ವಯಸ್ಸಾಗುತ್ತಾ ಹೋದಂತೆ ನಮ್ಮ ಮೂಳೆಗಳು ಬಲಿಷ್ಠತೆಯನ್ನು ಕಳೆದುಕೊಳ್ಳುತ್ತದೆ. ಮೂಳೆಗಳು ಮತ್ತು ಕೀಲುಗಳು ನಮ್ಮ ದೇಹದ ರಚನೆಗೆ ಮೂಲಭೂತ ಅಗತ್ಯಗಳಾಗಿವೆ. ಅಲ್ಲದೆ, ನಮ್ಮ ಅಂಗಗಳನ್ನು ರಕ್ಷಿಸುವಲ್ಲಿ, ನಮ್ಮ ಸ್ನಾಯುಗಳನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ, ನಮ್ಮ ದೇಹಕ್ಕೆ ಮೂಳೆ ಆರೈಕೆ ಅತ್ಯಗತ್ಯವಾಗಿರುತ್ತದೆ.
40 ವರ್ಷ ವಯಸ್ಸಿನವರೆಗೆ, ನಮ್ಮ ದೇಹದ ಮೂಳೆಗಳು ಆರೋಗ್ಯವಾಗಿರುತ್ತವೆ. ನಂತರ ದಿನಕಳೆದಂತೆ ಆಸ್ಟಿಯೊಪೊರೋಸಿಸ್, ಆಸ್ಟಿಯೋಪೆಟ್ರೋಸಿಸ್ ಮತ್ತು ಆಸ್ಟಿಯೋಮಲೇಶಿಯಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಈ ರೀತಿ ಅನಾರೋಗ್ಯಕ್ಕೀಡಾದ ಮೂಳೆಗಳು ದುರ್ಬಲವಾಗಿರುತ್ತವೆ. ವಯಸ್ಸಾದಂತೆ ಮೂಳೆಗಳು ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ.
ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಅಂಶಗಳು:
ಕಡಿಮೆ ಕ್ಯಾಲ್ಸಿಯಂ ಆಹಾರ ಸೇವಿಸುವುದರಿಂದ ಮೂಳೆ ಸಾಂದ್ರತೆಯು ಕಡಿಮೆಯಾಗುತ್ತದೆ.
ದೈಹಿಕ ಚಟುವಟಿಕೆಯ ಕೊರತೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ನಿಷ್ಕ್ರಿಯ ಜನರು ಆಸ್ಟಿಯೊಪೊರೋಸಿಸ್ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಭಾರಿ ಪ್ರಮಾಣದ ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ನೀವು ಅತ್ಯಂತ ತೆಳ್ಳಗಿದ್ದರೆ ಅಥವಾ ಕಡಿಮೆ ಮೂಳೆ ದ್ರವ್ಯರಾಶಿಯ ಕಾರಣದಿಂದಾಗಿ ಸಣ್ಣ ದೇಹದ ಚೌಕಟ್ಟನ್ನು ಹೊಂದಿದ್ದರೆ ನೀವು ಕಳಪೆ ಮೂಳೆ ಆರೋಗ್ಯವನ್ನು ಹೊಂದಿರಬಹುದು.
ವಯಸ್ಸಾಗಲು ಪ್ರಾರಂಭಿಸಿದ ನಂತರ ಮೂಳೆಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ.
ಥೈರಾಯ್ಡ್ ಹಾರ್ಮೋನುಗಳ ಹೆಚ್ಚಳದಂತಹ ಸಮಸ್ಯೆಗಳು ಮೂಳೆ ನಷ್ಟಕ್ಕೆ ಕಾರಣವಾಗಬಹುದು. ಮಹಿಳೆಯರಲ್ಲಿ, ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಹಾರ್ಮೋನು ಮಟ್ಟವು ಕಡಿಮೆಯಾಗುವುದರಿಂದ ಮೂಳೆಯ ಹಾನಿಯು ಹೆಚ್ಚಾಗಬಹುದಾಗಿದೆ.
ನಿಮ್ಮ ಮೂಳೆಯ ಆರೋಗ್ಯವನ್ನು ಸುಧಾರಿಸುವ ಬಗೆ:
ವಿಟಮಿನ್ ಡಿ ಸೇವನೆಯನ್ನು ಹೆಚ್ಚಿಸಿ: ಮೂಳೆಯ ಆರೋಗ್ಯವನ್ನು ಸುಧಾರಿಸಲು ವಿಟಮಿನ್ ಡಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ನಿಮ್ಮ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಹೆಚ್ಚಿಸಬೇಕು
ಮತ್ತು ಚೀಸ್, ಯಕೃತ್ತು ಮತ್ತು ಫ್ಯಾಟಿ ಫಿಶ್ಗಳಂತಹ ಆಹಾರ ಪೂರಕಗಳನ್ನು ಸೇವಿಸಿ.
ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ: ವಾಕಿಂಗ್, ಜಾಗಿಂಗ್, ರನ್ನಿಂಗ್ ಮತ್ತು ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ಚಟುವಟಿಕೆಗಳು ನಿಮಗೆ ಬಲಿಷ್ಠ ಮೂಳೆಗಳನ್ನು ರೂಪಿಸಲು ಮತ್ತು ನಿಮ್ಮ ದೇಹವನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ. ದಿನಕ್ಕೆ 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು.ಇವು ಮೂಳೆ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಲು ದೇಹಕ್ಕೆ ಸಹಾಯ ಮಾಡುತ್ತದೆ.
ಸಮತೋಲಿತ ಆಹಾರ ಮತ್ತು ಆರೋಗ್ಯಕರ ತೂಕ, ಜೀವನಶೈಲಿಯನ್ನು ಕಾಪಾಡಿಕೊಳ್ಳಿ: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಡಿಮೆ ತೂಕ ಅಥವಾ ಅಧಿಕ ತೂಕವನ್ನು ತಪ್ಪಿಸಬೇಕು. ಏಕೆಂದರೆ, ಎರಡೂ ರೀತಿಯೂ ಮೂಳೆಗಳು ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದಾದ ಸಾಧ್ಯತೆ ಇರುತ್ತದೆ.
ವಿಟಮಿನ್ ಸಿ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳು ಮೂಳೆಯ ಬಲವನ್ನು ಹೆಚ್ಚಿಸುತ್ತವೆ. ಹೆಚ್ಚಿನ ಪ್ರೋಟೀನ್ ಸೇವನೆ ಕೂಡ ರಕ್ತದಲ್ಲಿ ಅಸಿಡಿಟಿಗೆ ಕಾರಣವಾಗುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಬೇಕು. ಆದ್ದರಿಂದ, ವೈದ್ಯರು ಸೂಚಿಸಿದಂತೆ ಸರಿಯಾದ ಪ್ರಮಾಣದ ಪ್ರೋಟೀನ್ ಅನ್ನು ಮಾತ್ರ ಸೇವಿಸಿ. ಕ್ಯಾಲ್ಸಿಯಂ ಭರಿತ ಆಹಾರ ಸೇವನೆಯು ಹಳೆಯ ಮೂಳೆ ಕೋಶಗಳನ್ನು ವೇಗವಾಗಿ ಹೊಸದರೊಂದಿಗೆ ಬದಲಾಯಿಸಲು ಸಹಾಯ ಮಾಡುತ್ತದೆ
ಯೋಗ, ಧ್ಯಾನ ಮತ್ತು ನಡಿಗೆಯಂತಹ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತವೆ ಮತ್ತು ದೇಹವನ್ನು ಸಕ್ರಿಯವಾಗಿ ಇರಿಸುತ್ತದೆ. ನೀವು ಎಷ್ಟು ಹೆಚ್ಚು ಕೆಲಸ ಮಾಡುತ್ತೀರೋ ಅಷ್ಟು ನಿಮಗೆ ಮತ್ತು ನಿಮ್ಮ ಮೂಳೆಗಳಿಗೆ ಉತ್ತಮವಾಗಿರುತ್ತದೆ.
ಕೊನೆಯದಾಗಿ, ನೀವು ಯಾವುದೇ ಮೂಳೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮೂಳೆ ಸಾಂದ್ರತೆಯ ಪರೀಕ್ಷೆಗಾಗಿ ಒಳ್ಳೆಯ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.