ಚಂಢಿಗಢ: ಸರ್ಕಾರಿ ಅಧಿಕಾರಿಗಳು “ತೆರಿಗೆದಾರರ ವೆಚ್ಚದಲ್ಲಿ ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ ಮಾಡುವ ಬದಲು ಸರಳ ಜೀವನ ನಡೆಸುವಂತೆ” ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿ ಲಾಲ್ ಪುರೋಹಿತ್ ಅವರು ಕರೆ ನೀಡಿದ್ದಾರೆ. ತಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ನಿಯಮ ಜಾರಿಗೆ ತರುವಂತೆ ವಿನಂತಿಸುವುದಾಗಿಯೂ ಹೇಳಿದ್ದಾರೆ.
ಎಕಾನಮಿ ಕ್ಲಾಸ್ನಲ್ಲಿ 3,000 ರೂಪಾಯಿ ವೆಚ್ಚದ ಮಾರ್ಗಕ್ಕೆ ಬಿಸಿನೆಸ್ ಕ್ಲಾಸ್ನಲ್ಲಿ 35,000 ರೂಪಾಯಿ ಟಿಕೆಟ್ ಖರ್ಚು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪುರೋಹಿತ್ ಹೇಳಿದ್ದಾರೆ.
ಚಂಡೀಗಢದಿಂದ ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಸರ್ಕಾರಿ ಅಧಿಕಾರಿಗಳಿಗೆ ಆಗಸ್ಟ್ 9 ರಿಂದ ವಿಮಾನ ಪ್ರಯಾಣ ಮತ್ತು ಹೋಟೆಲ್ ವಾಸ್ತವ್ಯವನ್ನು ಅವರು ನಿಷೇಧಿಸಿದ್ದಾರೆ. “ನಾನು ಅವರಿಗೆ ಸರ್ಕಾರಿ ಹಣ ಸಾರ್ವಜನಿಕ ಹಣ ಎಂದು ಹೇಳಿದ್ದೇನೆ. ಅದು ನಮ್ಮ ಹಣವಲ್ಲ. ನೀವು ಸರ್ಕಾರದ ವೆಚ್ಚದಲ್ಲಿ ಪ್ರಯಾಣಿಸುವಾಗ, ನೀವು ಬಿಸಿನೆಸ್ ಕ್ಲಾಸ್ ನ ದುಬಾರಿ ಪ್ರಯಾಣ ಆಯ್ಕೆ ಮಾಡಿಕೊಳ್ಳುತ್ತೀರಿ ಮತ್ತು ನೀವು ನಿಮ್ಮ ಸ್ವಂತ ಹಣದಲ್ಲಿ ಹೋಗಬೇಕಾದಾಗ, ನೀವು ರೈಲು ಮತ್ತು ಬಸ್ಸು ಪ್ರಯಾಣ ಮಾಡುತ್ತೀರಿ ಹಾಗಾದರೆ ಇಲ್ಲಿ ಅದೇ ಸಂಯಮವನ್ನು ಏಕೆ ಅನುಸರಿಸಬಾರದು? ನೀವು ಅಧಿಕಾರಿಗಳು ಟ್ರಸ್ಟಿಗಳಾಗಿರಬೇಕು. ಜನರು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಸಾರ್ವಜನಿಕ ಹಣವನ್ನು ಉಳಿಸುವುದು ಮತ್ತು ಪ್ರಾಮಾಣಿಕವಾಗಿರುವುದು ಮುಂದಿನ ಮಾರ್ಗವಾಗಿದೆ ಮತ್ತು ತೆರಿಗೆದಾರರ ವೆಚ್ಚದಲ್ಲಿ ಬಿಸಿನೆಸ್ ಕ್ಲಾಸ್ ಪ್ರಯಾಣವನ್ನು ಎಲ್ಲರಿಗೂ ನಿಷೇಧಿಸಬೇಕು ಎಂದು ನಾನು ಹೇಳುತ್ತೇನೆ. ಹಾಗಾಗಿ ನಾನು ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿಯಾದಾಗ, ಸಾಧ್ಯವಾದರೆ, ಇದನ್ನು ನಿಷೇಧಿಸಲು ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ಕಚೇರಿ ಆದೇಶವನ್ನು ನೀಡುವಂತೆ ನಾನು ವಿನಂತಿಸುತ್ತೇನೆ. ಆರ್ಥಿಕವಾಗಿ ಮಾಡಬಹುದಾದ ಅದೇ ಪ್ರಯಾಣದಲ್ಲಿ ಸಾವಿರಾರು ಜನರ ಹಣವನ್ನು ಏಕೆ ದುರ್ವ್ಯಯ ಮಾಡಬೇಕು? ಅಹಂಕಾರ ಬಿಟ್ಟು ವಿನಯವಂತರಾಗಿ ಉಳಿಯಬೇಕು” ಎಂದು ಪುರೋಹಿತ್ ಹೇಳಿದ್ದಾರೆ.
ನಾನು ಯಾವತ್ತೂ ಬಿಸಿನೆಸ್ ಕ್ಲಾಸ್ ಪ್ರಯಾಣ ಮಾಡಿಲ್ಲ. ಚಂಡೀಗಢ-ದೆಹಲಿ ಪ್ರಯಾಣಕ್ಕೂ ಅಧಿಕಾರಿಗಳು ಬಿಸಿನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. “ನಾನು 2016 ರಲ್ಲಿ ಅಸ್ಸಾಂನ ಗವರ್ನರ್ ಆಗಿದ್ದಾಗ, ನಾನು ಯಾವಾಗಲೂ ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದೆ. ಒಂದು ದಿನ ನಾನು ಗುವಾಹಟಿಯಿಂದ ದೆಹಲಿಗೆ ಪ್ರಯಾಣಿಸುವಾಗ ಎಕಾನಮಿ ಕ್ಲಾಸ್ ಭರ್ತಿ ಆಗಿದೆ ಎಂದು ನನಗೆ ತಿಳಸಿದರು. ಎಕಾನಮಿ ಕ್ಲಾಸ್ ದರ 5,000 ರೂ ಮಾತ್ರ ಆದರೆ ಬ್ಯುಸಿನೆಸ್ ಕ್ಲಾಸ್ ಸೀಟು ಸಿಗುತ್ತೆ ಅಂದರು, ವ್ಯತ್ಯಾಸ ಎಷ್ಟು ಅಂತ ಕೇಳಿದೆ. ಅವರು 35,000 ರೂ ಎಂದು ಹೇಳಿದರು ಮತ್ತು ನಾನು ಅದರಲ್ಲಿ ಪ್ರಯಾಣಿಸದೇ ಮುಂದಿನ ವಿಮಾನದಲ್ಲಿ ಟಿಕೆಟ್ ಪಡೆದು ಪ್ರಯಾಣಿಸಿದೆ. ನಾನು ಏಳು ವರ್ಷಗಳ ಕಾಲ ರಾಜ್ಯಪಾಲನಾಗಿದ್ದೇನೆ ಮತ್ತು ನನ್ನ ಸಂಪೂರ್ಣ ಅಧಿಕಾರಾವಧಿಯಲ್ಲಿ ನಾನು ಎಂದಿಗೂ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿಲ್ಲ ”ಎಂದು ಪುರೋಹಿತ್ ಪಂಜಾಬ್ ರಾಜಭವನದಲ್ಲಿ ಹೇಳಿದರು.
ಅವರು ಮುಂದುವರಿದು ಹೇಳಿದರು, “ಈಗ, ನೀವು ಚಂಡೀಗಢದಿಂದ ದೆಹಲಿಗೆ ಸಾಮಾನ್ಯ ಟಿಕೆಟ್ ದರ 3,000 ರೂ., ಬಿಸಿನೆಸ್ ಕ್ಲಾಸ್ ಟಿಕೆಟ್ 25,000 ರೂ. ಆಗಿದೆ. ಇದು ತೆರಿಗೆದಾರರ ಕಷ್ಟಪಟ್ಟು ದುಡಿದ ಹಣ. ಸರ್ಕಾರದ ಎಲ್ಲಾ ಅಧಿಕಾರಿಗಳು ಸಾರ್ವಜನಿಕ ಹಣವನ್ನು ಉಳಿಸಬೇಕು. ಹಾಗಾಗಿ ಅವರು ದೆಹಲಿಗೆ ಪ್ರಯಾಣಿಸಬೇಕಾದರೆ, ಸದ್ಯಕ್ಕೆ ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತಿರಿ ಎಂದು ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಂತಹ ಉತ್ತಮ ರೈಲುಗಳು ಲಭ್ಯವಿವೆ ಮತ್ತು ಪ್ರಯಾಣದ ಅವಧಿ ಕೇವಲ ಮೂರುವರೆ ಗಂಟೆ ಆಗಿದೆ.
ವಿಮಾನದಲ್ಲಿ ಹೋಗುವಾಗಲೂ ಸುಮಾರು ಮೂರೂವರೆ ಗಂಟೆಗಳು ಮಾತ್ರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ತಪಾಸಣೆ ಮತ್ತು ವಿಮಾನ ನಿಲ್ದಾಣವನ್ನು ತಲುಪುವಾಗ, ಒಂದೂವರೆ ಗಂಟೆ ಮೊದಲು ಹೋಗಬೇಕಿದ್ದು ಪ್ರಯಾಣದ ಅವಧಿಯೂ ಸೇರಿದರೆ ಅದಕ್ಕೂ ಮೂರುವರೆ ಘಂಟೆ ಬೇಕಾಗುತ್ತದೆ ಎಂದು ಅವರು ಹೇಳಿದರು.
“ರೈಲು ಪ್ರಯಾಣವು ತುಂಬಾ ಆರಾಮದಾಯಕವಾಗಿದೆ. ಅಧಿಕಾರಿಗಳು ಅದರ ಮೂಲಕ ಹೋಗಬಹುದು. ಅವರು ಸರಳ ಜೀವನ ನಡೆಸಬೇಕು. ನಾನು ಪತ್ರಿಕೆಯೊಂದರಲ್ಲಿ ಓದಿದ್ದೇನೆ, ಮಹಾತ್ಮ ಗಾಂಧಿಯವರು ಮೂರನೇ ತರಗತಿಯನ್ನು ಏಕೆ ಬುಕ್ ಮಾಡಿದ್ದೀರಿ ಎಂದು ಕೇಳಿದಾಗ, ನಾಲ್ಕನೇ ತರಗತಿ ಇಲ್ಲ ಎಂದು ಉತ್ತರ ನೀಡಿದ್ದರು. ಕೇವಲ 45 ನಿಮಿಷಗಳ ವಿಮಾನ ಪ್ರಯಾಣಕ್ಕೆ 25,000 ರೂಪಾಯಿ ಖರ್ಚು ಮಾಡುವುದು ಸ್ವೀಕಾರಾರ್ಹವಲ್ಲ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಪುರೋಹಿತ್ ಹೇಳಿದರು.
ಆಡಳಿತಾಧಿಕಾರಿಗಳ ಈ ಆದೇಶಕ್ಕೆ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.