತು. ಎಂಬ ನೋವು ಸಾವರ್ಕರ್ ಅವರ ಮನಸ್ಸನ್ನು ಘಾಸಿಮಾಡಿತು. ಅದರೊಟ್ಟಿಗೆ ಅವರ ಆರೋಗ್ಯವೂ ಕ್ಷೀಣಿಸತೊಡಗಿತು. ಅವರು ಸಾರ್ವಜನಿಕರನ್ನು ಭೇಟಿಯಾಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಅಂಥದ್ದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಗುರೂಜಿಯವರನ್ನು ಭೇಟಿಯಾಗಿ ರಾಷ್ಟ್ರದ ಭವಿಷ್ಯದ ಕುರಿತು ಚಿಂತನೆ ನಡೆಸಿದರು.
ಸಾವರಕರರ ಕಾಯಿಲೆ ದಿನದಿನಕ್ಕೂ ಉಲ್ಬಣಿಸುತ್ತಿತ್ತು. ಸಾವು ಅವರಿಗೆ ಎಂದೂ ಹೆದರಿಕೆ ತಂದಿರಲಿಲ್ಲ. ಅಂಡಮಾನಿನಲ್ಲಿ ಗಾಣ ತಿರುಗಿಸುವಾಗಲೇ ಅವರು ಬದುಕನ್ನು ಕೊನೆಗಾಣಿಸಬೇಕೆಂದಿದ್ದರೂ ದೇಶಕ್ಕಾಗಿ ಉಳಿದರು.
ಊಟ ಬಿಟ್ಟರು, ಬರೀ ಚಹಾ ಸೇವಿಸುತ್ತಿದ್ದರು. ಆ ಇಳೀ ವಯಸ್ಸಿನಲ್ಲಿ ಚುರುಕಾದ ಅವರ ನಾಲಿಗೆ ಚಹಾದಲ್ಲಿನ ಹೋಮಿಯೋಪತಿ ಔಷಧಿ ಗುರುತಿಸಿತು. ಚಹಾ ಜೀರ್ಣವಾಗುವುದಿಲ್ಲ, ಸೇರುವುದಿಲ್ಲ ಎಂಬ ಸಬೂಬು ಹೇಳಿ ಅದನ್ನು ನಿಲ್ಲಿಸಿದರು. ಮುಂಬಯಿಯಿಂದ ಮಗಳು ಬಂದಳು. ಸಾವರ್ಕರ್ ತಮ್ಮ ಆತ್ಮಾರ್ಪಣೆಗೆ ಅವಳನ್ನು ಒಪ್ಪಿಸಿ ಸುಮ್ಮನಾಗಿಸಿದರು. ಪ್ರತಿದಿನ ನಾಲ್ಕಾರು ಚಮಚ ನೀರು ತೆಗೆದುಕೊಂಡರೆ ಹೆಚ್ಚು. ಶಕ್ತಿ ಇದ್ದಷ್ಟೂ ದಿನ ಪತ್ರಿಕೆಗಳನ್ನು, ಕಾಗದಗಳನ್ನು ಓದುತ್ತಿದ್ದರು. ದಿನೇ ದಿನೇ ದೇಹ ನಿಶಬ್ದವಾಗುತ್ತಾ ಬಂತು. ದೇಹ ಊದಿಕೊಳ್ಳತೊಡಗಿತು. ಐದನೇ ದಿನಕ್ಕೆ ಮಾತು ಕಡಿಮೆಯಾಯಿತು. ಏಳನೇ ದಿನದ ವೇಳೆಗೆ ಓದುವುದು ನಿಂತುಹೋಯಿತು. ಹನ್ನೆರಡನೇ ದಿನದ ವೇಳೆಗೆ ದಿನಕ್ಕೆರಡು ಮಾತಾಡಿದರೆ ಹೆಚ್ಚಾಯಿತು. ಮನೆಯ ಹೊರಗೆ ಪ್ರತಿದಿನ ನೂರಾರು ಜನ ಸೇರುತ್ತಿದ್ದರು. ಸಾವರಕರ್ ಬೇಗ ಗುಣಮುಖರಾಗಲಿ’ ಎಂದು ಪ್ರಾರ್ಥಿಸುತ್ತಿದ್ದರು.
ಅಂದು ಇದೇ ಜನರು ಹಿಂದು ಮಹಾಸಭೆಯನ್ನು ಚುನಾವಣೆಗಳಲ್ಲಿ ಸೋಲಿಸಿದ್ದರು. ಪರಿಣಾಮ ದೇಶ ತುಂಡಾಯಿತು. ಅಂದು ಇದೇ ಜನ ಗಾಂಧಿ ಹತ್ಯೆಯ ಹೆಸರಲ್ಲಿ ಸಾವರ್ಕರ್ ಮೇಲೆ ಕಲ್ಲೆಸೆದಿದ್ದ ಜನ ಇಂದು ಅವರ ಒಳಿತಾಗಿ ಪಾರ್ಥಿಸುತ್ತಿದ್ದರು. ಪರಿಣಾಮ ಸಾವರ್ಕರ್ ಮನಸ್ಸಿಗೆ ಆರದ ಗಾಯವಾಗಿತ್ತು.
ಸಾವರಕರ್ ಪ್ರಾಯೋಪವೇಶ ಕೈಗೊಂಡಿದ್ದೇನೆ ಎಂದು ಯಾರಿಗೂ ಹೇಳಿರಲಿಲ್ಲ. ಎಷ್ಟೋ ಜನ ಈ ಹಿಂದೆ ಆಮರಣ ಉಪವಾಸ ಕೈಗೊಂಡು ಮಧ್ಯದಲ್ಲಿಯೇ ಅದನ್ನು ಕೈಬಿಟ್ಟು ಅದರ ಉದ್ದೇಶಕ್ಕೇ ಕಳಂಕ ತಂದಿದ್ದರು. ಹೀಗಾಗಿ ಸಾವರಕರ್ ಅದನ್ನು ಮುಚ್ಚಿಟ್ಟರು. ಔಷಧಿಯನ್ನು ನಿರಾಕರಿಸಿದರು. ಅನ್ನ ಬಿಟ್ಟು ಅದಾಗಲೇ 21 ದಿನ ಕಳೆದಿತ್ತು. ಸಾವರಕರ್ ಸಂಪೂರ್ಣ ನಿಶ್ಯಕ್ತರಾಗಿದ್ದರು. ಕೆಮ್ಮು ಅವರನ್ನು ಬಾಧಿಸುತ್ತಿತ್ತು. ಮೈ ಬಿಸಿಯೇರಿತ್ತು.
ತುಕಾರಾಮರ ಪದ್ಯವನ್ನು ಉಚ್ಚರಿಸುತ್ತಾ ಎದುರಿಗಿದ್ದವರಿಗೆಲ್ಲರಿಗೂ ಕೈಯೆತ್ತಿ ನಮಸ್ಕರಿಸಿದರು. ಆವತ್ತು 1966 ಫೆಬ್ರವರಿ 26, ಮೃತ್ಯು ಸಾವರ್ಕರ್ ಅವರನ್ನು ತನ್ನ ಲೋಕಕ್ಕೆ ಕೊಂಡ್ಯೋಯಿತು ಎನ್ನುವುದರ ಬದಲಿಗೆ ಸಾವರ್ಕರ್ ಮೃತ್ಯುವನ್ನು ಅಪ್ಪಿಕೊಂಡರು ಎಂದು ಹೇಳಬಹುದಾಗಿದೆ.
ಇಂತಹ ಅದಮ್ಯ ಚೇತನದ ಜೀವನದ ಯಾತ್ರೆ ಇಲ್ಲಿಗೆ ನಿಂತು ಹೋಯಿತು. ಸ್ವಾತಂತ್ರ್ಯಕ್ಕಾಗಿ ದಾಸ್ಯದ ವಿರುದ್ಧ ಹೋರಾಡಲು ಸದಾ ಮುಂದಿದ್ದ ಜೀವ ಇಂದು ಎಲ್ಲವನ್ನು ತ್ಯಜಿಸಿ ಸ್ವತಂತ್ರವಾಗಿ ಹಾರಾಡುತ್ತಿತ್ತು. ಜೀವನದ ತುಂಬೆಲ್ಲಾ ಸಂಘರ್ಷವನ್ನೇ ತನ್ನ ಉಸಿರಾಗಿದ್ದ ಜೀವ, ಸಮಾಜಸೇವೆ ಸಮಾನತೆಯನ್ನು ಸಮಾಜದಲ್ಲಿ ಸ್ಥಾಪನೆ ಮಾಡಬೇಕೆಂದು ಜೀವನ ನಡೆಸಿದ ಸಾವರ್ಕರ್ ತಮ್ಮ ಜೀವನದ ಧ್ಯೇಯವಾದ ಸ್ವಾತಂತ್ರ್ಯವನ್ನು ತಂದುಕೊಟ್ಟ ನಂತರವೇ ಪ್ರಾಣಾರ್ಪಣೆ ಮಾಡಿದ್ದು ವಿಶೇಷವಾಗಿದೆ.
ವಿನಾಯಕ ದಾಮೋದರ ಸಾವರ್ಕರ್ ಸದಾ ಭಾರತೀಯ ಜನಮಾನಸದಲ್ಲಿ ಇಂದಿಗೂ ಅಮರರಾಗಿ ಉಳಿದಿದ್ದಾರೆ. ಅವರ ಪಾದಧೂಳಿಗೂ ಸಮಾನರಲ್ಲದ ಜನ ಇಂದು ಅವರನ್ನು ಹೀಯಾಳಿಸುತ್ತಿರುವುದು ವಿಪರ್ಯಾಸವಾದರೂ,ಅನೇಕ ಜನರು ಅವರ ನೈಜ ಜೀವನಗಾಥೆಯನ್ನು ತಿಳಿದು ಗೌರವಿಸುತ್ತಿರುವುದು ಅತ್ಯಂತ ಅಭಿನಂದನೀಯ ಸಂಗತಿಯಾಗಿದೆ.
ಮುಂದಿನ ಸರಣಿಯಲ್ಲಿ ಮತ್ತೊಬ್ಬ ಸ್ವಾತಂತ್ರ್ಯ ಸೇನಾನಿಯ ಜೀವನಗಾಥೆಯನ್ನು ತಿಳಿಯೋಣ
ಮುಂದುವರೆಯುತ್ತದೆ..