ಅಥೆನ್ಸ್: ಶುಕ್ರವಾರ ಅಥೆನ್ಸ್ನಲ್ಲಿ ನಡೆದ ವ್ಯಾಪಾರ ಭೋಜನಕೂಟದಲ್ಲಿ ಭಾರತ ಮತ್ತು ಗ್ರೀಸ್ನ ವ್ಯಾಪಾರ ನಿಯೋಗಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಉಭಯ ದೇಶಗಳ ನಡುವಿನ ಸಂಬಂಧದಲ್ಲಿನ ಸಕಾರಾತ್ಮಕ ಲಾಭವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೋದಿ ಅವರು ತಮ್ಮ ಭಾಷಣದಲ್ಲಿ ತಮ್ಮ ಸರ್ಕಾರ ಜಾರಿಗೆ ತಂದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಕುರಿತು ಮಾತನಾಡಿದಾಗ ಮೊದಲು ಕೊಡಗಿನಲ್ಲಿ ಕಾಫಿಯನ್ನು ಉತ್ಪನ್ನವನ್ನಾಗಿ ಆಯ್ಕೆ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಮೋದಿ ಅವರ ಭಾಷಣದ 50 ಸೆಕೆಂಡುಗಳ ವೀಡಿಯೋ ಕ್ಲಿಪ್ ಕೊಡಗು ಜಿಲ್ಲಾದ್ಯಂತ ಶನಿವಾರ ವೈರಲ್ ಆಗಿದೆ. ನಂತರ ಅಮೃತಸರ ಜಿಲ್ಲೆಯ ಉಪ್ಪಿನಕಾಯಿ ಮತ್ತು ಭಿಲ್ವಾರ ಜಿಲ್ಲೆಯ ಜೋಳದ ಉತ್ಪನ್ನ ಕುರಿತೂ ಪ್ರಸ್ತಾಪಿಸಿದ್ದಾರೆ. ಈ ಯೋಜನೆಯನ್ನು 2018 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ಇದನ್ನು 75 ಜಿಲ್ಲೆಗಳಿಗೆ ವಿಸ್ತರಿಸಿತ್ತು. ನಂತರ ಕೇಂದ್ರ ಸರ್ಕಾರ ಈ ಯೋಜನೆಯನ್ನು ದೇಶಾದ್ಯಂತ ಆಯ್ದ ಜಿಲ್ಲೆಗಳಿಗೆ ವಿಸ್ತರಿಸಿತು. ಈ ಯೋಜನೆಯಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕಿ ವಿದೇಶಗಳಿಗೆ ರಫ್ತು ಮಾಡುವ ಅವಕಾಶ ಹೆಚ್ಚಾಗಲಿದೆ ಎಂದು ಮೋದಿ ಹೇಳಿದರು.
ತಮ್ಮ ಗ್ರೀಸ್ ಭೇಟಿಯನ್ನು ಮುಕ್ತಾಯಗೊಳಿಸುವ
ಮೊದಲು ಅಥೆನ್ಸ್ ಕನ್ಸರ್ವೇಟೋಯರ್ನಲ್ಲಿ ಆಯೋಜಿಸಲಾದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು.
ತಮ್ಮ ಗ್ರೀಸ್ ಭೇಟಿಯು ಭಾರತ – ಗ್ರೀಸ್ ಸ್ನೇಹಕ್ಕೆ ಹಾಗೂ ವಿಶೇಷವಾಗಿ ಎರಡೂ ದೇಶಗಳ ಜನರ ನಡುವಿನ ಸಂಬಂಧಕ್ಕೆ ವೇಗ ಲಭಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ”ಈ ಗ್ರೀಸ್ ಭೇಟಿ ಬಹಳ ವಿಶೇಷವಾದದ್ದು. ಇಲ್ಲಿನ ಕ್ರಿಯಾತ್ಮಕ ಭಾರತೀಯ ಸಮುದಾಯದೊಂದಿಗೆ ನಾನು ಸ್ಮರಣೀಯ ಸಂವಾದವನ್ನೂ ನಡೆಸಿದ್ದೇನೆ. ಗ್ರೀಸ್ ಸರ್ಕಾರ ಮತ್ತು ಗ್ರೀಸ್ ಜನರಿಗೆ ಕೃತಜ್ಞತೆಗಳು,” ಎಂದು ಪ್ರಧಾನಿ ಮೋದಿ ಶುಕ್ರವಾರ ಟ್ವೀಟ್
ಮಾಡಿದ್ದಾರೆ. ದೇಶದ ಪ್ರಧಾನಿಯೊಬ್ಬರು 40 ವರ್ಷಗಳ ನಂತರ ಗ್ರೀಸ್ ದೇಶಕ್ಕೆ ಭೇಟಿ ನೀಡಿದ್ದಾರೆ.
ಕೇಂದ್ರ ಸರ್ಕಾರವು ಜಾರಿಗೆ ತಂದ ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಯೋಜನೆಯು ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಬೆಂಬಲ ಮೂಲಸೌಕರ್ಯಗಳ ಜೋಡಣೆಗಾಗಿ ಚೌಕಟ್ಟನ್ನು ಒದಗಿಸುತ್ತದೆ. ರಾಜ್ಯಗಳು ಒಂದು ಜಿಲ್ಲೆಗೆ ಆಹಾರ ಉತ್ಪನ್ನವನ್ನು ಗುರುತಿಸುತ್ತವೆ ಮತ್ತು ಬೇಸ್ಲೈನ್ ಅಧ್ಯಯನ ನಡೆಸುತ್ತವೆ. ODOP ಉತ್ಪನ್ನವು ಹಾಳಾಗುವ ಕೃಷಿ ಉತ್ಪನ್ನ, ಏಕದಳ ಆಧಾರಿತ ಉತ್ಪನ್ನ ಅಥವಾ ಜಿಲ್ಲೆ ಮತ್ತು ಅದರ ಸಂಬಂಧಿತ ವಲಯಗಳಲ್ಲಿ ವ್ಯಾಪಕವಾಗಿ ಉತ್ಪಾದಿಸುವ ಆಹಾರ ಉತ್ಪನ್ನವಾಗಿರಬಹುದು. ಅಂತಹ ಉತ್ಪನ್ನಗಳ ವಿವರಣಾತ್ಮಕ ಪಟ್ಟಿಯು ಮಾವು, ಆಲೂಗೆಡ್ಡೆ, ಲಿಚಿ, ಟೊಮೇಟೊ, ಟಪಿಯೋಕಾ, ಕಿನ್ನು, ಭುಜಿಯಾ, ಪೇಠಾ, ಪಾಪಡ್, ಉಪ್ಪಿನಕಾಯಿ, ರಾಗಿ ಆಧಾರಿತ ಉತ್ಪನ್ನಗಳು, ಮೀನುಗಾರಿಕೆ, ಕೋಳಿ, ಮಾಂಸ ಮತ್ತು ಇತರ ಪ್ರಾಣಿಗಳ ಆಹಾರಗಳನ್ನು ಒಳಗೊಂಡಿದೆ.
ಇದಲ್ಲದೆ, ತ್ಯಾಜ್ಯದಿಂದ ಸಂಪತ್ತಿನ ಉತ್ಪನ್ನಗಳನ್ನು ಒಳಗೊಂಡಂತೆ ಕೆಲವು ಇತರ ಸಾಂಪ್ರದಾಯಿಕ ಮತ್ತು ನವೀನ ಉತ್ಪನ್ನಗಳನ್ನು ಯೋಜನೆಯ ಅಡಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಜೇನುತುಪ್ಪ, ಬುಡಕಟ್ಟು ಪ್ರದೇಶಗಳಲ್ಲಿನ ಸಣ್ಣ ಅರಣ್ಯ ಉತ್ಪನ್ನಗಳು, ಅರಿಶಿನ, ಆಮ್ಲಾ, ಹಲ್ಡಿ ಮುಂತಾದ ಸಾಂಪ್ರದಾಯಿಕ ಭಾರತೀಯ ಗಿಡಮೂಲಿಕೆ ಖಾದ್ಯ ವಸ್ತುಗಳೂ ಇದರಲ್ಲಿ ಸೇರಿವೆ.
ಈ ಯೋಜನೆಯಲ್ಲಿ ರೈತರ ಉತ್ಪನ್ನಗಳನ್ನು ಸಂಶೋಧನೆಯ ಮೂಲಕ ಮೌಲ್ಯ ವರ್ಧಿಸಿ,ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಿ ಆ ಮೂಲಕ ರೈತರ ಆದಾಯವನ್ನು ವೃದ್ದಿಸುವ ಯೋಜನೆ ಆಗಿದೆ.