ಎಸ್. ಎಲ್. ಭೈರಪ್ಪ ನಮ್ಮ ಕಾಲದ ಮಹಾನ್ ಕಾದಂಬರಿಕಾರರಾದ ‘ಡಾ.ಎಸ್.ಎಲ್. ಭೈರಪ್ಪ’ನವರು ಜನಿಸಿದ್ದು 1931 ರ ಆಗಸ್ಟ್ 21 ರಂದು ಜನಿಸಿದರು. ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು. ಪ್ರೌಢಶಾಲೆಯಲ್ಲಿದ್ದಾಗಲೇ ಉದಯೋನ್ಮುಖ ಲೇಖಕರಾಗಿ ಬರೆದ “ಗತಜನ್ಮ ಮತ್ತೆರಡು ಕಾದಂಬರಿಗಳು” ಎಂಬ ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ‘ಉತ್ತರಕಾಂಡ’ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕನ್ನಡಿಗರಿಗೆ ನೀಡಿವೆ. ಅವರ ಪ್ರತಿ ಕಾದಂಬರಿಯೂ ಪುನರ್ ಮುದ್ರಣಗಳನ್ನು ಕಾಣುತ್ತಲೇ ಇರುವುದು ಮತ್ತು ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ಭಾಷೆಗಳಿಗೆ ಇವರ ಕೃತಿಗಳು ಭಾ಼ಷಾಂತರವಾಗಿರುವುದೇ ಅವರ ಜನಪ್ರಿಯತೆಗೆ ಹಿಡಿದ ಸಾಕ್ಷಿಯಾಗಿದೆ.
ವಯಸ್ಸು 5ರ ಆಸು ಪಾಸಿನಲ್ಲಿ ಅವರ ತಾಯಿಯೂ ಬಡತನ – ಪ್ಲೇಗ್ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಮತ್ತು ಮನೆಯಲ್ಲಿ ಹಿರಿಯ ಸಹೋದರನು ಸಹ ಮರಣವನ್ನು ಹೊಂದಿದಾಗ ತಾಯಿ ಅಣ್ಣ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ಕೈಯಲ್ಲಿ ಇವರನ್ನು ಎಳೆದುಕೊಂಡು ಓಡುತ್ತಿರುವ ದೃಶ್ಯವು ಇನ್ನೂ ಅವರ ಕಣ್ಣಿಗೆ ಕಟ್ಟಿದೆ ಎನ್ನುತಾರೆ ಭೈರಪ್ಪ. ಇದನ್ನು ಮುಂದೆ ತಮ್ಮ ಮಹಾಭಾರತದ ಕಾದಂಬರಿಯಾದ ಪರ್ವದಲ್ಲಿ ಭೀಮನು ಘಟೋದ್ಗಜನ ಮರಣವಾದಾಗ ಇದೇ ರೀತಿಯಾದ ಸ್ಥಿತಿಯನ್ನು ಅನುಭವಿಸುತ್ತಾನೆ ಎಂದು ತಮ್ಮ ಜೀವನದ ಅನುಭವಗಳನ್ನೇ ಕಾದಂಬರಿಯ ಪಾತ್ರಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯದಲ್ಲಿ ಭೈರಪ್ಪನವರು ನಿಸ್ಸಿಮರು.
ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವ ಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭಾವ ಇದರ ಬಗ್ಗೆಯೇ ಹಲವಾರು ಗ್ರಂಥಗಳು ಮೂಡಬಹುದಾದಷ್ಟು ಸಾಹಿತ್ಯ ವಲಯದಲ್ಲಿ ವಿವಿಧ ಚಿಂತಕರ ಅಭಿಪ್ರಾಯಗಳು ಪ್ರಚಲಿತವಿದೆ. ಮತ್ತು ಭೈರಪ್ಪನವರ ಮಾತಿನಲ್ಲೇ ಹೇಳುವುದಾದರೆ ಒಂದು ಕೃತಿಯನ್ನು ಪೂರ್ವ ತಯಾರಿ ಇಲ್ಲದೆ ರಚಿಸುದಕ್ಕಿಂತ ರಚಿಸದೆ ಇರುವುದು ಅತ್ಯಂತ ಉತ್ತಮ ಎಂಬುದಾಗಿ ಹೇಳುತ್ತಾರೆ. ಹೀಗಾಗಿ ತಮ್ಮ ಪ್ರತಿಯೊಂದು ಕೃತಿಯನ್ನು ರಚಿಸುವ ಮೊದಲು ಅದರ ಪೂರ್ವ ಅಧ್ಯಯನವನ್ನು ಮಾಡಿಯೇ ಕೃತಿಯನ್ನು ರಚಿಸುವ ಭೈರಪ್ಪನವರು ಯಾನ ಎಂಬ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೃತಿಯನ್ನು ರಚಿಸುವಾಗ ಪೂರ್ವ ತಯಾರಿಗಾಗಿ ಟಾಟಾ ಇನ್ಸ್ಟಟ್ಯೂಟ್ ಆಫ್ ಸೈಯ್ಸನಲ್ಲಿ ಫಲೋಶಿಪ್ ಪಡೆದುಕೊಂಡಿದ್ದರು ಎಂಬುದು ಇವರ ಅಧ್ಯಯನ ಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ನಾಡಿನಲ್ಲಿ ಸಾಮಾಜಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿರುವ ಡಾ. ಎಸ್. ಎಲ್. ಭೈರಪ್ಪನವರ ಹೆಚ್ಚಿನ ಆಸಕ್ತಿ ಕ್ಷೇತ್ರವೆಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಅವರ ‘ಮಂದ್ರ’ ಕಾದಂಬರಿಯಲ್ಲಿ ಸಂಗೀತದ ಕುರಿತಾದ ಆಸಕ್ತಿಗಳ ಸುದೀರ್ಘ ವಿಸ್ತಾರವನ್ನೇ ಕಾಣಬಹುದು. ಅವರು ‘ಗಂಗೂಬಾಯ್ ಹಾನಗಲ್’ ಎಂಬ ಗ್ರಂಥದ ಸಂಪಾದನೆಯನ್ನು ಮಾಡಿದ್ದಾರೆ ಎಂಬುದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.
ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ಬದುಕಿನ ಪಾತ್ರಗಳು ಎಲ್ಲೆಲ್ಲೂ ನಮ್ಮ ಕಣ್ಣ ಮುಂದೆ ಕಾಣುತ್ತಿರುವ ವ್ಯಕ್ತಿಗಳ ಹಾಗೇ ಇರುತ್ತವೆ. ಇದು ಅವರ ಮಹಾಭಾರತವನ್ನು ಇಂದಿನ ಕಾಲಕ್ಕೆ ಹೊಂದಿಸಿ ನೋಡುವಂತಹ ‘ಪರ್ವ’ ಕಾದಂಬರಿಯಂತಹ ಪಾತ್ರಗಳಲ್ಲೂ ಕಾಣಬರುತ್ತವೆ. ಅವರ ಕಾದಂಬರಿಗಳ ಭಾಷೆಯಲ್ಲಿರುವ ಗ್ರಾಮೀಣ, ನಗರ ಮತ್ತು ಇತ್ತೀಚಿನ ಆಧುನಿಕತೆಯವರೆಗಿನ ವರಸೆಯ ಸೊಗಡುಗಳಂತೂ ನಮ್ಮನ್ನು ಅಪೂರ್ವ ರೀತಿಯಲ್ಲಿ ಹಿಡಿದಿಟ್ಟುಕೊಂಡುಕೊಂಡು ಬಿಡುತ್ತವೆ. ಅವರ ಪ್ರತಿಯೊಂದು ಕಾದಂಬರಿಯೂ ನಾವು ಅದನ್ನು ತೆರೆದಾಗಿನಿಂದ ಅದನ್ನು ಓದು ಮುಗಿಸುವ ತನಕ ಕೆಳಗಿರಿಸಲು ಬಿಡುವುದೇ ಇಲ್ಲ. ಅಂತಹ ಭಾಷೆಯ ಸೊಗಸು, ಪಾತ್ರ ವ್ಯವಸ್ಥೆ ಮತ್ತು ಅಪೂರ್ವ ಕಥಾನಕಗುಣ ಅವರ ಬರಹಗಳಲ್ಲಿದೆ. ಇಷ್ಟು ತೀವ್ರವಾಗಿ ಓದುಗರನ್ನು ಆವರಿಸುವ ಕಥಾ ಶೈಲಿ, ಓದುಗರನ್ನು ಯಾವುದೋ ಭಾವುಕತೆ, ತಲ್ಲೀನತೆ, ಚಿಂತನೆಗೆ ಒಡ್ಡುವ ಮನೋಜ್ಞತೆ, ಸಾಹಿತ್ಯ ಲೋಕದಲ್ಲಿಯೇ ಅಪರೂಪವಾಗಿದ್ದು, ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.
ಭಾರತೀಯ ಮೌಲ್ಯಗಳೊಂದಿಗೆ ಸದಾ ಹೊಂದಿಕೊಂಡಿರುವ ಇವರ ಲೇಖನಗಳು ದೇಶಿಯ ಪರಂಪರೆಯನ್ನು ತಮ್ಮ ಪಾತ್ರಗಳ ಮೂಲಕ ಓದುಗರನ್ನು ವೈಚಾರಿಕತೆಯ ನೆಲೆಗಟ್ಟಿಗೆ ತಂದು ನಿಲ್ಲಿಸುತ್ತಾರೆ.
ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ಸಹಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆಗಟ್ಟಿನಿಂತಿದೆ.
ಬದುಕು ಮತ್ತು ಅನುಭವಗಳ ಸಂಕೀರ್ಣತೆಯನ್ನು ಗ್ರಹಿಸಲು ಮತ್ತು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾದಂಬರಿ ಉಪಯುಕ್ತ ಮಾಧ್ಯಮ ಎಂದು ಭಾವಿಸುವ ಭೈರಪ್ಪನವರು ‘ಧರ್ಮಶ್ರೀ’ಯಿಂದ ಮೊದಲ್ಗೊಂಡು ‘ಉತ್ತರಕಾಂಡ’ದವರೆಗೆ ಇಪ್ಪತ್ಮೂರು ಮಹತ್ವಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ. ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’, ‘ನಿರಾಕರಣ’, ‘ಗ್ರಹಣ’, ‘ದಾಟು’, ‘ಅನ್ವೇಷಣ’, ‘ಪರ್ವ’, ‘ನೆಲೆ’, ‘ಸಾಕ್ಷಿ’, ‘ಅಂಚು’, ‘ತಂತು’, ‘ಸಾರ್ಥ’, ‘ಮಂದ್ರ’, ‘ಆವರಣ’, ‘ಕವಲು’ , ‘ಯಾನ’, ‘ಉತ್ತರಕಾಂಡ’ ಇವು ಡಾ. ಎಸ್. ಎಲ್. ಭೈರಪ್ಪನವರ ಇದುವರೆಗಿನ ಪ್ರಕಟಿತ ಕಾದಂಬರಿಗಳು. ಭೈರಪ್ಪನವರ ಬಹುತೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಮರಾಠಿಯಂತಹ ಹಲವು ಭಾಷಿಗರಂತೂ ಭೈರಪ್ಪನವರನ್ನು ತಮ್ಮ ಭಾಷೆಯ ಶ್ರೇಷ್ಠ ಕೃತಿಗಾರರಂತೆಯೇ ಅಭಿಮಾನಿಸುತ್ತಾರೆ.
ಇತ್ತೀಚಿನ ವರ್ಷದಲ್ಲಿ ಸಂದಿರುವ ಪದ್ಮಭೂಷಣ , ಸಾಹಿತ್ಯಕ ಹಿರಿಯ ಪ್ರಶಸ್ತಿ ‘ಸರಸ್ವತಿ ಸಮ್ಮಾನ’ ಸೇರಿದಂತೆ ಹಲವು ರೀತಿಯ ಮನ್ನಣೆಗಳು, ಪ್ರಶಸ್ತಿಗಳು ಭೈರಪ್ಪನವರಿಗೆ ಬಂದಿವೆ. ಜ್ಞಾನಪೀಠ ಅವರಿಗೆ ಇನ್ನೂ ಸಂದಿಲ್ಲ ಎಂಬ ಬಗ್ಗೆ ಅವರ ಸಾಹಿತ್ಯ ಪ್ರೇಮಿಗಳಿಗೆ ಅಸಹನೆಯಿದೆ. ಪ್ರಶಸ್ತಿಗಳು ಕೇವಲ ಒಂದೆರಡು ದಿನದ ಉತ್ಸವಗಳಿಗಿಂತ ಮೇಲೆ ಮುಟ್ಟಲಾರವು. ಆದರೆ ಓದುಗರ ಹೃದಯಾಂತರಾಳವನ್ನು ಇಷ್ಟು ಅದಮ್ಯವಾಗಿ ಆಕ್ರಮಿಸಿಕೊಂಡಿರುವ ಮತ್ತೊಬ್ಬ ಬರಹಗಾರರಿಲ್ಲ ಎಂಬುದು ಮಾತ್ರ ಸಾರ್ವಕಾಲಿಕ ಸತ್ಯ.ಭೈರಪ್ಪನವರ ಕಾದಂಬರಿಗಳನ್ನು ಅವಲೋಕಿಸಿದವರಿಗೆ, ಅವರು ಕನ್ನಡ ಕಾದಂಬರಿ ಲೋಕಕ್ಕೆ ವಿಶಿಷ್ಟ ಕಾಣಿಕೆಗಳನ್ನು ನೀಡಿ, ಕಾದಂಬರಿಯನ್ನು ಲಘು ಮನರಂಜನೆಯ ಮಟ್ಟದಿಂದ ಮಹಾಕಾವ್ಯದ ಮಟ್ಟಕ್ಕೆ ಕರೆದೊಯ್ದ ಬೆರಳೆಣಿಕೆಯಷ್ಟು ಮಹಾನ್ ಲೇಖಕರಲ್ಲಿ ಒಬ್ಬರಾಗಿದ್ದಾರೆ ಎನಿಸದಿರದು. ಕನ್ನಡದಲ್ಲಿ ಚದುರಂಗ, ಕುವೆಂಪು, ಗೋಕಾಕ್, ರಾವ್ ಬಹದ್ದೂರ್, ಅನಕೃ, ಕಟ್ಟೀಮನಿ, ದೇವುಡು, ಶ್ರೀರಂಗ, ಮೊದಲಾದವರು ತಮ್ಮ ಬಾಳಿನ ಒಂದೆರಡು ಉತ್ಕಟ ಕ್ಷಣಗಳ ಪರಿಣಾಮವಾಗಿ ಒಂದು ಅಥವಾ ಎರಡು ಮೇರು ಕೃತಿಗಳನ್ನು ಕನ್ನಡ ಕಾದಂಬರಿ ಲೋಕಕ್ಕೆ ನೀಡಿದ್ದರೆ, ಕಾರಂತರಂತೆ ಭೈರಪ್ಪನವರು ಹಲವಾರು ಬೃಹತ್ತಾದ, ಮಹತ್ತಾದ ಅತಿ ಶ್ರೇಷ್ಠ ಗದ್ಯ ಮಹಾಕಾವ್ಯಗಳನ್ನು ಅರ್ಥಾತ್ ಕಾದಂಬರಿಗಳನ್ನು ನೀಡಿದವರು 92 ವರ್ಷದ ಈ ಮಹಾನ್ ಲೇಖಕನಿಗೆ ಇನ್ನೂ ಹೆಚ್ಚಿನ ಆರೋಗ್ಯವನ್ನು ನೀಡಲೆಂದು ಹಾರೈಕೆ.