ಕೆವಿಎನ್ ಪ್ರೊಡಕ್ಷನ್ಸ್ ಎರಡು ದಿನಗಳ ಹಿಂದೆ ‘ದೊಡ್ಡ ಘೋಷಣೆ’ ನೀಡಲಿದ್ದೇವೆ ಎಂದು ಟ್ವೀಟ್ ಮಾಡಿದಾಗಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿತ್ತು. ಇಂದು ಕೆವಿಎನ್ ಪ್ರೊಡಕ್ಷನ್ಸ್ ಟ್ವೀಟ್ ಮಾಡಿದ್ದು, ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ತಿಳಿಸಿದೆ. ಐತಿಹಾಸಿಕ, ಪೌರಾಣಿಕ ಅಥವಾ ಔಟ್-ಅಂಡ್-ಔಟ್ ಕಮರ್ಷಿಯಲ್, ಎಂಟರ್ಟೈನರ್ ಇವುಗಳಲ್ಲಿ ಯಾವ ತರದ ಸಿನಿಮಾ ಎಂಬುದಕ್ಕೆ ಯಾವುದೇ ಸುಳಿವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ.
ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಬಹುದು ಎನ್ನಲಾಗಿದೆ. ಹಾಗೂ ಕಥಾವಸ್ತುವಿನ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ನಟ ದರ್ಶನ್, ನಿರ್ಮಾಪಕ ವೆಂಕಟ್ ಕೋಣಂಕಿ, ನಿರ್ದೇಶಕ ಪ್ರೇಮ್, ರಕ್ಷಿತಾ ಮತ್ತು ಸುಪ್ರಿತ್ ಅವರಿರುವ ಫೊಟೋವೊಂದನ್ನು ಟ್ವೀಟ್ ಮಾಡಿ ಹೊಸ ಚಿತ್ರ ನಿರ್ಮಾಣದ ಬಗ್ಗೆ ಖಾತ್ರಿ ಪಡಿಸಿದೆ. ದರ್ಶನ್ ಅವರು ಕೆವಿಎನ್ ಪ್ರೊಡಕ್ಷನ್ ಹೌಸ್ ನೊಂದಿಗೆ ಕೆಲಸ ಮಾಡುವುದು ಇದೇ ಮೊದಲು.
ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಿರ್ಮಾಣ ಸಂಸ್ಥೆಯು ಕೈಜೋಡಿಸುತ್ತಿದೆ ಎಂದು ಈಗ ಅಧಿಕೃತವಾಗಿದೆ. ಕೆಡಿ ನಂತರ ಈ ಪ್ರೊಡಕ್ಷನ್ ಹೌಸ್ ನೊಂದಿಗೆ ಪ್ರೇಮ್ ಅವರ ಎರಡನೇ ಸಿನಿಮಾ ಇದಾಗಲಿದೆ.
ಚಾಲೆಂಜಿಂಗ್ ಸ್ಟಾರ್ ಮತ್ತು ನಿರ್ದೇಶಕ ಪ್ರೇಮ್ ಎರಡು ದಶಕಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. 2003ರಲ್ಲಿ ಕರಿಯ ಚಿತ್ರಕ್ಕಾಗಿ ಇಬ್ಬರು ಜೊತೆಯಾಗಿದ್ದರು. ಈ ಚಿತ್ರವು ಆಗ ದೊಡ್ಡ ಹಿಟ್ ಆಗಿತ್ತು. ಈಗಲೂ ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಮತ್ತೆ ಬಿಗ್ ಹಿಟ್ ಮೂವೀ ಕನ್ನಡ ಚಿತ್ರ ರಂಗಕ್ಕೆ ಸಿಗಲಿದೆಯ ಎಂದು ಸಿನಿ ರಸಿಕರು ಎದುರು ನೋಡುತ್ತಿದ್ದಾರೆ