ಹಿಂದೂ ಧರ್ಮದಲ್ಲಿನ ಆಹಾರ ಪದ್ಧತಿಯು ವೈಜ್ಞಾನಿಕತೆಯನ್ನು ಒಳಗೊಂಡಿದೆ ಎಂದರೆ ಸುಳ್ಳಾಗಲಾರದು. ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಅನುಗುಣವಾಗಿ ಇಟ್ಟುಕೊಂಡು ನಮ್ಮ ಆಹಾರವನ್ನು ದೈನಂದಿನ ಜೀವನದಲ್ಲಿ ಗ್ರಹಣ ಮಾಡುವ ವಿಶೇಷವಾದ ಕ್ರಮ ನಮ್ಮಲಿದೆ.ಉದಾಹರಣೆಗೆ ಹಿಂದೂಗಳು ಆಚರಿಸುವ ಚಾತುರ್ಮಾಸ ವೃತ ಮತ್ತು ಸಂಕ್ರಾತಿಯನ್ನಷ್ಟೇ ಇಲ್ಲಿ ಉದಾಹರಣೆಯನ್ನಾಗಿ ನೀಡಲಾಗಿದೆ.
ಮೊದಲನೆಯ ತಿಂಗಳು (ಆಷಾಢ ಶುಕ್ಲ ಏಕಾದಶಿ – ಶ್ರಾವಣ ಶುಕ್ಲ ದಶಮಿ) ಕಾಯಿ ಪಲ್ಲೆ ತರಕಾರಿಗಳು ವರ್ಜ್ಯ. ಇದನ್ನು ಶಾಕವ್ರತವೆನ್ನುತ್ತಾರೆ. ಈ ಮಾಸದಲ್ಲಿ ಕಾಯಿಪಲ್ಲೆಗಳ ಬದಲಾಗಿ ಕಾಳುಗಳನ್ನು ಮತ್ತು ಹುಳಿ ರುಚಿಗೆ ಮಾವಿನ ಸೊಲನ್ನು ಬಳಿಸುತ್ತಾರೆ. ಮೆಣಸು ಜೀರಿಗೆಗಳು ಖಾರಕ್ಕೆ ಬಳಸಲ್ಪಡುತ್ತವೆ. ಸಾಸಿವೆ ಬಹುತೇಕ ವರ್ಜ್ಯ ಆದರೆ ಕೆಲ ಸಂಪ್ರದಾಯಗಳಲ್ಲಿ ಸಾಸಿವೆಯ ಬಳಕೆ ಉಂಟು. ಇಲ್ಲಿ ತರಕಾರಿ ಬಿಟ್ಟು ಕೇವಲ ಕಾಳುಗಳನ್ನು ಬಳಿಸುವದಕ್ಕೆ ಇರುವ ವೈಜ್ಞಾನಿಕ ಕಾರಣವೆಂದರೆ ಈ ಮಾಸದಲ್ಲಿ ಮಳೆಯ ಪ್ರಮಾಣ ಅತ್ಯಂತ ಹೆಚ್ಚಾಗಿ ಇರುವದರಿಂದ ತರಕಾರಿಗಳು ಕೊಳೆತು ಸೇವಿಸಲು ಯೋಗ್ಯವಾಗಿರುವದಿಲ್ಲ ಕಾರಣದಿಂದಾಗಿ ಮತ್ತು ಹಿರಿಯರು ಹೆಚ್ಚಾಗಿ ಕೃಷಿಕರೆ ಆಗಿರುವದರಿಂದ ಈ ಮಾಸದಲ್ಲಿ ತರಕಾರಿಯ ಬಳಕೆ ನಿಷೇಧವಾಗಿದೆ.
ಎರಡನೆಯ ತಿಂಗಳು (ಶ್ರಾವಣ – ಭಾದ್ರಪದ) ಮೊಸರು ಬಳಸುವುದಿಲ್ಲ. ಇದಕ್ಕೆ ದಧಿ ವ್ರತ ಎಂದು ಕರೆಯುತ್ತಾರೆ. ಈ ಒಂದು ತಿಂಗಳ ಅವಧಿಯಲ್ಲಿ ವಾತಾವರಣದಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ರೋಗಾಣುಗಳ ಬಾಧೆ ಹೆಚ್ಚು ಮತ್ತು ಹಾಲು ಮೊಸರಾಗಲು ಸೂಕ್ಷ್ಮಾಣಗಳ ಅವಶ್ಯಕತೆಯಿದೆ. ಆದ್ದರಿಂದ ಹಿರಿಯರು ಈ ಒಂದು ತಿಂಗಳಲ್ಲಿ ಮೊಸರನ್ನು ಬಳಿಸುತ್ತಿರಲಿಲ್ಲ.
ಮೂರನೆಯ ತಿಂಗಳು (ಭಾದ್ರಪದ – ಆಶ್ವಯಜ, ಆಶ್ವೀನ) ಹಾಲನ್ನು ಬಳಿಸುವಂತಿಲ್ಲ ಇದು ಕ್ಷೀರವ್ರತ. ಈ ಮಾಸದಲ್ಲಿ ಆಕಳು ಅಥವಾ ಎಮ್ಮೆ ತಮ್ಮ ಸಂತಾನೋತ್ಪತ್ತಿ ಕಾರ್ಯವನ್ನು ಮಾಡುತ್ತವೆ. ಇದರ ವಿವರವನ್ನು (ಹೈನುಗಾರಿಕೆ) ಮಾಡುವವರಲ್ಲಿ ತಿಳಿಯಬಹುದು. ಮತ್ತು ನಮ್ಮ ಹಿರಿಯರು ತಮ್ಮ ಮನೆಯಲ್ಲಿ ಆಕಳು ಎಮ್ಮೆಯನ್ನು ಸಾಕಾಣಿಕೆಯನ್ನು ಮಾಡುತ್ತಿರುವ ಕಾರಣ ಆಕಳಿಗೆ ಅಥವಾ ಅದರ ಕರುಗಳಿಗೆ ಯಾವುದೆ ರೀತಿಯ ತೊಂದರೆ ಉಂಟಾಗದಿರಲಿ ಎಂಬ ಕಾರಣದಿಂದ ಹಾಲಿನ್ನು ಸೇವಿಸುತ್ತಿರಲಿಲ್ಲ.
ನಾಲ್ಕನೆಯ ತಿಂಗಳು (ಆಶ್ವೀನ – ಕಾರ್ತಿಕ) ದ್ವಿದಳ ಧಾನ್ಯ, ಬೇಳೆಗಳು ವರ್ಜ್ಯವಗಿದ್ದು, ಇದಕ್ಕೆ ದ್ವಿದಳ ವ್ರತ ಎಂದು ಕರೆಯುತ್ತಾರೆ. ದ್ವಿದಳ ಸಸ್ಯಗಳಾಗಲೀ ಸಸ್ಯೋತ್ಪನ್ನಗಳಾಗಲಿ ಬಳಕೆಗೆ ಬರುವದಿಲ್ಲ. ಕಾರಣ ಪ್ರಕೃತಿಯಲ್ಲಿ ಈ ಸಮಯಕ್ಕೆ ಕೀಟಗಳ ಬಾಧೆ ಬಹಳವಿರುತ್ತದೆ. ಮತ್ತು ಹಿರಿಯರು ವರ್ಷವಿಡಿ ಶೇಖರಿಸಿಟ್ಟಿರುವ (ಹಗೆವು) ದಾಸ್ತಾನನ್ನು ಶುದ್ಧಗೊಳಿಸುವ ಕಾಲವು ಇದಾಗಿರುವದರಿಂದ ಮತ್ತು ಹೊಸ ದ್ವಿದಳ ಧಾನ್ಯಗಳನ್ನು ಇನ್ನೂ ಕಟಾವು ಮಾಡದೆಯಿರುವದರಿಂದ ಈ ಮಾಸದಲ್ಲಿ ಯಾವುದೇ ದ್ವಿದಳಗಳನ್ನು ಸೇವಿಸುತ್ತಿರಲಿಲ್ಲ.
ಹಾಗೆಯೇ ಸಂಕ್ರಾಂತಿಯ ಸಮಯದಲ್ಲಿ ಚಳಿಗಾಲ ಇರುವುದರಿಂದ ದೇಹವು ಶುಷ್ಕವಾಗಿರುತ್ತದೆ. ಆದ್ದರಿಂದ ದೇಹಕ್ಕೆ ಆಸಮಯದಲ್ಲಿ ತೇವಾಂಶದ ಅಗತ್ಯವಿರುತ್ತದೆ. ಆದ್ದರಿಂದ ಸಂಕ್ರಾತಿಯ ಸಂಧರ್ಭದಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಸೇವಿಸುವ ಸಂಪ್ರದಾಯ ಅಸ್ಥಿತ್ವದಲ್ಲಿದೆ.
ನಮ್ಮ ಆಹಾರ ಕ್ರಮಕ್ಕೂ ಹಾಗೂ ಪ್ರಕೃತಿಯ ಅವಿನಾಭಾವ ಸಂಭಂಧವಿದೆ. ಮತ್ತು ನಮ್ಮ ಹಿರಿಯರು ರೂಢಿಸಿಕೊಂಡು ಬಂದ ಪ್ರತಿಯೊಂದು ಆಚರಣೆಯಲ್ಲೂ ವೈಜ್ಞಾನಿಕತೆ ಅಡಗಿದ್ದು ಇದನ್ನು ಇಂದಿನ ಜನರು ತಿಳಿಯಬೇಕಾದ ಅವಶ್ಯಕತೆಯಿದೆ.
ಮುಂದುವರೆಯುತ್ತದೆ.