ಒಂದು ದೇಶದ ಅಭಿವೃದ್ಧಿ ಎಂದರೆ ಕೇವಲ ವಾಣಿಜ್ಯೋದ್ಯಮ, ಆರ್ಥಿಕ ಕ್ಷೇತ್ರಗಳ ಮುನ್ನಡೆ ಮಾತ್ರವಲ್ಲ. ಸಾಂಸ್ಕೃತಿಕ ತಳಹದಿಯಿಲ್ಲದ ಯಾವ ನೆಲವೂ ಉದ್ಧಾರವಾಗಲಾರದು. ಪ್ರತಿಯೊಂದು ದೇಶಕ್ಕೂ ಅದರದೇ ಆದ ಧರ್ಮಸಂಸ್ಕೃತಿಗಳ ಹಿನ್ನೆಲೆ ಇದ್ದೇಇರುತ್ತದೆ. ನಾವು ಅದನ್ನು ಅಲಕ್ಷಿಸಿ ಮುನ್ನಡೆಯಲಾಗದು. ಭಾರತ ವೇದೋಪನಿಷತ್ತುಗಳ ಕಾಲದಿಂದಲೂ ಲಕ್ಷಾಂತರ ವರ್ಷಗಳ ಭವ್ಯ ಧಾರ್ಮಿಕ , ಆಧ್ಯಾತ್ಮಿಕ ಇತಿಹಾಸ ಹೊಂದಿದೆ ಎನ್ನುವದನ್ನು ಮರೆಯುವಂತಿಲ್ಲ.
ರಾಮಾಯಣದಂತಹ ಮಹಾಕಾವ್ಯ ಐದು ಸಾವಿರ ವರ್ಷಗಳ ಹಿಂದೆ ರೂಪುಗೊಂಡು ಇಂದಿಗೂ ನಮ್ಮ ನಡುವೆ ಉಳಿದುಕೊಂಡಿದೆ. ದ್ವಾಪರಾ ಯುಗಕ್ಕೆ ಸೇರಿದ ಮಹಾಭಾರತ ನಮ್ಮ ನಡುವೆ ಅಸ್ತಿತ್ವದಲ್ಲಿದೆ. ಹಿಂದಿನ ಋಷಿಮುನಿಗಳು, ತಪಸ್ವಿಗಳು, ಆಧ್ಯಾತ್ಮಿಕ ಮಹಾಪುರುಷರು ನಮಗೆ ಅಗಾಧ ಜ್ಞಾನ ಸಂಪತ್ತನ್ನು ಕೊಟ್ಟಿದ್ದಾರೆ. ಗಂಗೆ ಯಮುನೆ ಬ್ರಹ್ಮಪುತ್ರೆ ಕಾವೇರಿ ಕೃಷ್ಣೆಯಂತಹ ನದೀತಟಗಳಲ್ಲಿ ಮೈದಾಳಿರುವ ದೇವಾಲಯಗಳು ಕೇವಲ ಕಲ್ಲಿನ ಕಟ್ಟಡಗಳಲ್ಲ. ಅವು ನಮ್ಮ ಜನಜೀವನಕ್ಕೆ ಅಪಾರ ಚೈತನ್ಯ ನೀಡುವ ಪವಿತ್ರ ಮಂದಿರಗಳು. ಅವನ್ನೆಲ್ಲ ಸರಿಯಾದ ರೀತಿಯಲ್ಲಿ ಕಾದುಕೊಂಡು ಜನರಲ್ಲಿ ಧರ್ಮ ನೈತಿಕತೆ ಸದಾಚಾರ ಸದ್ವಿಚಾರ ಸಚ್ಚಾರಿತ್ರ್ಯಗಳು ಬೆಳೆಯುವಂತೆ ಮಾಡಬೇಕಾದ ಅಗತ್ಯವಿದೆ.
ಕಳೆದ ಆರೆಂಟು ವರ್ಷಗಳಲ್ಲಿ ಅಂತಹ ಒಂದು ಬೆಳವಣಿಗೆ ಕಂಡು ಬರುತ್ತಿರುವದು ಸಂತೋಷದ ಸಂಗತಿ. ಕಾಶಿ ಮಥುರಾ ಅಯೋಧ್ಯಾ ಉಜ್ಜಯಿನಿ ಮೊದಲಾದ ಕ್ಷೇತ್ರಸ್ಥಾನಗಳ ಅಭಿವೃದ್ಧಿ ಕಾರ್ಯವೆಂದರೆ ಅದು ಈ ದೇಶದ ಕೋಟಿ ಕೋಟಿ ಜನರ ನಂಬಿಕೆ ಶ್ರದ್ಧೆಗಳಿಗೆ ಬೆಲೆ ಕೊಟ್ಟಂತೆ. ಪರಕೀಯರ ಆಕ್ರಮಣದಿಂದ ಹಾಳಾಗಿದ್ದ ಆ ನೆಲೆಗಳ ಪುನರುಜ್ಜೀವನದಿಂದ ಎರಡು ಬಗೆಯ ಪ್ರಯೋಜನವಿದೆ ಎನ್ನುವದನ್ನು ಮರೆಯುವಂತಿಲ್ಲ. ಒಂದು ಅವುಗಳ ಭಕ್ತರಿಗೆ ಆಗುವ ಮಾನಸಿಕ ಸಂತೋಷ.
ಇನ್ನೊಂದು ಪ್ರವಾಸೋದ್ಯಮದ ಬೆಳವಣಿಗೆಯಿಂದ ದೇಶದ ಆದಾಯವೃದ್ಧಿ. ಇವು ಒಂದಕ್ಕೊಂದು ಪೂರಕವಾಗಿವೆ. ದೇಶದ ಬಹುಸಂಖ್ಯಾತ ಜನರ ಭಾವನೆಗೆ ಬೆಲೆ ಕೊಡುವದು ಅಧಿಕಾರದಲ್ಲಿದ್ದವರ ಕರ್ತವ್ಯ. ಆ ಮಹತ್ವದ ಕೆಲಸವನ್ನು ಮಾಡುತ್ತಿರುವದು ಸ್ವಾಗತಾರ್ಹ. ಟೀಕಾಕಾರರು ಇದ್ದೇ ಇರುತ್ತಾರೆ. ಅವರು ಅಭಿವೃದ್ಧಿ ವಿರೋಧಿ ಮನೋಭಾವ ಹೊಂದಿರುತ್ತಾರೆ. ಅವರಿಗೆ ಯಾರು ಏನು ಮಾಡಿದರೂ ಟೀಕಿಸುವದೇ ಉದ್ಯೋಗ. ಅಂಥವರನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ. ನಮಗೆ ಒಟ್ಟಾರೆ ಈ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಏಳ್ಗೆ ಮುಖ್ಯ